ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬೆ ಮಳೆಗೆ ಕುಸಿದ ಉದ್ದು ಇಳುವರಿ, ದನಕರುಗಳಿಗೆ ಮೇವಾದ ಉದ್ದಿನ ಗಿಡಗಳು

Last Updated 10 ಸೆಪ್ಟೆಂಬರ್ 2020, 1:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಉದ್ದು ಬೆಳೆದ ರೈತರ ಸ್ಥಿತಿ ಮರುಗುವಂತಿದೆ. ಮಘಾ ಹಾಗೂ ಹುಬ್ಬೆ ಮಳೆಯ ಪರಿಣಾಮ ಅರ್ಧದಷ್ಟು ಬೆಳೆ ನಾಶವಾಗಿದೆ. ಜಿಲ್ಲೆಯಾದ್ಯಂತ ಅಂದಾಜು 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಒಳ್ಳೆಯ ಇಳುವರಿ ನಿರೀಕ್ಷೆ ಮೂಡಿಸಿತ್ತು. ಆದರೆ, ಕಾಳು ಕಟ್ಟುವ ಅವಧಿ ಹಾಗೂ ನಂತರದಲ್ಲಿ ಸುರಿದ ಸತತ ಮಳೆಗೆ ಇಳುವರಿ ಸಂಪೂರ್ಣ ಕಡಿಮೆಯಾಗಿದೆ.

ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿರುವ ಉದ್ದು ಬೆಳೆ ದನಕರುಗಳಿಗೆ ಮೇವಾಗಿದೆ. ಉಳಿದ ಅಲ್ಪ–ಸ್ವಲ್ಪ ಬೆಳೆಯನ್ನು ಒಣಗಿಸುವ, ಸಂಸ್ಕರಿಸುವ ಚಟುವಟಿಕೆಗಳು ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿವೆ.

ಹುಬ್ಬಳ್ಳಿ ಹೊರವಲಯದ ಬಿಡನಾಳ ಗ್ರಾಮ ಹಾಗೂ ಬೈಪಾಸ್‌ ಇಕ್ಕೆಲಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉದ್ದು ಮಳೆಗೆ ಆಹುತಿಯಾಗಿದೆ. ‘ಮಘಾ ಮಳೆಯಲ್ಲೇ ಬೆಳೆ ಕೈಕೊಡುವ ಸೂಚನೆ ಕಂಡು ಬಂದಿತ್ತು. ಮಳೆ ಬಿಡುವು ನೀಡಿದರೆ ಸರಿ ಹೋಗಲಿದೆ ಎಂಬ ನಿರೀಕ್ಷೆ ಕೂಡ ಹುಸಿಯಾಯಿತು. ಇಡೀ ಬೆಳೆ ಕಾಯಿ ಕಟ್ಟದೆ ಹುಬ್ಬೆ ಮಳೆಗೆ ಆಹುತಿಯಾಯಿತು. ಈಗ ದನಕರು ಮೇವಿಗೆ ಬಳಸುತ್ತಿದ್ದೇವೆ’ ಎಂದು ಬಿಡನಾಳ ಗ್ರಾಮದ ರೈತ ಚನ್ನಬಸು ಮೇಟಿ ಅಳಲು ತೋಡಿಕೊಂಡರು.

ನೂಲ್ವಿ, ಶೆರೇವಾಡ, ಅದರಗುಂಚಿ, ಕುಸುಗಲ್‌ ಗ್ರಾಮಗಳಲ್ಲೂ ರೈತರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಉಳಿದುರವ ಬೆಳೆಯನ್ನು ರಸ್ತೆ ಬದಿ ಒಣಗಿಸಿ, ಯಂತ್ರಗಳಿಗೆ ಹಾಕಲಾಗುತ್ತಿದೆ. ‘ಒಂದು ಎಕರೆ ಉದ್ದು ಸಂಸ್ಕರಣೆ ಮಾಡಿಸಲು ₹2 ಸಾವಿರ ನೀಡಬೇಕು. ಕಡಿಮೆ ಬಂದಿರುವ ಫಸಲನ್ನು ನಾವೇ ಒಣಗಿಸಿ ಕಾಳು ಬೇರ್ಪಡಿಸುತ್ತಿದ್ದೇವೆ’ ಎಂದು ನೂಲ್ವಿ ರೈತ ಗಣಪತರಾವ್‌ ಘೋರ್ಪಡೆ ಹೇಳಿದರು.

ಬೆಣ್ಣೆಹಳ್ಳ ಸುತ್ತಮುತ್ತ ಭಾರೀ ಹಾನಿ

ಕುಂದಗೋಳ ತಾಲ್ಲೂಕಿನ ಸಿರೂರು ಬಳಿ ಹಾದು ಹೋಗುವ ಬೆಣ್ಣೆಹಳ್ಳ ಸುತ್ತಮುತ್ತ ಮಳೆಯಿಂದಾಗಿ ಭಾರೀ ಪ್ರಮಾಣದ ಬೆಳೆ ಹಾನಿಯಾಗಿದೆ. ಹಳ್ಳದ ಎರಡೂ ಬದಿಯ ಬೆಳೆ ನೀರಿನಲ್ಲಿ ನಿಂತಿದೆ. ಇದರಿಂದ ಕೊಯ್ಲಿಗೂ ಸಮಸ್ಯೆಯಾಗಿದೆ. ಹತ್ತಿ ಹಾಗೂ ಉಳ್ಳಾಗಡ್ಡಿ ಬೆಳೆಗಳಲ್ಲೂ ಸಾಕಷ್ಟು ನೀರು ನಿಂತು ಕೊಳೆರೋಗ ಕಾಣಿಸಿಕೊಂಡಿದೆ.

‘ಪ್ರತಿ ಸಲ ಮಳೆಗಾಲದಲ್ಲಿ ಹಳ್ಳದ ಸಮೀಪವಿರುವ ಹೊಲಗಳು ಮುಳುಗಡೆ ಆಗುತ್ತವೆ. ಈ ಹಿಂದಿನಿಂದಲೂ ರೈತರನ್ನು ಹಳ್ಳದ ಸಂಕಷ್ಟದಿಂದ ಪಾರು ಮಾಡಲು ಯಾರಿಂದಲೂ ಆಗಿಲ್ಲ. ಮಳೆಗಾಲದಲ್ಲಿ ನಷ್ಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ’ ಎಂದು ಸಿರೂರು ಗ್ರಾಮದ ರೈತ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT