ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ. 2ರಂದು ಕಾಂಗ್ರೆಸ್‌ ರಾಜಕೀಯ ವ್ಯವಹಾರಗಳ ಸಮಿತಿ ಸಭೆ: ಡಿ.ಕೆ. ಶಿವಕುಮಾರ್‌

ಹುಬ್ಬಳ್ಳಿ ಖಾಸಗಿ ಹೋಟೆಲ್‌ನಲ್ಲಿ ಸಭೆ; ರಾಹುಲ್‌ ಗಾಂಧಿ ಭಾಗಿ
Last Updated 31 ಜುಲೈ 2022, 15:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜಸ್ಥಾನದ ಉದಯಪುರದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ, ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಹುಬ್ಬಳ್ಳಿ ಖಾಸಗಿ ಹೋಟೆಲ್‌ನಲ್ಲಿ ಆ. 2ರಂದು ರಾತ್ರಿ 8ಕ್ಕೆ ನಡೆಯಲಿದೆ’ ಎಂದು ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷದ ಮುಖಂಡ ರಾಹುಲ್‌ ಗಾಂಧಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿನ ರಾಜಕೀಯ ವಿದ್ಯಮಾನ, ಶೇ 40ರಷ್ಟು ಕಮಿಷನ್‌ ವ್ಯವಹಾರ, ಉದ್ಯೋಗ ಸಮಸ್ಯೆ, ಹದಗೆಟ್ಟ ಕಾನೂನು ಸುವ್ಯವಸ್ಥೆ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು’ ಎಂದರು.

‘ಆ. 30ರ ಒಳಗೆ ಎಲ್ಲ ರಾಜ್ಯದಲ್ಲಿಯೂ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಸಬೇಕು, ನ.30ರ ಒಳಗೆ ಗ್ರಾಮ ಪಂಚಾಯ್ತಿ ಹಾಗೂ ಬ್ಲಾಕ್‌ ಮಟ್ಟದಲ್ಲಿ ಸಮಿತಿ ರಚಿಸಬೇಕು. ಹಾಗೂ, ದೇಶದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಬೇಕು ಎಂದು ಉದಯಪುರದಲ್ಲಿ ನಡೆದ ವರಿಷ್ಠರ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಆ. 5ರಿಂದ 10ರ ಒಳಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 75 ಕಿ.ಮೀ. ಪಾದಯಾತ್ರೆ ನಡೆಸಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬರುವಲ್ಲಿ ಕಾಂಗ್ರೆಸ್‌ ಕೊಡುಗೆ ದೊಡ್ಡದು. ಅದನ್ನು ಜನರಿಗೆ ಮನವರಿಕೆ ಮಾಡಿಕೊಡಲು,ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಆ. 15ರಂದು ಮಧ್ಯಾಹ್ನ 2ಕ್ಕೆ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಗೊಳ್ಳಿ ರಾಯಣ್ಣ ಮೂರ್ತಿಯಿಂದ ನ್ಯಾಷನಲ್ ಕಾಲೇಜುವರೆಗೆ ನಡೆಯಲಿರುವ ಮೆರವಣಿಗೆಯಲ್ಲಿ ಅಂದಾಜು ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಜೆ ಕಾಲೇಜಿನ ಆವರಣದಲ್ಲಿ ರಾಜಕೀಯ ರಹಿತ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ಶಾಂತಿಯ ತೋಟದಂತಿರುವ ರಾಜ್ಯದಲ್ಲಿ ಮೂರು ಅಮಾಯಕರ ಹತ್ಯೆಯಾಗಿದೆ. ಹಿಂದೂ, ಮುಸ್ಲಿಂ ಯಾವುದೇ ಧರ್ಮದವರಿರಲಿ, ಹತ್ಯೆ ಖಂಡನೀಯ. ಯಾಕೆ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹತ್ಯೆಯಾದ ಒಬ್ಬ ವ್ಯಕ್ತಿಯ ಕುಟುಂಬಕ್ಕೆ ಮಾತ್ರ ಪರಿಹಾರ ನೀಡಲಾಗಿದೆ. ಎಲ್ಲರಿಗೂ ಪರಿಹಾರ ಘೋಷಿಸಬೇಕು. ಅವರ ಕುಟುಂಬದವರನ್ನು ನಾವು ಭೇಟಿಗೆ ಮುಂದಾದಾಗ‌ ಶಾಂತಿ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಪೊಲೀಸರು ನಿರಾಕರಿಸಿದ್ದಾರೆ’ ಎಂದು ತಿಳಿಸಿದರು.

‘ಬಿಜೆಪಿ ಕಾರ್ಯಕರ್ತರಿಗೆ ಅವರ ಸರ್ಕಾರದ ಮೇಲೆ ನಂಬಿಕೆಯಿತ್ತು. ದಿನಕಳೆದಂತೆ ಅವರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಪೊಲೀಸ್ ಗಿರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರದ್ದೇ ರಾಷ್ಟ್ರೀಯ ನಾಯಕರು ಹೇಳುತ್ತಿದ್ದಾರೆ. ಅವರಿಂದ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದಾದರೆ, ಚುನಾವಣೆಗೆ ಹೋಗಲಿ’ ಎಂದು ಸವಾಲು ಹಾಕಿದರು.

ಬಿಜೆಪಿಗೆ ಸ್ವಾತಂತ್ರ್ಯದ ಹಿನ್ನೆಲೆ ಗೊತ್ತಿಲ್ಲ: ಡಿಕೆಶಿ ವ್ಯಂಗ್ಯ

‘ಬೇಡಿಕೆಯಷ್ಟು ರಾಷ್ಟ್ರಧ್ವಜ ಪೂರೈಸಲು ಹಾಗೂ ಅದಕ್ಕೆ ತಗಲುವ ವೆಚ್ಚ ಜಾಸ್ತಿಯಾಗುತ್ತದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ‘ಎಂಟು ವರ್ಷಗಳಿಂದ ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ ಎದುರಾಗುತ್ತದೆ ಎನ್ನುವುದು ಅವರಿಗೆ ತಿಳಿದಿಲ್ಲವೇ? ರಾಷ್ಟ್ರ ಧ್ವಜ ಸಿದ್ಧಪಡಿಸಲು ಅದರದ್ದೇ ಆದ ಸಂಹಿತೆ ಇದೆ. ಖಾದಿಯಿಂದಲೇ ಅದನ್ನು ಸಿದ್ಧಪಡಿಸಿದರೆ ದೇಶದ 1.40 ಕೋಟಿ ಮಂದಿಗೆ ಉದ್ಯೋಗ ನೀಡಬಹುದಿತ್ತು. ಸ್ವಾತಂತ್ರ್ಯದ ಸಂಭ್ರಮದಲ್ಲಿ ಅವರು ಸಹ ಪಾಲ್ಗೊಳ್ಳುತ್ತಿದ್ದರು. ಹೀಗೆಲ್ಲ ಮಾತಾಡುವವರಿಗೆ ಸ್ವಾತಂತ್ರ್ಯದ ಹಿನ್ನೆಲೆ ಗೊತ್ತಿಲ್ಲ. ಸ್ವಾಭಾವಿಕವಾಗಿ ಮಾತನಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT