ಧಾರವಾಡ | ಸ್ವಚ್ಛತೆ ಜಾಗೃತಿ ಮೂಡಿಸಿದ ಪ್ಲಾಗಥಾನ್

ಹುಬ್ಬಳ್ಳಿ: ಸ್ವಚ್ಛ ಸರ್ವೇಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯು ‘ನಮ್ಮ ನಗರ ಸ್ವಚ್ಛ ನಗರ’ ಅಭಿಯಾನದ ಭಾಗವಾಗಿ ಶನಿವಾರ ಪ್ಲಾಗಥಾನ್ ಆಯೋಜಿಸಲಾಗಿತ್ತು.
ದುರ್ಗದಬೈಲ್, ಕೇಶ್ವಾಪುರ, ಇಂಡಿಪಂಪ್, ಇಂದಿರಾನಗರ, ವಿದ್ಯಾನಗರ, ಸಿಬಿಟಿಗಳಲ್ಲಿ ಪ್ಲಾಗಥಾನ್ ಅಂಗವಾಗಿ ಶಾಲಾ– ಕಾಲೇಜು ವಿದ್ಯಾರ್ಥಿಗಳು, ಪಾಲಿಕೆಯ ಅಧಿಕಾರಿಗಳು, ಪೌರಕಾರ್ಮಿಕರು, ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿದಂತೆ ಹಲವರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.
ಸ್ವಚ್ಛ ಸರ್ವೇಕ್ಷಣೆಯ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ರಾಯಭಾರಿ ಅನಿರುದ್ಧ ಜತ್ಕರ್, ಆಯುಕ್ತ ಡಾ. ಬಿ.ಗೋಪಾಲಕೃಷ್ಣ ಸೇರಿದಂತೆ ಒಂದುಸಾವಿರಕ್ಕೂ ಹೆಚ್ಚು ಜನ ಸ್ವಚ್ಛ ಅಭಿಯಾನಕ್ಕೆ ಕೈ ಜೋಡಿಸಿದರು.
ಹಳೇಹುಬ್ಬಳ್ಳಿಯ ಈಶ್ವರ ನಗರದಲ್ಲಿರುವ ರುದ್ರಭೂಮಿಯ ತಡೆಗೋಡೆಗೆ ಶ್ರೀ ಸದ್ಗುರು ಸಿದ್ಧಾರೂಡ ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ಬಣ್ಣ ಬಳಿದರು.
ಹುಬ್ಬಳ್ಳಿ– ಧಾರವಾಡ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಮಾತನಾಡಿ, ‘ಪ್ಲಾಗಥಾನ್ ಸಂಗ್ರಹಿಸಿದ ಕಸದಲ್ಲಿ ಶೇ 90ರಷ್ಟು ತಂಬಾಕು, ಸಿಗರೇಟ್ ಪ್ಯಾಕೇಟ್ಗಳೇ ಸಿಕ್ಕಿವೆ. ನಗರದ ಸ್ವಚ್ಛತೆಗೆ ಪಾಲಿಕೆಯೊಂದಿಗೆ ಜನ ಕೈಜೋಡಿಸಬೇಕು’ ಎಂದರು.
ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ನಿರಂಜನ ಹಿರೇಮಠ, ರೂಪಾ ಶೆಟ್ಟಿ, ಚೇತನ ಹಿರೇಕೆರೂರ, ಬೀರಪ್ಪ ಖಂಡೇಕಾರ, ಮಾಜಿ ಸದಸ್ಯ ಮೋಹನ ಹಿರೇಮನಿ, ಗುರುನಾಥ ಉಳ್ಳಿಕಾಶಿ ಇದ್ದರು.
ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಅವರು ಸಮಾರೋಪದಲ್ಲಿ ‘ಟಗರು ಬಂತು ಟಗರು’ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದರು. ಆರಂಭದಲ್ಲಿ ಉಪ ಮೇಯರ್ ಉಮಾ ಮುಕುಂದ ಹಾಗೂ ಪಾಲಿಕೆ ಸದಸ್ಯರು ಸಹ ನೃತ್ಯ ಮಾಡಿದರು. ಅನಿರುದ್ಧ ಜತ್ಕರ್ ಅವರು ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’ ಹಾಡು ಹಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.