ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | 5 ವರ್ಷ; ವಿವಾಹ ಬಂಧನಕ್ಕೆ 23 ಬಾಲಕಿಯರು

ಧಾರವಾಡದಲ್ಲಿ 9 ಗಂಡು,106 ಹೆಣ್ಣು ಮಕ್ಕಳ ರಕ್ಷಣೆ
Published 27 ಡಿಸೆಂಬರ್ 2023, 5:50 IST
Last Updated 27 ಡಿಸೆಂಬರ್ 2023, 5:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 23 ಬಾಲ್ಯವಿವಾಹ ಪ್ರಕರಣಗಳು ವರದಿ ಆಗಿವೆ. ಬಾಲ್ಯ ವಿವಾಹ ತಡೆಯುವುದಕ್ಕೆ ಸಂಬಂಧಿಸಿದಂತೆ ಸರ್ಕಾರವು ಹಲವು ಹಂತದ ಕ್ರಮಗಳನ್ನು ಕೈಗೊಂಡಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬ ದೂರುಗಳಿವೆ.

ಶಾಲಾ ಶಿಕ್ಷಣ ಪಡೆದು ಭವಿಷ್ಯದ ಬಗ್ಗೆ ಆಗಷ್ಟೇ ಕನಸು ಕಾಣಲಾರಂಭಿಸುವ ಮಕ್ಕಳನ್ನು 18 ವರ್ಷ ತುಂಬುವ ಮುಂಚೆಯೇ ಹಸೆಮಣೆಗೆ ಏರಿಸುವುದು ಕಾನೂನುಬಾಹಿರ ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಆಧರೆ, ಬಾಲ್ಯ ವಿವಾಹ ನಡೆದಿರುವುದು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇದೆ. 

115 ಪ್ರಕರಣಗಳಿಗೆ ತಡೆ: ಬಾಲ್ಯವಿವಾಹ ನಡೆಯುವ ಕುರಿತು ದೂರು ಬಂದ ಕೂಡಲೇ ಕಾರ್ಯೋನ್ಮುಖವಾಗುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಐದು ವರ್ಷಗಳ ಅವಧಿಯಲ್ಲಿ 115 ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸರನ್ನೊಳಗೊಂಡ ತಂಡವು ಬಾಲ್ಯವಿವಾಹ ಕುರಿತು ಬರುವ ದೂರುಗಳ ವಿರುದ್ಧ ತಕ್ಷಣ ಕಾರ್ಯಪ್ರವೃತ್ತವಾಗಿ ಕಾರ್ಯಾಚರಣೆ ನಡೆಸುತ್ತದೆ. ಅದಾಗಲೇ ವಿವಾಹವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಪ್ರಕರಣ, ಬಾಲ್ಯವಿವಾಹ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ.

‘18 ವರ್ಷ ತುಂಬದ ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹಕ್ಕೆ ದೂಡುವುಡು ಸಾಮಾನ್ಯವಾದರೆ, 21 ವರ್ಷ ತುಂಬದ ಗಂಡು ಮಕ್ಕಳನ್ನೂ ಮದುವೆ ಬಂಧನಕ್ಕೆ ಒಳಪಡಿಸಲಾಗುತ್ತಿದೆ. ಐದು ವರ್ಷಗಳಲ್ಲಿ 9 ಗಂಡು ಮಕ್ಕಳನ್ನು ಬಾಲ್ಯ ವಿವಾಹದಿಂದ ತಡೆಯಲಾಗಿದೆ. 106 ಹೆಣ್ಣುಮಕ್ಕಳನ್ನು ರಕ್ಷಿಸಲಾಗಿದೆ’ ಎಂದು ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನೀತಾ ವಾಡಕರ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಸಾಮೂಹಿಕವಾಗಿ ನಡೆಯುವ ವಿವಾಹದಲ್ಲೂ ಬಾಲ್ಯವಿವಾಹ ನಡೆಯುವ ಸಾಧ್ಯತೆಗಳಿರುತ್ತವೆ. ನಮ್ಮ ಗಮನಕ್ಕೆ ಬಾರದೆ ವಿವಾಹವಾಗಿ, ಗರ್ಭಿಣಿಯಾಗಿದ್ದರೆ ತಾಯಿ ಕಾರ್ಡ್‌ ಪಡೆಯಲು ಬಂದಾಗ ಆರೋಗ್ಯ ಇಲಾಖೆಯ ಅಧಿಕಾರಿಗಳ ಮೂಲಕ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತದೆ. ಹಾಗಾಗಿ, ಯಾರೇ ಅಂತಹ ವಿವಾಹಗಳನ್ನು ನಡೆಸುವಾಗ, ತಾಯಿ ಕಾರ್ಡ್‌ ಪಡೆಯಲು ಮುಂದಾದಾಗ ಕಡ್ಡಾಯವಾಗಿ ಅವರ ಜನ್ಮದಿನಾಂಕ ತಿಳಿಸುವ ಯಾವುದಾದರೂ ದಾಖಲೆಯನ್ನು ಸಂಗ್ರಹಿಸಿರಬೇಕು. ಇದನ್ನು ಮೀರಿಯೂ ಬಾಲ್ಯವಿವಾಹ ನಡೆಯುತ್ತಿರುವುದು ಖಚಿತವಾದರೆ ತಡೆಯಲಾಗುತ್ತದೆ. ತಪ್ಪಿತಸ್ಥರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ’ ಎಂದು ಘಟಕದ ಕ್ಷೇತ್ರ ಕಾರ್ಯಕರ್ತ ಮಹಮ್ಮದ್‌ ಅಲಿ ತಹಶೀಲ್ದಾರ್‌ ಹೇಳಿದರು.

Highlights - null

Cut-off box - ‘ವಿವಾಹ ತಡೆಗೆ ದೂರು ನೀಡಿದ ಬಾಲಕಿ’ ಗದಗ ಜಿಲ್ಲೆಯ ಗ್ರಾಮವೊಂದರ ಬಾಲಕಿಯನ್ನು ಜಮಖಂಡಿ ತಾಲ್ಲೂಕಿನ ಗ್ರಾಮವೊಂದರ ವ್ಯಕ್ತಿಯೊಡನೆ ಬಾಲ್ಯ ವಿವಾಹ ಮಾಡಲಾಗಿದ್ದು ಈಚೆಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ‘ನನ್ನನ್ನು ಅನ್ಯ ಧರ್ಮದ ವ್ಯಕ್ತಿಯೊಂದಿಗೆ ಒತ್ತಾಯ ಪೂರ್ವಕವಾಗಿ ಬಾಲ್ಯವಿವಾಹ ಮಾಡಿಸಲಾಗಿದೆ’ ಎಂದು ಬಾಲಕಿ ದೂರು ನೀಡಿದ್ದಳು. ಬಾಲಕಿ ಗದುಗಿನ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು. ನಂತರ ಅದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ತಡೆಗೆ ಮಕ್ಕಳೆ ಮುಂದು: ಬಾಲ್ಯ ವಿವಾಹ ತಡೆಯಲು ಮಕ್ಕಳೇ ಮುಂದಾಗಬೇಕು ಎಂಬ ಉದ್ದೇಶದಿಂದ ಪ್ರೌಢಶಾಲೆ ಕಾಲೇಜುಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳಲ್ಲಿ ಹಾಗೂ ವಸತಿ ನಿಲಯಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರಲಾಗಿದೆ. ಪರಿಣಾಮವಾಗಿ ಈಚೆಗೆ ಮಕ್ಕಳೇ ದೂರು ನೀಡಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಅಧಿಕಾರಿಗಳು ತಿಳಿಸಿದರು. 

Cut-off box - 5 ವರ್ಷಗಳ ಅವಧಿಯಲ್ಲಿ ನಡೆದ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ವರ್ಷ;ನಡೆದ ವಿವಾಹ;ತಡೆದ ವಿವಾಹ 2019–20;1;25 2020–21;1;26 2021–22;11;23 2022–23;7;22 2023–24;3;19(ಡಿ.21ರ ವೆರೆಗೆ) ಒಟ್ಟು;23;115

Cut-off box - 2 ವರ್ಷ ಜೈಲು ಶಿಕ್ಷೆ ಬಾಲ್ಯವಿವಾಹ ಪ್ರಯತ್ನಗಳು ಕಂಡು ಬಂದರೆ ಮಕ್ಕಳ ಸಹಾಯವಾಣಿ: 1098 ಸಿಡಿಪಿಒ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯ ದೂರವಾಣಿ ಸಂಖ್ಯೆ 0836–2742420ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟಿ ಅವರ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು. ಒಂದು ವೇಳೆ ಇದನ್ನು ಮೀರಿದರೆ ಕಾನೂನು ಕ್ರಮ ಜರುಗಿಸುತ್ತೇವೆ. ಬಾಲ್ಯ ವಿವಾಹ ಮಾಡಿದರೆ ಗರಿಷ್ಠ 2 ವರ್ಷ ಜೈಲು ಶಿಕ್ಷೆ ಮತ್ತು ₹ 1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT