ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ₹ 30 ಲಕ್ಷದಲ್ಲಿ ಸಿಎಆರ್‌ ಮೈದಾನ ಅಭಿವೃದ್ಧಿ

ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಭರವಸೆ
Last Updated 6 ಜನವರಿ 2022, 16:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಗೋಕುಲ ರಸ್ತೆಯ ಸಶಸ್ತ್ರ ಮೀಸಲು ಪಡೆಯ (ಸಿಎಆರ್‌) ಮೈದಾನವನ್ನು ಮಹಾನಗರ ಪಾಲಿಕೆಯ ₹30 ಲಕ್ಷ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ಆದಿತ್ಯ ಬಿಸ್ವಾಸ್ ಭರವಸೆ ನೀಡಿದರು.

ಗೋಕುಲ ರಸ್ತೆಯ ಸಿಎಆರ್ ಮೈದಾನದಲ್ಲಿ ಗುರುವಾರ ನಡೆದ, ಮೂರು ದಿನಗಳ ಹುಬ್ಬಳ್ಳಿ–ಧಾರವಾಡ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪೊಲೀಸರೆಲ್ಲರೂ ಕುಟುಂಬವಿದ್ದಂತೆ. ಎಲ್ಲರಲ್ಲೂ ಸ್ಪರ್ಧಾ ಮನೋಭಾವ ಇರಬೇಕು. ಬದುಕಿನಲ್ಲಿ ಎಂತಹ ಪರಿಸ್ಥಿತಿ ಎದುರಾದರೂ ಎದೆಗುಂದದೆ ಹೋರಾಡಬೇಕು. ಆಗ ಮಾತ್ರ ವೃತ್ತಿ ಹಾಗೂ ಬದುಕಿನಲ್ಲಿ ಯಶಸ್ಸು ಸಿಗುತ್ತದೆ’ ಎಂದು ಹೇಳಿದರು.

‘ಕೋವಿಡ್–19 ಮೂರನೇ ಅಲೆಯ ಮುನ್ಸೂಚನೆ ದೊರೆತಿದೆ. ಸೋಂಕು ತಡೆಗೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ನೋಡಿಕೊಳ್ಳುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಜವಾಬ್ದಾರಿ ನಿಭಾಯಿಸಬೇಕು’ ಎಂದು ಸಲಹೆ ನೀಡಿದರು.

ಪೊಲೀಸ್ ಕಮಿಷನರ್ ಲಾಭೂ ರಾಮ್ ಮಾತನಾಡಿ, ‘ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಸಿಬ್ಬಂದಿ ನಿತ್ಯ ಕನಿಷ್ಠ ಒಂದು ತಾಸು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಅಥವಾ ವ್ಯಾಯಾಮ ಮಾಡಬೇಕು. ಇದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಸಾಧ್ಯ’ ಎಂದರು.

ನಿವೃತ್ತ ಪೊಲೀಸರನ್ನು ಸನ್ಮಾನಿಸಲಾಯಿತು. ಸಿಎಆರ್‌ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಮರೋಳ ನೇತೃತ್ವದಲ್ಲಿ ಕ್ರೀಡಾಕೂಡದ ಮುಕ್ತಾಯದ ಕವಾಯತು ನೆರವೇರಿತು. ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಪತ್ನಿ ಮೈತ್ರಿ ಬಿಸ್ವಾಸ್, ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಆರ್.ಬಿ. ಬಸರಗಿ, ಎಸ್.ಸಿ. ಯಾದವ್, ಎಸಿಪಿಗಳಾದ ಆರ್.ಕೆ. ಪಾಟೀಲ, ವಿನೋದ ಮುಕ್ತೇದಾರ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

ಸಿಎಆರ್ ತಂಡ ಚಾಂಪಿಯನ್; ಈರಣ್ಣ, ನೀಲಮ್ಮಗೆ ವೈಯಕ್ತಿಕ ಪ್ರಶಸ್ತಿ
ಕ್ರೀಡಾಕೂಟದ ಪುರುಷರ ವೈಯಕ್ತಿಕ ವಿಭಾಗದಲ್ಲಿ ಸಿಎಆರ್‌ನ ಈರಣ್ಣ ದೇಸಾಯಿ ಸತತ 12ನೇ ವರ್ಷ ವೈಯಕ್ತಿಕ ಪ್ರಶಸ್ತಿಗೆ ಭಾಜನರಾದರು. ಮಹಿಳಾ ವೈಯಕ್ತಿಕ ವಿಭಾಗದಲ್ಲಿ ನೀಲಮ್ಮ ಗಲಗಲಿ ಪ್ರಶಸ್ತಿ ಪಡೆದರು. ಕ್ರೀಡಾಕೂಟದ ಚಾಂಪಿಯನ್ ತಂಡವಾಗಿ ಸಶಸ್ತ್ರ ಮೀಸಲು ಪಡೆ ಹೊರಹೊಮ್ಮಿತು.

ಪುರುಷರ 100‌ ಮೀಟರ್ ಓಟದಲ್ಲಿ ಬಸವರಾಜ ಹೆಬ್ಬಳ್ಳಿ, ಈರಣ್ಣ ದೇಸಾಯಿ, ಎನ್.ಎಂ. ಲಮಾಣಿ, ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಲೀಲಮ್ಮ ಜಿ., ಮಂಜುಳಾ ನರ್ತಿ, ವಿದ್ಯಾ ಭಜಂತ್ರಿ, ಪುರುಷರ 800 ಮೀ. ಓಟದಲ್ಲಿ ಮಲ್ಲಪ್ಪ ಚತ್ತರಗಿ, ಮಾಲಾತೇಶ್, ಮಲ್ಲಪ್ಪ ಕುಂಬಾರ, ಮಹಿಳೆಯರ 200 ಮೀಟರ್ ಓಟದಲ್ಲಿ ಮಂಜುಳ ನರ್ತಿ, ಶೃತಿ ಅಕ್ಕೊಳ್ಳಿ, ಪವಿತ್ರ ಅಣ್ಣಯ್ಯನವರ್, ಅನುಕ್ರಮವಾಗಿ ಪ್ರಥಮ ದ್ವೀತಿಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದರು.

ಕ್ರಿಕೆಟ್: ಪೊಲೀಸ್ ತಂಡಕ್ಕೆ ಜಯ
ಪೊಲೀಸರು ಮತ್ತು ಪತ್ರಕರ್ತರ ತಂಡಗಳ ನಡುವೆ ದೇಶಪಾಂಡೆ ನಗರದ ಜಿಮ್ಖಾನಾ ಮೈದಾನದಲ್ಲಿ ಗುರುವಾರ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಪೊಲೀಸರ ತಂಡ 7 ವಿಕೆಟ್‌ಗಳ ಗೆಲುವು ಪಡೆಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪತ್ರಕರ್ತರ ತಂಡ ನಿಗದಿತ 12 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 78 ರನ್‌ ಕಲೆಹಾಕಿತು. ಪೊಲೀಸರ ತಂಡ, 8 ಓವರ್‌ಗಳಲ್ಲಿ ಗುರಿ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT