ಶನಿವಾರ, ಆಗಸ್ಟ್ 24, 2019
23 °C

ಟಿಪ್ಪು ಜಯಂತಿ ರದ್ದು ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

Published:
Updated:
Prajavani

ಹುಬ್ಬಳ್ಳಿ: ಟಿಪ್ಪು ಸುಲ್ತಾನ್‌ ಜಯಂತಿ ರದ್ದು ಪಡಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಟಿಪ್ಪು ವೇಷ ತೊಟ್ಟು, ಕೈಯಲ್ಲಿ ಖಡ್ಗ ಹಿಡಿದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಶಾಸಕ ಜಗದೀಶ ಶೆಟ್ಟರ್‌ ಅವರ ಚಿತ್ರ ಪ್ರದರ್ಶಿಸಿದ ಪ್ರತಿಭಟನಾಕಾರರು, ಬಳಿಕ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಹಾಗೂ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿದರು. ಮೆರವಣಿಗೆ ಮೂಲಕ ತಹಶೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಆಚರಿಸುತ್ತಾ ಬಂದಿದ್ದ ಟಿಪ್ಪು ಸುಲ್ತಾನ್‌ ಜಯಂತಿ ರದ್ದು ಮಾಡಿ ದ್ವೇಷದ ರಾಜಕಾರಣ ಮಾಡಿರುವುದು ಖಂಡನೀಯ. ಸರ್ಕಾರ ಆದೇಶವನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಅಪ್ಪಟ ದೇಶಭಕ್ತ, ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದ ’ಮೈಸೂರು ಹುಲಿ‘ ಟಿಪ್ಪು ಸುಲ್ತಾನ್‌ ಗೌರವಾರ್ಥ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಕ್ರಮಕೈಗೊಂಡಿದ್ದರು. ಆದರೆ, ಟಿಪ್ಪು ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನಾಲ್ಕೇ ದಿನದಲ್ಲಿ ಜಯಂತಿಯನ್ನು ರದ್ದು ಮಾಡಿರುವುದು ಖಂಡನೀಯ ಎಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದರು.

ಟಿಪ್ಪು ಜಯಂತಿ ಸರ್ಕಾರಿ ಆಚರಣೆಯನ್ನು ರದ್ದು ಮಾಡಿದ್ದರೂ ಸಹ ಪಕ್ಷದ ವತಿಯಿಂದ ನೂರುಪಟ್ಟು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಅವರು ಹೇಳಿದರು.

ರಾಷ್ಟ್ರಪತಿಗಳೇ ಟಿಪ್ಪುವಿನ ದೇಶಭಕ್ತಿ ಹಾಗೂ ಆತನ ಶೌರ್ಯದ ಬಗ್ಗೆ ಕೊಂಡಾಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಮುಖಂಡರಾದ ಗಣೇಶ ಟಗರಗುಂಟಿ, ಪ್ರಕಾಶ ಕ್ಯಾರಕಟ್ಟಿ, ವಿನೋದ ಅಸೂಟಿ, ಸಿದ್ದು ತೇಜಿ, ನವೀದ್‌ ಮುಲ್ಲಾ, ರಜತ್‌ ಉಳ್ಳಾಗಡ್ಡಿಮಠ, ಬಾಳಮ್ಮ ಜಂಗನ್ನವರ, ಪುಷ್ಪಾ ಅರಳಿಕಟ್ಟಿ, ಕಿರಣ ಮೂಗಬಸ್ತಿ, ನಜೀರ್‌ ಹೊನ್ನಾಳ್ಳಿ, ಷರೀಪ್‌ ಗರಗದ, ದುರ್ಗಪ್ಪ, ಬಸವರಾಜ ಬೆಣಕಲ್‌, ಶಬ್ಬೀರ್ ಅಹ್ಮದ್‌, ಅಬ್ದುಲ್‌ ಸತ್ತಾರ್‌, ಆರೀಫ್ ದೊಡ್ಡಮನಿ ಪಾಲ್ಗೊಂಡಿದ್ದರು.

Post Comments (+)