ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ: ಪ್ರಲ್ಹಾದ ಜೋಶಿ

Published 19 ಆಗಸ್ಟ್ 2023, 5:14 IST
Last Updated 19 ಆಗಸ್ಟ್ 2023, 5:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಿದ್ಯುತ್‌ ಕಡಿತ, ಕಾವೇರಿ ಜಲವಿವಾದ, ಅಭಿವೃದ್ಧಿಗೆ ಅನುದಾನ ಕೊರತೆ, ಭ್ರಷ್ಟಾಚಾರ, ಗ್ಯಾರಂಟಿ ಯೋಜನೆಗಳ ಗೊಂದಲ ಮರೆಮಾಚಲು ಕಾಂಗ್ರೆಸ್‌ನವರು, ಬಿಜೆಪಿ ಶಾಸಕರು ತಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

‘ಶಾಸಕರಾದ ಶಿವರಾಮ ಹೆಬ್ಬಾರ, ಎಸ್‌.ಟಿ.ಸೋಮಶೇಖರ ಹಾಗೂ ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಸೇರಿ ಪಕ್ಷದ ಯಾವ ಮುಖಂಡರು ಕಾಂಗ್ರೆಸ್‌ ಸೇರುತ್ತಿಲ್ಲ. ಅವರ ಜೊತೆ ಈಗಾಗಲೇ ಮಾತನಾಡಿದ್ದು, ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ನೇತೃತ್ವ ಮತ್ತು ನಿಯತ್ತು ಇಲ್ಲದ ಪಕ್ಷ ಕಾಂಗ್ರೆಸ್‌ ಆಗಿದ್ದು, ನಮ್ಮದು ಬಂಡೆಗಲ್ಲಿನಂಥ ಬಲಿಷ್ಠ ಪಕ್ಷ. ನಮ್ಮ ಪಕ್ಷದ ಶಾಸಕರು, ಮುಖಂಡರು ಪ್ರಬುದ್ಧರಿದ್ದು, ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ‘ಆದರೆ, ಕೊನೆಕ್ಷಣದಲ್ಲಿ ಏನಾಗುತ್ತದೆ ಎಂದು ಹೇಳಲು ನಾನು ಭವಿಷ್ಯಗಾರನಲ್ಲ’ ಎಂದರು.

ಭುಗಿಲೇಳಲಿದೆ ಅಸಮಾಧಾನ

‘ಲೋಕಸಭಾ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ ಶಾಸಕರಲ್ಲಿನ ಭಿನ್ನಮತೀಯ ಚಟುವಟಿಕೆಗಳು ಮತ್ತಷ್ಟು ಭುಗಿಲೇಳಲಿದೆ’ ಎಂದರು.

‘ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂಬ ವಿಷಯ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಮತ್ತೊಮ್ಮೆ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ಕಾಂಗ್ರೆಸ್‌ ಶಾಸಕ ಬಿ.ಆರ್‌. ಪಾಟೀಲ ಹೇಳಿದ್ದಾರೆ. ಭ್ರಷ್ಟಾಚಾರ ಜಾಸ್ತಿಯಾಗುತ್ತಿದೆ ಎಂದು ಮತ್ತೊಬ್ಬ ಶಾಸಕ ರಾಯರೆಡ್ಡಿ ಎಂದಿದ್ದಾರೆ. ಅವರದ್ದೇ ಪಕ್ಷದ ಶಾಸಕರು, ಅವರ ಸರ್ಕಾರವನ್ನೇ ಟೀಕಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಆಕ್ರೋಶ, ಅಸಮಾಧಾನಗಳೆಲ್ಲ ಸಂಪೂರ್ಣ ಹೊರಬೀಳಲಿವೆ’ ಎಂದರು.

ಮಳೆಯಾಗದೆ ಸರಿಯಾಗಿ ಗಾಳಿ ಸಹ ಬೀಸದ ಕಾರಣ ವಿದ್ಯುತ್‌ ಉತ್ಪಾದನೆಯಲ್ಲಿ ಕುಂಠಿತವಾಗುತ್ತಿದೆ. ಕಾಂಗ್ರೆಸ್‌ಗೆ ಗಾಳಿ ಉಲ್ಟಾ ಬೀಸುತ್ತಿರುವುದರಿಂದ ಸರಿಯಾಗಿ ವಿದ್ಯುತ್‌ ನಿರ್ವಹಣೆ ಮಾಡಲಾಗುತ್ತಿಲ್ಲ.
ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

‘ಸ್ವಾತಂತ್ರ್ಯೋತ್ಸವ ದೇಶದ ಪ್ರತಿಷ್ಠೆಯಾಗಿದ್ದು, ಕೆಂಪುಕೋಟೆಯಲ್ಲಿ ನಡೆದ ಅಂದಿನ ಕಾರ್ಯಕ್ರಮವನ್ನೇ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಹಿಷ್ಕರಿಸಿ ತಮ್ಮ ವ್ಯಕ್ತಿತ್ವ ಪ್ರದರ್ಶಿಸಿದ್ದಾರೆ. ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್‌, ಲಾಲಕೃಷ್ಣ ಅಡ್ವಾನಿ ಅವರ‍್ಯಾರು ಬಹಿಷ್ಕರಿಸಿರಲಿಲ್ಲ. ಕಾಂಗ್ರೆಸ್‌ ಪಕ್ಷದ ಬೌದ್ಧಿಕ ದಿವಾಳಿತನಕ್ಕೆ ಇದು ಸಾಕ್ಷಿ’ ಎಂದರು.

ಮಣಿಪುರ ಗಲಭೆ ನಿಯಂತ್ರಿಸಲು ಯತ್ನ

‘ಈ ಹಿಂದೆ ಮಣಿಪುರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸಾಕಷ್ಟು ಗಲಭೆಗಳು ನಡೆದಿದ್ದು 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ನ ಗೃಹ ಸಚಿವರಾಗಲಿ ಇನ್ಯಾವುದೇ ಸಚಿವರಾಗಿ ಭೇಟಿ ನೀಡಿರಲಿಲ್ಲ. ನಮ್ಮ ಗೃಹಸಚಿವ ಅಮಿತ್‌ ಶಾ ಅವರು ಮೂರು ದಿನ ಮಣಿಪುರದಲ್ಲೇ ಇದ್ದು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು. ‘ಸಂಸತ್‌ನಲ್ಲಿ ಮಹತ್ವದ ಮಸೂದೆಗಳ ಚರ್ಚೆಯಲ್ಲಿ ಕಾಂಗ್ರೆಸ್‌ ಮುಖಂಡರು ಪಾಲ್ಗೊಳ್ಳದೆ ನುಣುಚಿಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷದ ಕಾಲದಲ್ಲಿ ಇದ್ದ ಆಡಳಿತ ಹಾಗೂ ಕೇಂದ್ರಾಡಳಿತದ ನಿಯಮಗಳು ಈಗಲೂ ಮುಂದುವರಿದಿವೆ. ಕೋರ್ಟ್‌ ಸಹ ಅದನ್ನೇ ಹೇಳಿದ್ದು ಕೆಲವು ಮಾರ್ಪಾಟುಗಳನ್ನು ಮಾಡಲಾಗಿದೆ. ವಿರೋಧ ಪಕ್ಷಗಳು ‘ಘಮಂಡಿ ಘಟಬಂಧನ’ ಮಾಡಿಕೊಂಡಿದ್ದು ಅದನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಇಲ್ಲಸಲ್ಲದ ಹೇಳಿಕೆ ನೀಡುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT