ಶುಕ್ರವಾರ, ಆಗಸ್ಟ್ 19, 2022
27 °C
‘ಕೋಲ್ಡ್‌ ಸ್ಟೋರೇಜ್’: ಅನುದಾನಕ್ಕೆ ಪ್ರಸ್ತಾವ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಲಸಿಕೆ ಸಂಗ್ರಹಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದ ಕಾರ್ಗೊ ವಿಭಾಗದಲ್ಲಿ ಕೊರೊನಾ ಸೋಂಕಿಗೆ ಲಸಿಕೆ ಸಂಗ್ರಹ ಮಾಡಲು ‘ಕೋಲ್ಡ್‌ ಸ್ಟೋರೇಜ್‌’ ನಿರ್ಮಿಸಬೇಕಿದ್ದು, ಇದಕ್ಕಾಗಿ ₹5 ಲಕ್ಷ ಅನುದಾನ ಬಿಡುಗಡೆ ಮಾಡಬೇಕು ಎಂದು ಇಲ್ಲಿನ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ ಅವರು, ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.

ದೇಶದ ಎಲ್ಲ ವಿಮಾನ ನಿಲ್ದಾಣಗಳ ಸರಕು ಸಾಗಣೆ ವಿಭಾಗದಲ್ಲಿ ಲಸಿಕೆ ಸಂಗ್ರಹಿಸಿಡಬೇಕು. ಲಸಿಕೆ ವಿತರಣೆ ಯಾವ ಸಮಯದಲ್ಲಾದರೂ ಆರಂಭವಾಗಬಹುದು; ಇದಕ್ಕೆ ವಿಮಾನ ನಿಲ್ದಾಣಗಳ ನಿರ್ದೇಶಕರು ಸಜ್ಜಾಗಿರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಆ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿನ ಕಾರ್ಗೊ ಸೌಲಭ್ಯದ ಕಾಮಗಾರಿ ವೇಗವಾಗಿ  ನಡೆಯುತ್ತಿದೆ. ಆದ್ದರಿಂದ ‘ಕೋಲ್ಡ್‌ ಸ್ಟೋರೇಜ್‌’ ನಿರ್ಮಿಸಲು ಕೂಡ ಆದಷ್ಟು ಬೇಗನೆ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಕೋರಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಠಾಕರೆ ಕೆಲ ದಿನಗಳಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದೆ. ಬಳಿಕ 3ರಿಂದ 4 ಟನ್‌ ಸಂಗ್ರಹ ಮಾಡುವಷ್ಟು ಸಾಮರ್ಥ್ಯದ ಕೋಲ್ಡ್‌ ಸ್ಟೋರೇಜ್‌ ನಿರ್ಮಿಸಲು ಟೆಂಡರ್‌ ಕರೆಯಲಾಗುವುದು. 2ರಿಂದ 4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕೋವಿಡ್‌ ಲಸಿಕೆಯನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಮಾರ್ಚ್‌ ವೇಳೆಗೆ ಸ್ಟೋರೇಜ್‌ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಭರವಸೆಯಿದೆ’ ಎಂದರು.

ಫೆಬ್ರುವರಿಯಿಂದ ಕಾರ್ಯಾರಂಭ: ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಾರ್ಗೊ ಸೌಲಭ್ಯ 2021ರ ಫೆಬ್ರುವರಿಯಿಂದ ಆರಂಭವಾಗುವ ನಿರೀಕ್ಷೆಯಿದೆ. ಪ್ರಯಾಣಿಕರ ಹಳೆಯ ಟರ್ಮಿನಲ್‌ ಅನ್ನು ಕಾರ್ಗೊ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. 

‘ಅಂದಾಜು ₹60.6 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾರ್ಗೊ ಸೌಲಭ್ಯದಿಂದ ವಾಣಿಜ್ಯ ನಗರಿಯ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ. ಬೆಲೆಯುಳ್ಳ ಮತ್ತು ಅಪಾಯಕಾರಿ ಸರಕುಗಳನ್ನು ಸಂಗ್ರಹಿಸಿಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜನವರಿ ಅಂತ್ಯದಲ್ಲಿ ಮೇಲಧಿಕಾರಿಗಳಿಂದ ಪರಿಶೀಲನೆ ನಡೆದ ಬಳಿಕ ಸೇವೆ ಆರಂಭಿಸಲಾಗುವುದು’ ಎಂದು ಠಾಕರೆ ತಿಳಿಸಿದರು.

ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಕೋವಿಡ್‌ ಮತ್ತು ಲಾಕ್‌ಡೌನ್‌ ಸಂದರ್ಭಗಳಲ್ಲಿ ತೀರಾ ಮಂದಗತಿಯಲ್ಲಿದ್ದ ಹುಬ್ಬಳ್ಳಿ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

ಕೋವಿಡ್‌ ಆರಂಭವಾದ ಬಳಿಕ ಏಪ್ರಿಲ್‌ನಲ್ಲಿ ದೇಶದಾದ್ಯಂತ ವಿಮಾನ ಸೌಲಭ್ಯವನ್ನು ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ಮೇ ನಲ್ಲಿ 67 ಪ್ರಯಾಣಿಕರಷ್ಟೇ ಇಲ್ಲಿನ ನಿಲ್ದಾಣ ಬಳಸಿಕೊಂಡಿದ್ದರು. ಜೂನ್‌ ವೇಳೆಗೆ 62ಕ್ಕೆ ಕುಸಿಯಿತು. ಸೋಂಕಿನ ಭೀತಿಯಿಂದ ಜನ ಪ್ರಯಾಣಕ್ಕೆ ಹಿಂದೇಟು ಹಾಕಿದ್ದರು.

ನಂತರದ ತಿಂಗಳುಗಳಲ್ಲಿ ಜುಲೈ (930 ಪ್ರಯಾಣಿಕರು), ಆಗಸ್ಟ್‌ (2,355), ಸೆಪ್ಟೆಂಬರ್‌ (5,742), ಅಕ್ಟೋಬರ್‌ (8,657) ಮತ್ತು ನವೆಂಬರ್‌ನಲ್ಲಿ (13,764) ಪ್ರಯಾಣಿಕರು ಇಲ್ಲಿನ ವಿಮಾನ ನಿಲ್ದಾಣ ಬಳಸಿಕೊಂಡಿದ್ದಾರೆ ಎಂದು ‘ಹುಬ್ಬಳ್ಳಿ ಏರ್‌ಪೋರ್ಟ್‌’ ಟ್ವೀಟ್‌ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು