ಸೋಮವಾರ, ಮೇ 23, 2022
30 °C
ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ವಾಗ್ದಾಳಿ

ಲಿಂಗಾಯತ ಸಮಾಜಕ್ಕೆ ಪ್ರಹ್ಲಾದ ಜೋಶಿ ಕಂಠಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಲಿಂಗಾಯತ ಸಮಾಜಕ್ಕೆ ಪ್ರಹ್ಲಾದ ಜೋಶಿ ಕಂಠಿಕವಾಗಿದ್ದಾರೆ. ಜಿಲ್ಲೆಯಲ್ಲಿ ಸಮಾಜ ಬೆಳೆಯಲು ಅವರು ಅವಕಾಶ ನೀಡುತ್ತಿಲ್ಲ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಆರೋಪಿಸಿದರು.

ಇಲ್ಲಿನ ಬೊಮ್ಮಾಪುರ ಓಣಿಯ ಶ್ರೀ ಗುರುಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಲಿಂಗಾಯತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ದೆಹಲಿ ಮಟ್ಟದಲ್ಲಿ ಗುರುತಿಸಿಕೊಳ್ಳದಂತೆ ಜೋಶಿ ತಡೆದಿದ್ದಾರೆ. ಹುಬ್ಬಳ್ಳಿಗೆ ಮೋದಿ ಬಂದಾಗ ವೇದಿಕೆಯ ಹಿಂಬದಿ ಸೀಟಿನಲ್ಲಿ ಶೆಟ್ಟರ್‌ ಅವರನ್ನು ಕೂರಿಸಿ ಅವಮಾನ ಮಾಡಿದ್ದಾರೆ’ ಎಂದು ದೂರಿದರು.

‘ಜೋಶಿ ಅವರು ನಮ್ಮ ಸಮಾಜದವರನ್ನೇ ನಮ್ಮ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಲಿಂಗಾಯತ ಮುಖಂಡರನ್ನು ತಮ್ಮ ಗುಲಾಮರಂತೆ ಇಟ್ಟುಕೊಂಡಿದ್ದಾರೆ. ಶೆಟ್ಟರ್‌, ಅರವಿಂದ ಬೆಲ್ಲದ ಅವರನ್ನು ಲಿಂಗಾಯತ ಸಮಾಜದ ದಾಳವನ್ನಾಗಿ ಬಳಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಕ್ಷೇತ್ರದಲ್ಲಿ ಎಲ್ಲೇ ಮತ ಕೇಳಲು ಹೋದರೂ ಮುಸ್ಲಿಮರು, ಕ್ರೈಸ್ತರು, ಹಿಂದುಳಿದವರು, ಎಸ್‌ಸಿ, ಎಸ್‌ಟಿ, ಕುರುಬರು ಸೇರಿದಂತೆ ಎಲ್ಲರೂ ಈ ಬಾರಿ ನಿಮಗೇ ವೋಟ್‌ ಹಾಕುತ್ತೇವೆ. ಮೊದಲು ನಿಮ್ಮ ಸಮಾಜದವರನ್ನು ಸುದ್ದ ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತಾರೆ. ಈಗಲಾದರೂ ನಮ್ಮ ಸಮಾಜದವರು ಎಚ್ಚೆತ್ತುಕೊಂಡು ಗಟ್ಟಿಗೊಳ್ಳಬೇಕಾಗಿದೆ’ ಎಂದರು.

‘ನಾನು ಬಿಲ್ಡಿಂಗ್‌ ಕಟ್ಟಿದರೂ, ಹೊಲ ಹಿಡಿದರೂ ಸಾಕು ಜೋಶಿ ಮಾಹಿತಿ ತೆಗೆಸುತ್ತಾರೆ. ಬ್ರಾಹ್ಮಣ ವಕೀಲರ ತಂಡವನ್ನು ಕಟ್ಟಿಕೊಂಡು ನನ್ನ ವಿರುದ್ಧ ದಿನಕ್ಕೊಂದು ಸುಳ್ಳು ಕೇಸುಗಳನ್ನು ದಾಖಲಿಸುತ್ತಾರೆ. ಗುರುನಾಥಗೌಡ ಮತ್ತು ಮುರುಘಾಮಠದ ಹಿಂದಿನ ಸ್ವಾಮೀಜಿ ಅವರಿಂದ ಪತ್ರಿಕಾಗೋಷ್ಠಿ ಮಾಡಿಸಿ ಸುಳ್ಳು ಆಪಾದನೆ ಮಾಡಿಸುತ್ತಾರೆ. ನನ್ನ ವಿರುದ್ಧ ಎಫ್‌ಐಆರ್‌ ದಾಖಲಾಗುವಂತೆ ಮಾಡಿದ್ದಾರೆ. ಹೆಜ್ಜೆ, ಹೆಜ್ಜೆಗೆ ತ್ರಾಸ್‌ ಕೊಡುತ್ತಿದ್ದಾರೆ. ಎದೆ ಗಟ್ಟಿ ಇದೆ ಎಂದು ನಾನು ಉಳಿದುಕೊಂಡಿದ್ದೇನೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಇದ್ದ ಲಿಂಗಾಯತ ಸಮಾಜದ ಅಧಿಕಾರಿಗಳು ಚುನಾವಣೆಯಲ್ಲಿ ನನ್ನ ಪರ ಕೆಲಸ ಮಾಡುತ್ತಾರೆ ಎಂದು ಅವರನ್ನು ಬೇರೆಡೆಗೆ ವರ್ಗಾಯಿಸಿಕೊಂಡು ಬಂದಿದ್ದಾರೆ. ಚುನಾವಣೆಯಲ್ಲಿ ಲಿಂಗಾಯತರ ವೋಟ್‌ ಮಾತ್ರ ಬೇಕು. ಆದರೆ, ಅಧಿಕಾರಿಗಳು ಮಾತ್ರ ಜೋಶಿ ಅವರಿಗೆ ಬೇಡವಾಗಿದ್ದಾರೆ’ ಆರೋಪಿಸಿದರು.

‘ನಾನು ಬ್ರಾಹ್ಮಣ ವಿರೋಧಿಯಲ್ಲ. ಬ್ರಾಹ್ಮಣ ಸಮಾಜದವರು ನನಗೆ ಈ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬ್ರಾಹ್ಮಣ ಸಮಾಜದ ನಾಲ್ಕೈದು ಸಭೆಯಲ್ಲಿ ಭಾಗವಹಿಸಿದ್ದೇನೆ. ಆದರೆ, ಲಿಂಗಾಯತ ಸಮಾಜದವರು ಜಿಲ್ಲೆಯಲ್ಲಿ ಬೆಳೆಯದಂತೆ ತಡೆ ಒಡ್ಡುತ್ತಿರುವ ದುರ್ಬದ್ದಿ, ದುಷ್ಟ ಜೋಶಿ ಅವರ ವಿರೋಧಿಯಾಗಿದ್ದೇನೆ’ ಎಂದು ಹೇಳಿದರು.

‘ವೀರಶೈವ ಮಹಾಸಭಾ ಹಾಗೂ ವೀರಶೈವ ಮಠಾಧೀಶರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಲಿಂಗಾಯತ ಸಮಾಜದವರು ನನಗೆ ಆಶೀರ್ವಾದ ಮಾಡಿದರೆ ಈ ಬಾರಿಯ ಚುನಾವಣೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಲಿಂಗಾಯತ ಸಮಾಜಕ್ಕೆ ಜೋಶಿ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ವಿರುದ್ಧ ಪಿತೂರಿ ಮಾಡಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಜೈಲಿಗೆ ಕುಳುಹಿಸುವಲ್ಲಿ ಜೋಶಿ ಮುಖ್ಯ ಪಾತ್ರ ವಹಿಸಿದ್ದರು’ ಎಂದು ಆರೋಪಿಸಿದರು.

ಲಿಡ್ಕರ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ಕ್ಷೇತ್ರದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತ ಸಮಾಜ ಈ ಬಾರಿ ವಿನಯ ಕುಲಕರ್ಣಿ ಪರವಾಗಿ ನಿಲ್ಲಬೇಕಾಗಿದೆ. ಅವರು ಆಯ್ಕೆಯಾದರೆ ಲಿಂಗಾಯತರು ಅಡುಗೆ ಮನೆವರೆಗೂ ಹೋಗಬಹುದು ಎಂದು ಹೇಳಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ಲಿಂಗಾಯತ ಸಮಾಜದ ಮಗ ವಿನಯ ಕುಲಕರ್ಣಿ  ಚುನಾವಣೆಗೆ ನಿಂತಿದ್ದಾನೆ. ಕ್ಷೇತ್ರದಲ್ಲಿ ಸಮಾಜದ 7 ಲಕ್ಷ ಮತಗಳಿವೆ. ಇದರಲ್ಲಿ 5 ಲಕ್ಷ ಕುಲಕರ್ಣಿಗೆ ಚಲಾವಣೆಯಾದರೂ ಸಾಕು ಗೆಲುವು ನಿಶ್ಚಿತ ಎಂದರು.

ಏ.23ರಂದು ನಡೆಯುವ ಚುನಾವಣೆಯು ಲಿಂಗಾಯತರ ಪಾಲಿಗೆ ಬಸವ ಜಯಂತಿಯಾಗಬೇಕು. ಸಮಾಜದ ಸ್ವಾಭಿಮಾನವನ್ನು ಎತ್ತಿಹಿಡಿಯುವ ಕೆಲಸ ಅಂದು ಆಗಬೇಕು ಎಂದರು.

ಮುಖಂಡರಾದ ಸದಾನಂದ ಡಂಗನವರ, ಪಿ.ಸಿ.ಸಿದ್ದನಗೌಡ ಪಾಟೀಲ, ನೀಲಕಂಠಪ್ಪ ಅಸೂಟಿ, ಮೋಹನ ಅಸುಂಡಿ, ಅಜ್ಜಪ್ಪ ಬೆಂಡಿಗೇರಿ, ವಿಜನಗೌಡ, ತಾರಾದೇವಿ ವಾಲಿ, ಪ್ರಕಾಶ ಬೆಂಡಿಗೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು