ಶನಿವಾರ, ಜನವರಿ 22, 2022
16 °C
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಘನಾಥ್ ಹೇಳಿಕೆ

ಸಾಮಾನ್ಯ– ಅಸಾಮಾನ್ಯರ ನಡುವಣ ಸ್ಪರ್ಧೆ: ರಘುನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೆಲವೇ ಮಂದಿಯ ಕೂಟವಾಗಿದೆ. ತಮಗೆ ಬೇಕಾದಂತೆ ಬೈಲಾವನ್ನು ತಿದ್ದುಪಡಿ ಮಾಡಿಕೊಂಡು, ತಮ್ಮ ಕೂಟದೊಳಗೇ ಅಧಿಕಾರ ಉಳಿಯುವಂತೆ ಮಾಡಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಸಾಮಾನ್ಯ ಹಾಗೂ ಅಸಾಮಾನ್ಯರ ನಡುವಣ ಸ್ಪರ್ಧೆ ನಡೆಯುತ್ತಿದ್ದು, ಮತದಾರರು ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು’ ಎಂದು ಮಹಾಸಭಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಘುನಾಥ್ ಎಸ್. ಹೇಳಿದರು.

ಮಹಾಸಭಾ ಅಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮಾರಕವಾದ ಬೈಲಾವನ್ನು ಸರಿಪಡಿಸಿ, ಪ್ರಜಾಪ್ರಭುತ್ವದ ಹಾದಿಯಲ್ಲಿ ಮಹಾಸಭಾ ಮುನ್ನೆಸಿಕೊಂಡು ಹೋಗಬೇಕಿದೆ. ಸಮುದಾಯಕ್ಕಾಗಿ ನಿಸ್ಮಾರ್ಥದಿಂದ ದುಡಿಯಲು ಪಣ ತೊಟ್ಟಿರುವ ನನ್ನನ್ನು ಎಲ್ಲರೂ ಗೆಲ್ಲಿಸಿ’ ಎಂದು ಮನವಿ ಮಾಡಿದರು.

‘ರಾಜ್ಯದಾದ್ಯಂತ ಇರುವ ಮಹಾಸಭಾದ 42 ಸಾವಿರ ಸದಸ್ಯರ ಪೈಕಿ, 25 ಸಾವಿರ ಮಂದಿ ಬೆಂಗಳೂರಿನಲ್ಲೇ ಇದ್ದಾರೆ. ಅದರಲ್ಲೂ ಬಸವನಗುಡಿ, ಜಯನಗರ ಹಾಗೂ ಪದ್ಮನಾಭನಗರದಲ್ಲಿ 18 ಸಾವಿರ ಜನರಿದ್ದಾರೆ. ಚುನಾವಣೆಯಲ್ಲಿ ನಿರ್ಧಾರಕರಾಗಿರುವ ಇವರ ಜೊತೆಗೆ, ರಾಜ್ಯದಾದ್ಯಂತ ನನಗೆ ಬೆಂಬಲ ವ್ಯಕ್ತವಾಗುತ್ತಿದೆ’ ಎಂದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಎಚ್. ಸಚ್ಚಿದಾನಂದಮೂರ್ತಿ ಮಾತನಾಡಿ, ‘ಸಮುದಾಯಕ್ಕಾಗಿ ಯಾವ ಕೆಲಸವನ್ನೂ ಮಾಡದ ಅಶೋಕ ಹಾರನಹಳ್ಳಿ ಮತ್ತು ಆರ್‌. ಲಕ್ಷ್ಮೀಕಾಂತ್, ಮಹಾಸಭಾ ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡು ತಮ್ಮ ವ್ಯಾಪಾರ-ಉದ್ಯಮ ನಡೆಸಿಕೊಂಡು ಬರುತ್ತಿದ್ದಾರೆ. ಅಂತಹವರ ಬದಲು, ಸಮುದಾಯದ ಅಭಿವೃದ್ಧಿಗೆ ದುಡಿಯಬಲ್ಲ ರಘುನಾಥ್ ಅವರನ್ನು ಎಲ್ಲರೂ ಬೆಂಬಲಿಸಬೇಕು’ ಎಂದು ಹೇಳಿದರು.

ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಲಕ್ಷ್ಮಣರಾವ್, ‘ಹುಬ್ಬಳ್ಳಿಯಲ್ಲಿ ಮಹಾಸಭಾ ಕಚೇರಿ ತೆರೆಯಲು ಈಶ್ವರ ದೇವಸ್ಥಾನದಲ್ಲಿ ಜಾಗ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಉದ್ಯಮಿ ಎಚ್.ಎನ್. ನಂದಕುಮಾರ್, ‘ಮಹಾಸಭಾ ಯಾರೊಬ್ಬರ ಕೈಗೊಂಬೆಯಾಗದೆ, ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯಬೇಕಾದರೆ ರಘುನಾಥ್ ಅವರಿಗೆ ಎಲ್ಲರೂ ಮತ ಹಾಕಬೇಕು’ ಎಂದು ಸಲಹೆ ನೀಡಿದರು.

ಸಮುದಾಯದ ಮುಖಂಡರಾದ ಮುರಳಿ ಕರ್ಜಗಿ, ಗೋವಿಂದ ಜೋಶಿ, ವಸಂತ ನಾಡಜೋಶಿ, ವತ್ಸಲಾ ನಾಗೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.