ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಲೆಕ್ಕ ಕೊಡಿ; ಬಿಜೆಪಿ ಪ್ರತಿಭಟನೆ

Published 11 ಫೆಬ್ರುವರಿ 2024, 6:58 IST
Last Updated 11 ಫೆಬ್ರುವರಿ 2024, 6:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರ ನಿವಾಸದ ಎದುರು ಬಿಜೆಪಿ ಮುಖಂಡರು, ಕಾರ್ಯಕರ್ತರು ಶನಿವಾರ ಪ್ರತಿಭಟನೆ ಮಾಡಿ, ಕ್ಷೇತ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ತಂದಿರುವ ಅನುದಾನದ ವಿವರ ಒದಗಿಸುವಂತೆ ಒತ್ತಾಯಿಸಿದರು.

ಬಿಜೆಪಿ  ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳಾಗಿದ್ದು, ಇಲ್ಲಿಯವರೆಗೆ ಕ್ಷೇತ್ರದ ಅಭಿವೃದ್ಧಿಗಾಗಿ ಸಮರ್ಪಕ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಜನರು ಹಾಗೂ ಆ (ಕಾಂಗ್ರೆಸ್‌) ಪಕ್ಷದ ಶಾಸಕರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರೇ ಮತದಾರರಿಗೆ ಉತ್ತರ ಕೊಡಿ ಎನ್ನುವ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು. 

‘ಒಂಬತ್ತು ತಿಂಗಳಲ್ಲಿ ಅನುದಾನ ತಂದಿದ್ದು ಎಷ್ಟು? ರಾಜ್ಯ ಸರ್ಕಾರ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎನ್ನುವ ಮಾಹಿತಿ ನೀಡಲಿ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಸ್ಥಳೀಯ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿತ್ತು. ಕಾಂಗ್ರೆಸ್‌ ಶಾಸಕರಿಗೂ ಯಾವುದೇ ತಾರತಮ್ಯ ಇಲ್ಲದೇ ಅನುದಾನ ನೀಡಿತ್ತು. ಈ ಸರ್ಕಾರದಲ್ಲಿ ಅವರ ಪಕ್ಷದ ಶಾಸಕರಿಗೇ ಅನುದಾನ ನೀಡುತ್ತಿಲ್ಲ. ಇನ್ನು ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಎಲ್ಲಿಂದ ನೀಡುತ್ತಾರೆ’ ಎಂದು ವ್ಯಂಗ್ಯವಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ‘ಹಿಂದೆ ಬಿಜೆಪಿ ಸರ್ಕಾರ 4 ವರ್ಷ ಆಡಳಿತದಲ್ಲಿ ಒಟ್ಟಾರೆಯಾಗಿ ₹ 50ಕೋಟಿ ಅನುದಾನ ನೀಡಿತ್ತು. ಈಗ ಕಾಂಗ್ರೆಸ್‌ ಕೇವಲ 9 ತಿಂಗಳಲ್ಲಿ ₹ 60 ಕೋಟಿಗೂ ಹೆಚ್ಚು ಅನುದಾನ ನೀಡಿದೆ. ಇದಲ್ಲದೇ, ಸದ್ಯದಲ್ಲಿಯೇ ಯುಜಿಡಿ (ಒಳಚರಂಡಿ) ಯೋಜನೆ ಕೈಗೆತ್ತಿಕೊಳ್ಳಲು ₹ 80 ಕೋಟಿ ಪ್ರತ್ಯೇಕವಾಗಿ ನೀಡಿದೆ. ಸದ್ಯದಲ್ಲಿಯೇ ಟೆಂಡರ್‌ ಕರೆಯಲಿದ್ದೇವೆ. 4 ವರ್ಷಗಳ ಅವಧಿಯಲ್ಲಿ ಸಿಕ್ಕ ಅನುದಾನಕ್ಕಿಂತ 9 ತಿಂಗಳಲ್ಲಿಯೇ ಹೆಚ್ಚು ಅನುದಾನ ಸಿಕ್ಕಿದೆ’ ಎಂದು ತಿಳಿಸಿದರು.

‘ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಜನರಿಗೆ ಸಹಾಯ ಮಾಡಲು ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ಪ್ರತಿ ತಿಂಗಳು ಜನರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ತೀವ್ರ ಬರಗಾಲ ಇದ್ದರೂ ಜನರು ಗುಳೆ ಹೋಗದಿರುವುದಕ್ಕೆ ಗ್ಯಾರಂಟಿ ಯೋಜನೆಗಳೇ ಕಾರಣ’ ಎಂದು ಹೇಳಿದರು. 

‘ಈಶ್ವರಪ್ಪ ಸಂಸ್ಕೃತಿ ಅಂತಹದ್ದು’

‘ಸಂಸದ ಡಿ.ಕೆ. ಸುರೇಶ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳಿರುವ ಕೆ.ಎಸ್‌. ಈಶ್ವರಪ್ಪ ಅವರ ಸಂಸ್ಕೃತಿಯೇ ಅಂತಹದ್ದು. ಮಹಾತ್ಮ ಗಾಂಧಿ ಅವರನ್ನು ಗುಂಡಿಕ್ಕಿ ಕೊಂದ ಗೋಡ್ಸೆ ಅವರನ್ನು ಆದರ್ಶವಾಗಿ ಇಟ್ಟುಕೊಂಡಿರುವವರು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಪ್ರತಿಕ್ರಿಯಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಒಬ್ಬ ಸಂಸದರನ್ನು ಗುಂಡಿಕ್ಕಿ ಕೊಲ್ಲಿ ಎಂದು ಮಾಜಿ ಸಚಿವರಾಗಿದ್ದವರು ಮಾತನಾಡುವ ರೀತಿಯೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT