ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ- ಧಾರವಾಡ: 25 ಭರವಸೆಗಳ ಬಿಜೆಪಿ ಪ್ರಣಾಳಿಕೆ

ಒಂದು ವರ್ಷದಲ್ಲಿ 25 ಸಾವಿರ ಮನೆಗಳಿಗೆ ಗ್ಯಾಸ್ ಪೈಪ್‌ ಲೈನ್‌ ಸಂಪರ್ಕದ ಭರವಸೆ
Last Updated 29 ಆಗಸ್ಟ್ 2021, 13:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಸಂಕಲ್ಪದೊಂದಿಗೆ 25 ಭರವಸೆಯುಳ್ಳ ಚುನಾವಣೆ ಪ್ರಣಾಳಿಕೆಯನ್ನು ಬಿಜೆಪಿ ಮುಖಂಡರು ಭಾನುವಾರ ನಗರದಲ್ಲಿ ಬಿಡುಗಡೆ ಮಾಡಿದರು.

ನಿರಂತರ ಕುಡಿಯುವ ನೀರು ಯೋಜನೆ, ನೀರಿನ ಕರದ ಮೇಲಿನ ದಂಡ ಮನ್ನಾ, ಕಸಮುಕ್ತ ನಗರ, ಮೇಲ್ಸೇತುವೆ ನಿರ್ಮಾಣ, ಸ್ಮಾರ್ಟ್ ಸಿಟಿ ಯೋಜನೆ ಸಮರ್ಪಕ ಅನುಷ್ಠಾನ, ಜನಸ್ನೇಹಿ ಆಡಳಿತಕ್ಕೆ ಎಚ್‌ಡಿಎಂಸಿ–ಇ–ಗವರ್ನೆನ್ಸ್ ಆ್ಯಪ್ ವ್ಯವಸ್ಥೆ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಭರವಸೆಗಳು.

ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಸ್ವಚ್ಛ-ಸುಂದರ- ಆರೋಗ್ಯಪೂರ್ಣ ನಗರಕ್ಕಾಗಿ ಏನೆಲ್ಲ ದೃಢ ಸಂಕಲ್ಪ ಮಾಡಿದ್ದೇವೆ ಎನ್ನುವ ಮಾಹಿತಿ ಪ್ರಣಾಳಿಕೆಯಲ್ಲಿ ಇಟ್ಟಿದ್ದೇವೆ’ ಎಂದು ತಿಳಿಸಿದರು.

‘ಬಿಜೆಪಿ ಆಡಳಿತದಲ್ಲಿ ಇದ್ದಾಗಲೇ ಮಹತ್ವದ ಯೋಜನೆಗಳು ಅವಳಿನಗರದಲ್ಲಿ ಅನುಷ್ಠಾನಗೊಂಡಿವೆ. ನೈರುತ್ಯ ರೈಲ್ವೆ ವಲಯ, ಐಐಐಟಿ, ಬಿಆರ್‌ಟಿಎಸ್, ಸ್ಮಾರ್ಟ್ ಸಿಟಿ ಹೀಗೆ ಅನೇಕ ಪ್ರಮುಖ ಯೋಜನೆ ಬಿಜೆಪಿ ಕೊಡುಗೆ. ತಾರಿಹಾಳದ 15 ಎಕರೆ ಜಾಗದಲ್ಲಿ ₹150 ಕೋಟಿ ವೆಚ್ಚದಲ್ಲಿ ಕ್ರೀಡಾ ಗ್ರಾಮ ನಿರ್ಮಾಣವಾಗಲಿದ್ದು, ಟೆಂಡರ್ ಪ್ರಕ್ರಿಯೆ ಸಹ ಮುಕ್ತಾಯವಾಗಿದೆ. ಈಗಾಗಲೇ 11 ಸಾವಿರ ಮನೆಗಳಿಗೆ ಗ್ಯಾಸ್ ಪೈಪ್ ಲೈನ್ ಸಂಪರ್ಕ ಕಲ್ಪಿಸಲಾಗಿದೆ. ವರ್ಷದ ಒಳಗೆ 25 ಸಾವಿರ ಮನೆಗಳಿಗೆ ಸಂಪರ್ಕ ನೀಡಲಾಗುವುದು‌’ ಎಂದು ತಿಳಿಸಿದರು.

‘70 ವರ್ಷ ದೇಶ ಆಳಿದ ಕಾಂಗ್ರೆಸ್‌ ಹುಬ್ಬಳ್ಳಿ–ಧಾರವಾಡಕ್ಕೆ ಏನು ಕೊಡುಗೆ ನೀಡಿದೆ’ ಎಂದು ಪ್ರಶ್ನಿಸಿದ ಸಚಿವ ಜೋಶಿ, ‘ಶೇ 20ರಷ್ಟು ಒಳ ಚರಂಡಿ ಸಹ ನಗರದಲ್ಲಿ ಇರಲಿಲ್ಲ. ಇದೀಗ ಬಹುತೇಕ ಎಲ್ಲ ಕಡೆ ಒಳಚರಂಡಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಒಂದೇ ಒಂದು ರಸ್ತೆ ಮಾಡಲು ಕಾಂಗ್ರೆಸ್‌ನಿಂದ ಸಾಧ್ಯವಾಗಿಲ್ಲ. 2013ರಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌ಗೆ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಗಿರಲಿಲ್ಲ. ನಂತರ ಬಿಜೆಪಿ ಅನುಷ್ಠಾನ ಮಾಡಿ, ಇದೀಗ ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸಲಾಗುತ್ತಿದೆ. ಧಾರವಾಡಕ್ಕೆ ಐಐಐಟಿ ಬೇಡ ಎಂದು ಪತ್ರ ಬರೆದ ಸಿದ್ದರಾಮಯ್ಯರು, ಈಗ ಅದನ್ನು ತಾವೇ ತಂದಿದ್ದು ಎಂದು ಹೇಳುತ್ತಾರೆ. ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಗೊತ್ತಿದ್ದೇ ಕಾಂಗ್ರೆಸ್ ಮುಖಂಡರು ಆಕಾಶದಿಂದ ಚಂದ್ರನನ್ನು ತಂದು ಕೊಡುತ್ತೇನೆ ಎನ್ನುವ ಭರವಸೆ ನೀಡುತ್ತಿದ್ದಾರೆ’ ಎಂದು’ ವ್ಯಂಗ್ಯವಾಡಿದರು.

‘ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಚುನಾವಣೆ ನಂತರ ಸರಿಪಡಿಸಲಾಗುತ್ತದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಈಗಾಗಲೇ ಆರಂಭವಾಗಿರುವ ರಸ್ತೆ ಕಾಮಗಾರಿ ನಡೆಯುತ್ತಿದೆ. ಬೇಂದ್ರೆ ಸಾರಿಗೆಯನ್ನು ಲಾಭದಾಯಕ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕೊಟ್ಟಿದ್ದು ಸಾರಿಗೆ ಇಲಾಖೆ. ಆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಲಾಗುವುದು. ಚನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣದ ಕುರಿತು ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಯಾವುದೇ ಸಲಹೆ, ಸೂಚನೆಗಳಿಗೆ ಮುಕ್ತ ಅವಕಾಶವಿದೆ’ ಎಂದು ಹೇಳಿದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಜಗದೀಶ ಶೆಟ್ಟರ್‌, ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ್‌, ನಾರಯಣಸಾ ಭಾಂಡಗೆ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಇದ್ದರು.

ಪ್ರಣಾಳಿಕೆಯಲ್ಲಿ ಬಿಆರ್‌ಟಿಎಸ್‌ ವಿಷಯವೇ ಇಲ್ಲ!

ಹುಬ್ಬಳ್ಳಿ: ಅವಳಿನಗರದ ಅಭಿವೃದ್ಧಿ ಕುರಿತು ಜಗದೀಶ ಶೆಟ್ಟರ್‌ ಪದೇ ಪದೇ ಹೇಳುತ್ತಿದ್ದ ಬಿಆರ್‌ಟಿಎಸ್‌ ಯೋಜನೆ ಕುರಿತು ಒಂದೇ ಒಂದು ಪದ ಸಹ ಬಿಜೆಪಿ ಭಾನುವಾರ ಬಿಡುಗಡೆ ಮಾಡಿದ ಚುನಾವಣೆ ಪ್ರಣಾಳಿಕೆಯಲ್ಲಿ ಇಲ್ಲ. ಇದು ಪಕ್ಷದ ಕೆಲವು ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ, ಶಾಸಕರಾದ ಅರವಿಂದ ಬೆಲ್ಲದ ಮತ್ತು ಜಗದಿಶ ಶೆಟ್ಟರ್‌ ನಡುವಿನ ಮುಸುಕಿನ ಗುದ್ದಾಟಕ್ಕೂ ಸಾಕ್ಷಿಯಾಗಿದೆ ಎಂದು ಪಕ್ಷದ ವಲಯದಿಂದಲೇ ಕೇಳಿ ಬರುತ್ತಿದೆ.

ಬಿಆರ್‌ಟಿಎಸ್‌ ಅವೈಜ್ಞಾನಿಕ ಕಾಮಗಾರಿ ಎಂದು ಶಾಸಕ ಅರವಿಂದ ಬೆಲ್ಲದ ಅವರು ಟೀಕಿಸುತ್ತ ಬಂದಿದ್ದರು. ಅವರೇ ಮಹಾನಗರ ಬಿಜೆಪಿ ಅಧ್ಯಕ್ಷರೂ ಆಗಿರುವುದರಿಂದ ಚುನಾವಣೆ ಪ್ರಣಾಳಿಕೆಯಲ್ಲಿ ಬಿಆರ್‌ಟಿಎಸ್‌ ವಿಷಯ ಪ್ರಸ್ತಾಪಿಸುವುದು ಬೇಡ ಎಂದು ಹೇಳಿದ್ದರು ಎಂದು ಪಕ್ಷದ ಮೂಲಗಳು ಹೇಳುತ್ತವೆ.

ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಜೋಶಿ, ‘ಪ್ರಣಾಳಿಕೆ ಸರಿಯಾಗಿ ನೋಡಿಲ್ಲ, ಬಿಆರ್‌ಟಿಎಸ್‌ ಬಗ್ಗೆಯೂ ಅದರಲ್ಲಿ ತಿಳಿಸಲಾಗಿದೆ. ಸರಿಯಾಗಿ ನೋಡಿ’ ಎಂದು ಹಾರಿಕೆ ಉತ್ತರ ನೀಡಿದರು.

‘ಬಿಆರ್‌ಟಿಎಸ್‌ ಉತ್ತಮ ಯೋಜನೆ. ಆದರೆ, ಕೆಲವು ಕಡೆ ನ್ಯೂನತೆಗಳಿದ್ದು ಸರಿಪಡಿಸಲಾಗುತ್ತಿದೆ. ಯೋಜನೆಯನ್ನು ಅಧ್ಯಯನ ಮಾಡಿ ಸರಿ ಪಡಿಸಲು ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT