ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಿಂದಾದ ಬೆಳೆ ನಷ್ಟ‌ಕ್ಕೂ, ಸರ್ಕಾರದ ಪರಿಹಾರಕ್ಕೂ ಅಜಗಜಾಂತರ ವ್ಯತ್ಯಾಸ

ನಷ್ಟ ಅಧಿಕ: ಪರಿಹಾರ ಅಲ್ಪ
Last Updated 5 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆಹಾನಿ ಉಂಟಾಗಿ ಸಂಕಷ್ಟಕ್ಕೀಡಾಗಿರುವ ರೈತರಿಗೆ ಸರ್ಕಾರ ನೀಡುತ್ತಿರುವ ಪರಿಹಾರ ಅಲ್ಪ ಪ್ರಮಾಣದ್ದಾಗಿದೆ. ಬೆಳೆ ಬೆಳೆಯಲು ಮಾಡಿದ ವೆಚ್ಚಕ್ಕೂ, ಪರಿಹಾರಕ್ಕೂ ಅಜಗಜಾಂತರವಿದೆ ಎಂಬ ಆಕ್ಷೇಪ ರೈತರಿಂದ ಕೇಳಿಬರುತ್ತಿದೆ.

ಈಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪರಿಹಾರ ಹೆಚ್ಚಿಸಿದ್ದು, ಮಳೆಯಾಶ್ರಿತ ಬೆಳೆ ಹೆಕ್ಟೇರ್‌ಗೆ ಒಟ್ಟು ₹13,600, ನೀರಾವರಿ ಬೆಳೆಗೆ ₹25,000 ಹಾಗೂ ತೋಟಗಾರಿಕಾ ಬೆಳೆಗೆ ₹28,000 ಪರಿಹಾರ ನೀಡಲಾಗುತ್ತಿದೆ. ಇಷ್ಟು ಪರಿಹಾರ ನೀಡಿದರೂ ರೈತರಿಗಾದ ನಷ್ಟಕ್ಕೆ ಸಮವಾಗುವುದಿಲ್ಲ ಎಂಬುದು ರೈತರ ಅಭಿಪ್ರಾಯ.

‘ಕೃಷಿ ಭೂಮಿ ಸ್ವಚ್ಛ ಮಾಡುವ ಕೆಲಸದಿಂದ ಹಿಡಿದು, ಬೆಳೆ ರಾಶಿ ಮಾಡಿ ಸಾಗಿಸುವವರೆಗೆ ಹೆಕ್ಟೇರ್‌ಗೆ ಕನಿಷ್ಠ ₹30,000 ಖರ್ಚಾಗುತ್ತದೆ. ಕೃಷಿ ಕಾರ್ಮಿಕರ ಸಮಸ್ಯೆಯಿಂದ ಯಂತ್ರಗಳನ್ನೇ ಅವಲಂಬಿಸಬೇಕಿರುವ ಕಾರಣ ಕೃಷಿ ದುಬಾರಿಯಾಗಿದೆ. ಬೆಳೆಗೆ ಉತ್ತಮ ಬೆಲೆ ಇದ್ದರಷ್ಟೇ ರೈತರು ಒಂದಿಷ್ಟು ಲಾಭ ಕಾಣುತ್ತಾರೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಲಾಭ ಕಷ್ಟವಾಗಿದೆ. ಹೀಗಿರುವಾಗ, ಬೆಳೆ ನಷ್ಟಕ್ಕೆ ಸರ್ಕಾರ ನೀಡುತ್ತಿರುವ ಪರಿಹಾರ ಏನಕ್ಕೂ ಸಾಲುವುದಿಲ್ಲ’ ಎಂದು ರೈತ ಮುಖಂಡ ಸಿದ್ದು ತೇಜಿ ಹೇಳಿದರು.

‘ಎರಡೂವರೆ ಎಕರೆಯಲ್ಲಿ ಗೋವಿನಜೋಳ ಬೆಳೆದಿದ್ದೆ, ಮಳೆಯಿಂದ ಬಹುತೇಕ ಬೆಳೆ ನಷ್ಟವಾಯಿತು. ಬಿತ್ತನೆ ಬೀಜ, ಗೊಬ್ಬರ, ಕೃಷಿ ಕಾರ್ಮಿಕರಿಗೆ ಕೂಲಿ ಸೇರಿ ಎಕರೆಗೆ ₹15,000 ಖರ್ಚು ಮಾಡಿದ್ದೆ. ಆದರೆ ಪರಿಹಾರ ₹5,000 ಮಾತ್ರ ನೀಡಿದ್ದಾರೆ. ಮೂರು ವರ್ಷಗಳಲ್ಲಿ ಒಮ್ಮೆಯೂ ವಿಮೆ ಹಣ ಬಂದಿಲ್ಲ. ಈ ಬಾರಿ ವಿಮೆಯ ಹಣ ನೀಡುವ ಭರವಸೆ ನೀಡಿದ್ದಾರೆ. ಬೇಸಾಯದಲ್ಲಿ ಆದಾಯ ಇಲ್ಲದ ಕಾರಣಕ್ಕೆ ಗುಳೆ ಹೋಗಬೇಕಾದ ಪರಿಸ್ಥಿತಿಯಿದೆ’ ಎಂದು ದ್ಯಾವನಕೊಂಡದ ಶಂಕರಗೌಡ ಫಕೀರಗೌಡ ಬಾವಿಕಟ್ಟಿ ಅಲವತ್ತುಕೊಂಡರು.

‘ಮಳೆಗೆ ಮೂರು ಎಕರೆಯಲ್ಲಿ ಬೆಳೆದಿದ್ದ ಭತ್ತ ಹಾನಿಯಾಯಿತು. ಕೇವಲ ₹10,200 ಪರಿಹಾರ ಖಾತೆಗೆ ಜಮಾ ಆಗಿದೆ. ಅಳಿದುಳಿದ ಭತ್ತ ಕಪ್ಪಾಗಿದ್ದು, ಕ್ವಿಂಟಲ್‍ಗೆ ₹800-900 ಮಾತ್ರ ಕೇಳುತ್ತಾರೆ. ಬೆಳೆವಿಮೆ ನೀಡಲು ಈವರೆಗೆ ಸಮೀಕ್ಷೆಗೂ ಯಾರೂ ಬಂದಿಲ್ಲ’ ಮಲಕನಕೊಪ್ಪದ ರೈತ ನಿಂಗಪ್ಪ ಮಾ. ಪಾಳೇದ ತಿಳಿಸಿದರು.

ವಿಮೆಯಿಂದ ದೂರ ಉಳಿದ ಕೆಲ ರೈತರು: ‘ಬೆಳೆಗಳಿಗೆ ಸಮಸ್ಯೆಯಾದರೆ ಒಂದಿಷ್ಟು ಹಣವಾದರೂ ಸಿಗುತ್ತದೆ ಎಂಬ ಆಸೆಯಿಂದ ಈ ಮೊದಲು ಬೆಳೆವಿಮೆ ಕಟ್ಟುತ್ತಿದ್ದೆ. ಕಳೆದ ವರ್ಷ ಬೆಳೆಹಾನಿಯಾದಾಗ ಸಿಕ್ಕ ವಿಮೆ ಹಣ ತೀರಾ ಕಡಿಮೆಯಾಗಿತ್ತು. ಅದೇ ಕಾರಣಕ್ಕೆ ಈ ವರ್ಷ ವಿಮೆಯಿಂದ ದೂರ ಉಳಿದೆ. ಸರ್ಕಾರ ನೀಡುವ ಪರಿಹಾರಕ್ಕಾಗಿ ಎದುರು ನೋಡುತ್ತಿರುವೆ’ ಎಂದು ಕಲಘಟಗಿ ತಾಲ್ಲೂಕು ಬೇಗೂರಿನ ರೈತ ಸಾನಂದ ಮಲ್ಲೇಶಪ್ಪ ಮೇಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT