ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಕಿಮ್ಸ್‌ ನಿರ್ದೇಶಕ ಹುದ್ದೆ: ವೈದ್ಯರ ಮಧ್ಯೆ ಪೈಪೋಟಿ

ಕಿಮ್ಸ್‌: ನಾಲ್ವರು ಪ್ರಬಲ ಆಕಾಂಕ್ಷಿಗಳು
Published 5 ಜುಲೈ 2023, 6:48 IST
Last Updated 5 ಜುಲೈ 2023, 6:48 IST
ಅಕ್ಷರ ಗಾತ್ರ

-ನಾಗರಾಜ್‌ ಬಿ.ಎನ್‌.

ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರ ಅಧಿಕಾರಾವಧಿ ಇನ್ನೂ 6 ತಿಂಗಳಲ್ಲಿ ಮುಗಿಯಲಿದೆ. ಆದರೆ, ಈಗಾಗಲೇ ಆ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.

ನಿರ್ದೇಶಕ ಸ್ಥಾನಕ್ಕೆ ವೈದ್ಯಕೀಯ ಅಧೀಕ್ಷಕ ಡಾ. ಸಿ. ಅರುಣಕುಮಾರ್‌, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಈಶ್ವರ ಹೊಸಮನಿ, ಕ್ಷಕಿರಣ ವಿಭಾಗದ ಮುಖ್ಯಸ್ಥ ಜಿ.ಸಿ. ಪಾಟೀಲ, ಉಪ ವೈದ್ಯಕೀಯ ಅಧಿಕ್ಷಕ ಡಾ. ರಾಜಶೇಖರ ದ್ಯಾಬೇರಿ ಮತ್ತು ಜೀವ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಎಂ.ಸಿ. ಚಂದ್ರು ಪ್ರಮುಖ ಆಕಾಂಕ್ಷಿಗಳು ಆಗಿದ್ದಾರೆ.

2019ರ ನವೆಂಬರ್‌ನಲ್ಲಿ ನಿರ್ದೇಶಕರ ಹದ್ದೆಗೆ ಆಯ್ಕೆ ಬಯಸಿ ಒಟ್ಟು 14 ವೈದ್ಯರು ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಪರಿಶೀಲಿಸಿದ ಆಯ್ಕೆ ಸಮಿತಿಯು ಐವರನ್ನು ಸಂದರ್ಶನಕ್ಕೆ ಆಹ್ವಾನಿಸಿತು. ಪ್ರಭಾರಿ ನಿರ್ದೇಶಕರಾಗಿದ್ದ ಡಾ. ರಾಮಲಿಂಗಪ್ಪ ಅಂಟರತಾನಿ, ಶರೀರಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಎಫ್‌. ಕಮ್ಮಾರ, ಜೀವ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಎಂ.ಸಿ. ಚಂದ್ರು ಮತ್ತು ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪಿ.ಕೆ. ವಾರಿ ಸಂದರ್ಶನಕ್ಕೆ ಹಾಜರಾದರು. ಔಷಧ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಎ.ಎನ್‌. ಅವರು ಗೈರಾದರು. ಡಾ. ರಾಮಲಿಂಗಪ್ಪ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ಕಿಮ್ಸ್‌ನ ಆಡಳಿತಾತ್ಮಕ ಹುದ್ದೆಯಲ್ಲಿ ಹಾಗೂ ವಿವಿಧ ವಿಭಾಗಗಳಲ್ಲಿ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿರುವ 50 ವರ್ಷ ಮೇಲ್ಪಟ್ಟವರು ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ನಿರ್ದೇಶಕರ ಆಯ್ಕೆ ಸಮಿತಿಯಲ್ಲಿ ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಸಚಿವರೇ ಮುಖ್ಯಸ್ಥರಾಗಿದ್ದು, ಅವರ ಸಮ್ಮುಖದಲ್ಲೇ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಅದಕ್ಕೂ ಮುನ್ನ ಅರ್ಜಿಗಳನ್ನು ಪರಿಶೀಲಿಸಲು ಸರ್ಕಾರವು ಉನ್ನತ ಮಟ್ಟದ ಆಯ್ಕೆ ಸಮಿತಿ ರಚಿಸುತ್ತದೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ಅರ್ಹವಾಗಿರುವುದನ್ನು ಅಂತಿಮಗೊಳಿಸಿ ಸಮಿತಿಯು ಸರ್ಕಾರದ ಮುಖ್ಯಕಾರ್ಯದರ್ಶಿಗೆ ವರದಿ ಸಲ್ಲಿಸುತ್ತದೆ. ಅದನ್ನು ಆಧರಿಸಿ ವೈದ್ಯಕೀಯ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಮುಖ್ಯ ಕಾರ್ಯದರ್ಶಿ ಒಳಗೊಂಡ ತಂಡ ನಿರ್ದೇಶಕರ ಸಂದರ್ಶನ ನಡೆಸುತ್ತದೆ.

ಪ್ರಭಾರಿಯಾಗಿ ಒಂದು ವರ್ಷ ಪೂರ್ಣಾವಧಿ ನಿರ್ದೇಶಕನಾಗಿ 4 ವರ್ಷ ಕಿಮ್ಸ್‌ನಲ್ಲಿ ಆಡಳಿತ ನಡೆಸಿದ್ದೇನೆ. ಮತ್ತೊಂದು ಅವಧಿಗೆ ಸ್ಪರ್ಧಿಸದೆ ಮೂಲ ಹುದ್ದೆಗೆ (ಪ್ರಸೂತಿ ಮತ್ತು ಮಕ್ಕಳ ವಿಭಾಗ) ತೆರಳುವೆ.
–ಡಾ. ರಾಮಲಿಂಗಪ್ಪ ಅಂಟರತಾನಿ ನಿರ್ದೇಶಕ ಕಿಮ್ಸ್‌
ಮುಂದಿನ ಅವಧಿಗೆ ಕಿಮ್ಸ್‌ ನಿರ್ದೇಶಕ ಹುದ್ದೆಯ ಆಕಾಂಕ್ಷಿಯಾಗಿದ್ದು ಅರ್ಜಿ ಸಲ್ಲಿಸುವೆ. ನಿರ್ದೇಶಕನಾಗುವ ಎಲ್ಲ ಅರ್ಹತೆಯೂ ನನಗಿದ್ದು ಅವಕಾಶಕ್ಕೆ ಕಾಯುತ್ತಿದ್ದೇನೆ.
– ಸಿ. ಅರುಣಕುಮಾರ, ವೈದ್ಯಕೀಯ ಅಧೀಕ್ಷಕ ಕಿಮ್ಸ್‌

‘ಒತ್ತಡ ಹೇರಲು ಯತ್ನ’

‘ಕಿಮ್ಸ್‌ ನಿರ್ದೇಶಕರ ಹುದ್ದೆ ಆಯ್ಕೆ ಪ್ರಕ್ರಿಯೆ ಅಕ್ಟೋಬರ್‌ ನವೆಂಬರ್‌ ತಿಂಗಳಲ್ಲಿ ನಡೆಯಲಿದೆ. ಕೆಲ ಆಕಾಂಕ್ಷಿಗಳು ರಾಜಕೀಯ ಮುಖಂಡರು ಮತ್ತು ಸಚಿವರ ಮೂಲಕ ಒತ್ತಡ ತರುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೂ ಕೆಲವರು ಸೇವಾ ಹಿರಿತನ ಹಾಗೂ ಅರ್ಹತೆ ಆಧಾರದಲ್ಲಿ ಹುದ್ದೆ ಬಯಸಿದ್ದಾರೆ’ ಎಂದು ಕಿಮ್ಸ್‌ ಹಿರಿಯ ವೈದ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT