ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ವೈದ್ಯರಿಗೆ ಧಾರವಾಡ ಐಐಟಿ ಪ್ರಾಧ್ಯಾಪಕರಿಂದ ಮುಖ ಕವಚ

Last Updated 3 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಧಾರವಾಡ: ಕೋವಿಡ್–19 ಸೋಂಕಿತ ವ್ಯಕ್ತಿಯ ಚಿಕಿತ್ಸೆ ನಡೆಸುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನೆರವಿಗೆ ಧಾವಿಸಿರುವ ಧಾರವಾಡ ಐಐಟಿ ಪ್ರಾಧ್ಯಾಪಕರು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗಾಗಿ 500ಕ್ಕೂ ಅಧಿಕ ಮುಖ ಕವಚಗಳನ್ನು ಸಿದ್ಧಪಡಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಅನುಸಾರ ಸಿದ್ಧಪಡಿಸಿರುವ ಈ ಮುಖ ಕಚವವು ವೈಯಕ್ತಿಕ ರಕ್ಷಣಾ ಸಾಧನದ ಭಾಗವಾಗಿದೆ. ರೋಗಿಗಳು ಕೆಮ್ಮು ಅಥವಾ ಸೀನಿನ ಮೂಲಕ ಹೊರಹಾಕುವ ಉಸಿರಾಟದ ಹನಿಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯ ಕಾರ್ಯಕರ್ತರು ಇದನ್ನು ತಮ್ಮ ಕನ್ನಡಕ ಮತ್ತು ಮುಖಗವಸಿನ ಮೇಲೆ ಧರಿಸುವಂತದ್ದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮೆಕ್ಯಾನಿಕಲ್ಎಂಜಿನಿಯರಿಂಗ್ ವಿಭಾಗದ ಪ್ರೊ.ಎಂ.ಎ. ಸೋಮಶೇಖರ, ‘ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್–19 ಸೋಂಕು ತಡೆಗೆ ಮುಖ ಕವಚಗಳ ಅವಶ್ಯಕತೆ ಇದೆ ಎಂದು ಜಿಲ್ಲಾಡಳಿತ ಮೂಲಕ ತಿಳಿಯಿತು. 3ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿ ಕೆಲವು ಮಾದರಿಗಳನ್ನು ತಯಾರಿಸಿ ಕಳುಹಿಸಲಾಗಿತ್ತು. ಅವುಗಳಲ್ಲಿ ಸೂಕ್ತವಾದದ್ದನ್ನು ವೈದ್ಯರು ಆಯ್ಕೆ ಮಾಡಿದರು’ ಎಂದು ತಿಳಿಸಿದರು.

‘ಲಭ್ಯವಿರುವ ವೈಯಕ್ತಿಕ ರಕ್ಷಣಾ ಸಾಧನ ಹೆಚ್ಚು ಗುಣಮಟ್ಟದ್ದಾಗಿರಲಿಲ್ಲ. ವೈರಾಣು ಸುಲಭವಾಗಿ ದೇಹ ಪ್ರವೇಶಿಸಲು ಸಾಧ್ಯವಿತ್ತು. ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡಾಗ ಈ ಸಾಧನದ ಅಭಿವೃದ್ಧಿಯಾಗಿದೆ. ಕಿಮ್ಸ್ ವೈದ್ಯರು ಈ ಸಾಧನದ ಗುಣಮಟ್ಟ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದು ತಿಳಿಸಿದರು.

ಇದೇ ವಿಭಾಗದ ಪ್ರಾಧ್ಯಾಪಕ ಪ್ರೊ. ಸೂರ್ಯಪ್ರಕಾಶ್ ಅವರು ಪ್ರತಿಕ್ರಿಯಿಸಿ, ‘ಸುಲಭವಾಗಿ ಲಭ್ಯವಾಗುವ ವಸ್ತುಗಳನ್ನೇ ಬಳಸಿ ಈ ಮುಖ ಕವಚವನ್ನು ಸಿದ್ಧಪಡಿಸಲಾಗಿದೆ. ಬೆಳಗಾವಿ, ಕಲಬುರ್ಗಿ ಜಿಲ್ಲೆ ಹಾಗೂ ಇತರ ಆಸ್ಪತ್ರೆಗಳಿಂದಲೂ ಇದಕ್ಕೆ ಬೇಡಿಕೆ ಬಂದಿದೆ. ಸದ್ಯ 500 ಮುಖ ಕವಚನಗಳನ್ನು ಸಿದ್ಧಪಡಿಸಲಾಗಿದೆ. ಬೇಡಿಕೆ ಇರುವಷ್ಟು ಪೂರೈಕೆ ಸದ್ಯಕ್ಕೆ ಸಾಧ್ಯವಿಲ್ಲ. ಈ ಮುಖ ಕವಚದ ಪ್ರತಿಯೊಂದು ಭಾಗದ ವಿನ್ಯಾಸವನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದ್ದು, ದೊಡ್ಡ ಮಟ್ಟದಲ್ಲಿ ತಯಾರಿಸಲು ಸಾಧ್ಯವಿದೆ. ಸ್ಥಳೀಯ ತಯಾರಕರು ಇದರ ವಿನ್ಯಾಸವನ್ನು ಕಲಿತು ಸಿದ್ಧಪಡಿಸಲು ಸಾಧ್ಯ’ ಎಂದರು.

ಈ ಮುಖ ಕವಚ ಅಭಿವೃದ್ಧಿಪಡಿಸುವಲ್ಲಿಆನಂದ್, ಪ್ರೊ. ಅಮರ್, ಪ್ರೊ. ಸುಧೀರ್, ಪ್ರೊ. ಸಮರ್ಥ್, ಪ್ರೊ. ಕೇದಾರ್, ಪ್ರೊ. ಸತೀಶ್, ಪ್ರೊ. ರಾಮಚಂದ್ರನ್, ರಾಮಚಂದ್ರ ಹಾಗೂ ರಾಷ್ಟ್ರೋತ್ಥಾನ ಶಾಲೆಯ ಕಾರ್ಯಕರ್ತರು ಕೈಜೋಡಿಸಿದ್ದಾರೆ. ಈ ತಂಡಕ್ಕೆ ಐಐಟಿ ಗುವಾಹಟಿಯ ಡಾ. ಸುರದೀಪ್ ದಾಸ್ ನೆರವಾಗಿದ್ದಾರೆ.ಮುಖ ಕವಚ ಕುರಿತು ಮಾಹಿತಿಗೆ ಇಮೇಲ್‌ (pro@iitdh.ac.in) ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಐಐಟಿ ಧಾರವಾಡ ಪತ್ರಿಕಾ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT