ಬುಧವಾರ, ಆಗಸ್ಟ್ 10, 2022
20 °C
ಹೊಲಗಳಲ್ಲಿ ನಿಲ್ಲುತ್ತಿರುವ ನೀರು, ಮೊಳಕೆಯೊಡೆಯುತ್ತಿರುವ ಬೀಜಗಳು

ಕುಂದಗೋಳ: ನಿರಂತರ ಮಳೆ; ರೈತರಲ್ಲಿ ಆತಂಕ

ಅಶೋಕ ಘೋರ್ಪಡೆ Updated:

ಅಕ್ಷರ ಗಾತ್ರ : | |

Prajavani

ಕುಂದಗೋಳ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿ ನೀರು ನಿಂತಿದ್ದು, ಬಿತ್ತನೆ ಮಾಡಿದ ಬೀಜಗಳು ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಮಳೆ ಸಮಯಕ್ಕೆ ಸರಿಯಾದ ಸಮಯಕ್ಕೆ ಆಗಿದ್ದರಿಂದ ತಾಲ್ಲೂಕಿನ ಬಹುತೇಕ ರೈತರು ಮುಂಗಾರು ಬಿತ್ತನೆಯ ಶೇಂಗಾ, ಹೆಸರು, ಸೋಯಾಬಿನ್, ಬಳ್ಳೊಳ್ಳಿ, ಉದ್ದು, ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ. ಬಿತ್ತಿದ ಬೀಜಗಳು ಮೊಳಕೆಯೊಡೆದು ನಿಂತಿವೆ. ಸೋಮವಾರ ಆರಂಭವಾಗಿರುವ ಮೃಗಶಿರಾ ಮಳೆ ಬಿಟ್ಟುಬಿಡದೇ ಸುರಿಯುತ್ತಿರುವುವದರಿಂದ ಬೆಳೆಗೆ ನೀರು ಆವರಿಸಿಕೊಂಡು ಕೊಳೆಯುವಂತಾಗಿದೆ. ರೈತರು ಬೇಸಿಗೆಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಹಾಕಿಕೊಂಡಿದ್ದ ಬದವು, ಒಡ್ಡುಗಳು ಒಡೆಯಲು ಆರಂಭಿಸಿರುವುದು ಆತಂಕ ಹೆಚ್ಚಿಸಿದೆ.

ಮಳೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿರುವುದರಿಂದ ಇಳಿಜಾರು ಪ್ರದೇಶದಲ್ಲಿರುವ ಹೊಲದ ನೀರು ಹರಿದು ಹೋದರೆ ಸಮತಟ್ಟಾದ ಹೊಲಗಳಲ್ಲಿ ತೇವಾಂಶ ಹೆಚ್ಚಾಗುತ್ತಿದೆ. ಬಿತ್ತನೆ ಬೀಜಗಳ ಮೇಲೆ ಇದರ ಪರಿಣಾಮವಾಗುತ್ತಿದೆ. ಮಳೆ ಈಗಿನಂತೆಯೇ ಮುಂದುವರೆದರೆ ಬಿತ್ತನೆ ಬೀಜಗಳು ಭೂಮಿಯಲ್ಲೇ ಕೊಳೆಯುವು‌ದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಪಟ್ಟಣದ ರೈತ ಮುದಕಪ್ಪ ಕುನ್ನೂರ.

ತಾಲ್ಲೂಕಿನಲ್ಲಿ ಮೇ ನಲ್ಲಿ ವಾಡಿಕೆ ಪ್ರಕಾರ  11.8 ಸೆಂ.ಮೀ. ಆಗಬೇಕಿತ್ತು. 18.4 ಸೆಂ.ಮೀ.ನಷ್ಟು ಮಳೆಯಾಗಿದೆ. ಜೂನ್‌ನಲ್ಲಿ 5.83 ಸೆಂ.ಮೀ.ನಷ್ಟು ಆಗಬೇಕಿತ್ತು. ಮಳೆಯ ಪ್ರಮಾಣ 8.81 ಸೆಂ.ಮೀ. ರಷ್ಟು ಆಗಿದೆ. ಈಗಿರುವಷ್ಟು ಮಳೆ ಸರಿಯಾಗಿದೆ. ಮಳೆ ಮುಂದುವರಿದರೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಸದಾಶಿವ ಖಾನೂರ.

’ಈ ವರ್ಷ ಮುಂಗಾರು ಬಿತ್ತನೆಗೆ ಸರಿಯಾದ ಸಮಯದಲ್ಲಿ ಮಳೆಯಾಗಿದ್ದಕ್ಕೆ ಖುಷಿಯಾಗಿತ್ತು. ಈಗ ಮಳೆ ಹೆಚ್ಚಾಗುತ್ತಿರುವುದಕ್ಕೆ ಆತಂಕ ಶುರುವಾಗಿದೆ. ಮಳೆ ಇಲ್ಲಿಗೆ ನಿಂತರೆ ಅನುಕೂಲ; ಇಲ್ಲವಾದರೆ ಬೆಳೆ ಹಾನಿಯಾಗುತ್ತದೆ ಎಂದು ಹಂಚಿನಾಳ ಗ್ರಾಮದ ರೈತ ಬಸಪ್ಪ ಮಾದರ ಆತಂಕ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು