ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಐದು ವರ್ಷವಾದರೂ ನಿರ್ಮಾಣವಾಗದ ಕಟ್ಟಡ

ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡ: ಹಣದ ಕೊರತೆ, ಟ್ರಾಫಿಕ್‌ ಜಾಮ್‌
ನಾಗರಾಜ್‌ ಬಿ.ಎನ್‌.
Published 22 ಜನವರಿ 2024, 7:09 IST
Last Updated 22 ಜನವರಿ 2024, 7:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ವರ್ಷದ ಹಿಂದೆಯೇ ಮುಕ್ತಾಯವಾಗಬೇಕಿದ್ದ ಇಲ್ಲಿನ ಹಳೆ ಕೋರ್ಟ್‌ ವೃತ್ತದ ಬಳಿಯ ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡದ ಕಾಮಗಾರಿ ಹಣದ ಕೊರತೆಯಿಂದ ನೆನಗುದಿಗೆ ಬಿದ್ದಿದೆ. ಐದು ವರ್ಷಗಳಾದರೂ ಶೇ 20ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ!

ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್ ವೃತ್ತ ಸಂಧಿಸುವ ಮಧ್ಯ ಭಾಗದಲ್ಲಿ ನಿತ್ಯವೂ ವಾಹನಗಳ ದಟ್ಟಣೆ ಸಮಸ್ಯೆ ಕಾಡುತ್ತಿದ್ದು, ಸಮಸ್ಯೆ ಬೇಗನೇ ಪರಿಹಾರಗೊಳ್ಳುವ ಲಕ್ಷಣ ಕಾಣುತ್ತಿಲ್ಲ.

ಸ್ಮಾರ್ಟ್‌ಸಿಟಿ ಯೋಜನೆಯಡಿ 2018ರಲ್ಲೇ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ (ಪಿಪಿಪಿ) ₹50 ಕೋಟಿ ವೆಚ್ಚದ ಈ ಕಾಮಗಾರಿಯನ್ನು ಸುರೇಶ ಶೇಜವಾಡಕರ್‌ ಗುತ್ತಿಗೆ ಪಡೆದಿದ್ದಾರೆ. 2022ರ ಮಾರ್ಚ್‌ನಲ್ಲೇ ಕಾಮಗಾರಿ ಮುಗಿಯಬೇಕಿತ್ತು.

ಯೋಜನೆ ಪ್ರಕಾರ ಮೂರು ನೆಲಮಹಡಿ, ನಾಲ್ಕು ಮೇಲ್‌ಮಹಡಿ ಕಟ್ಟಡ ನಿರ್ಮಾಣವಾಗಬೇಕು. ಸದ್ಯ ಕೆಳಹಂತದಿಂದ ಎರಡು ಮಹಡಿ ಮಾತ್ರ ಪೂರ್ಣಗೊಂಡಿದ್ದು, ಮೂರನೇಮಹಡಿ ಕಾಮಗಾರಿ ಚಾಲನೆಯಲ್ಲಿದೆ. ಅದಕ್ಕೆ ಬಳಸಿರುವ ಕಬ್ಬಿಣದ ಸರಳುಗಳು ಎರಡು, ಮೂರು ಮಳೆಗಾಲದಲ್ಲಿ ನೆನೆದ ಪರಿಣಾಮ ಈಗಾಗಲೇ ತುಕ್ಕು ಹಿಡಿದಿದೆ. ಕಾಮಗಾರಿಗಾಗಿ ಮುಂಜಾಗ್ರತಾ ಕ್ರಮವಾಗಿ ಸಾಯಿಮಂದಿರದ ಹಾಗೂ ಗ್ರೀನ್‌ ಗಾರ್ಡನ್‌ ರೆಸ್ಟೋರೆಂಟ್‌ ಮುಂಭಾಗದ ರಸ್ತೆಯನ್ನು ಕಿರಿದು ಮಾಡಲಾಗಿದೆ. ರೆಸ್ಟೋರೆಂಟ್‌ ಎದುರಿನ ರಸ್ತೆ ಪಕ್ಕ ಕಾಮಗಾರಿಯ ಮಣ್ಣು ರಾಶಿಹಾಕಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಮತ್ತಷ್ಟು ಅಡಚಣೆಯಾಗುತ್ತಿದೆ.

‘ಕೆಳಹಂತದ ಎರಡನೇ ಮಹಡಿ ಕಾಮಗಾರಿ ನಡೆಯುತ್ತಿದ್ದಾಗ, ಸಾಯಿಮಂದಿರದ ಎದುರಿನ ಧರೆ ಎರಡು ಬಾರಿ ಕುಸಿದು, ಸ್ವಲ್ಪದರಲ್ಲಿ ಅನಾಹುತ ತಪ್ಪಿತ್ತು. ಕಾಮಗಾರಿ ಆರಂಭವಾದಾಗಿನಿಂದ ಒಮ್ಮೆಯೂ ವೇಗ ಪಡೆದುಕೊಂಡಿಲ್ಲ. ಗುರುವಾರದಂದು ಸಾಯಿ ಮಂದಿರಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ರಸ್ತೆ ಕಿರಿದು ಮಾಡಿರುವುದರಿಂದ, ಅಂದು ಬೆಳಿಗ್ಗೆಯಿಂದ ಸಂಜೆವರೆಗೆ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಸ್ಮಾರ್ಟ್‌ಸಿಟಿ ಅಧಿಕಾರಿಗಳನ್ನು ಕೇಳಿದರೆ, ಅಸಹಾಯಕತೆ ತೋಡಿಕೊಳ್ಳುತ್ತಾರೆ’ ಎಂದು ನಗರದ ಉದ್ಯಮಿ ಸಾಯಿನಾಥ ಮಲ್ಲಣ್ಣವರ ಹೇಳುತ್ತಾರೆ.

‘ಕೋವಿಡ್‌ ಸಂದರ್ಭದಲ್ಲಿ ಕಾರ್ಮಿಕರ ಕೊರತೆಯಿಂದ ಕಾಮಗಾರಿ ನಿಧಾನವಾಗಿತ್ತು. ನಂತರದ ಮೂರು ವರ್ಷ ಗುತ್ತಿಗೆದಾರರಲ್ಲಿ ಹಣವಿಲ್ಲದ್ದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಪಿಪಿಪಿ ಮಾದರಿ ಕಾಮಗಾರಿ ಆಗಿರುವುದರಿಂದ, ಆರಂಭದಲ್ಲಿ ಎರಡು ಬಾರಿ ಟೆಂಡರ್‌ ಕರೆದಾಗ ಯಾರೂ ಮುಂದೆ ಬಂದಿರಲಿಲ್ಲ. ನಂತರ ಶೇಜವಾಡ್ಕರ್‌ ಟೆಂಡರ್‌ ಪಡೆದರು. ಕಾಮಗಾರಿ ಅರ್ಧಮರ್ಧ ಹಾಗೂ ಪಿಪಿಪಿ ಮಾದರಿ ಆಗಿರುವುದರಿಂದ, ಟೆಂಡರ್‌ ರದ್ದುಪಡಿಸಿ ಬೇರೆಯವರಿಗೆ ನೀಡಲು ಯತ್ನಿಸಿದರೂ, ಪಡೆಯಲು ಯಾರೂ ಬರುವುದಿಲ್ಲ’ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಕಾಮಗಾರಿ ವಿಳಂಬ ಕುರಿತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ಸ್ಮಾರ್ಟ್‌ಸಿಟಿ ವ್ಯವಸ್ಥಾಪಕರಿಗೆ ಕಾಮಗಾರಿ ಸ್ಥಗಿತಗೊಳಿಸಿ ಬೇರೆಯವರಿಗೆ ಟೆಂಡರ್‌ ನೀಡಲು ಸೂಚಿಸಿದ್ದೇನೆ
ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ಏಕಕಾಲದಲ್ಲಿ 290 ಕಾರ್‌ ನಿಲುಗಡೆ

ಯೋಜನೆಯ ಒಟ್ಟಾರೆ ನಿರ್ಮಾಣ ಪ್ರದೇಶ ಸುಮಾರು 122500 ಚ.ಅಡಿಗಳಷ್ಟಿದ್ದು 35000 ಚ.ಅಡಿ ಜಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತದೆ. ಸ್ಮಾರ್ಟ್ ಕಾರ್ಡ್ ಮೂಲಕ ಕಾರ್‌ ಹಾಗೂ ಬೈಕ್‌ಗಳಿಗೆ ಪ್ರವೇಶ ನೀಡುವುದು ಮತ್ತು ಡಿಜಿಟಲ್‌ ಜಾಹೀರಾತು ಫಲಕ ಅಳವಡಿಸಿ ಆದಾಯ ಸಂಗ್ರಹಿಸುವುದು ಯೋಜನೆಯ ಭಾಗವಾಗಿದೆ. ಏಕಕಾಲದಲ್ಲಿ 290 ಕಾರ್‌ಗಳನ್ನು ನಿಲುಗಡೆ ಮಾಡಬಹುದು. ಪಾರ್ಕಿಂಗ್ ಸೆನ್ಸರ್‌ಗಳು ಬೂಮ್ ಬ್ಯಾರಿಕೇಡ್‌ಗಳು ಹಾಗೂ ಕಟ್ಟಡದ ಸುತ್ತ ಉದ್ಯಾನ ನಿರ್ಮಾಣವಾಗಲಿದೆ. ಗುತ್ತಿಗೆ ಪಡೆದವರೇ 32 ವರ್ಷ ಲೀಸ್‌ನಲ್ಲಿ ನಿರ್ವಹಣೆ ಮಾಡಬೇಕು.

‘ನೋಟಿಸ್‌ ನೀಡಿದ್ದೇವೆ’
‘ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನೋಟಿಸ್‌ ಸಹ ನೀಡಲಾಗಿದೆ. ವಿಳಂಬ ಕುರಿತು ಜಿಲ್ಲಾಧಿಕಾರಿ ಹಾಗೂ ಸ್ಮಾರ್ಟ್‌ಸಿಟಿ ಮಂಡಳಿ ಗಮನಕ್ಕೂ ತರಲಾಗಿದೆ. ₹50 ಕೋಟಿ ಕಾಮಗಾರಿಯಲ್ಲಿ ₹9 ಕೋಟಿಯಷ್ಷು ಕಾಮಗಾರಿ ಮಾತ್ರ ಮುಕ್ತಾಯವಾಗಿದೆ. ಜೂನ್‌ ಒಳಗೆ ಪೂರ್ಣಗೊಳಿಸಲು ಅಂತಿಮ ಗಡುವು ನೀಡಲಾಗಿದೆ. ಮೀರಿದರೆ ಅನಿವಾರ್ಯವಾಗಿ ಟೆಂಡರ್‌ ರದ್ದುಪಡಿಸಲು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸ್ಮಾರ್ಟ್‌ಸಿಟಿ ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸವರಾಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT