ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಸಮುದ್ರ ಮೀನಿನ ದರ ಕೊಂಚ ಇಳಿಕೆ: ಮತ್ಸ್ಯಾಹಾರಿಗಳ ಮೊಗದಲ್ಲಿ ಮಂದಹಾಸ

Published 3 ಆಗಸ್ಟ್ 2024, 5:57 IST
Last Updated 3 ಆಗಸ್ಟ್ 2024, 5:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಗಣೇಶಪೇಟೆಯಲ್ಲಿ ಮೀನುಗಳ ದರ ಕೊಂಚ ತಗ್ಗಿದೆ. ಖರೀದಿಸುವವರ ಮೊಗದಲ್ಲಿ ಮಂದಹಾಸ ಮೂಡಿದೆ. ಎರಡು ತಿಂಗಳ ಹಿಂದೆ ದುಬಾರಿಯಿದ್ದ ದರ, ಈಗ ಕಡಿಮೆಯಾಗಿದೆ.

ಆಳ ಸಮುದ್ರ ಮೀನುಗಾರಿಕೆ ಮೇಲಿದ್ದ ಎರಡು ತಿಂಗಳ ನಿಷೇಧ, ಹವಾಮಾನ ವೈಪರೀತ್ಯ, ಗುಡ್ಡ ಕುಸಿತದಿಂದ ರಸ್ತೆ ಬಂದ್‌ ಮತ್ತಿತರ ಕಾರಣಗಳಿಂದ ಮೀನಿನ ದರ ಏರುಮುಖವಾಗಿತ್ತು. ಈಗ ನಿಷೇಧದ ಅವಧಿ ಮುಗಿದಿದೆ. ಎಲ್ಲವೂ ಸಹಜಸ್ಥಿತಿಗೆ ಮರಳುತ್ತಿದೆ.

ಕಾರವಾರ, ಭಟ್ಕಳ, ಅಂಕೋಲಾ, ಕುಮಟಾ, ಹೊನ್ನಾವರ, ಮಂಗಳೂರು ಬಂದರಿನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧವಿದ್ದರೂ ಮಹಾರಾಷ್ಟ್ರ, ಗೋವಾದಿಂದ ಹುಬ್ಬಳ್ಳಿ ಮಾರುಕಟ್ಟೆಗೆ ಮೀನು ಪೂರೈಕೆ ಆಗುತ್ತಿತ್ತು. ಇದರಿಂದ ಮಾರುಕಟ್ಟೆಯಲ್ಲಿ ಮೀನಿನ ಕೊರತೆ ಉಟಾಗಿತ್ತು. ಇದರಿಂದ ದರ ದುಪ್ಪಟ್ಟಾಗಿತ್ತು.

ತಿಂಗಳ ಹಿಂದೆ ಸಾವಿರ ಗಡಿ ದಾಟಿದ್ದ ನೋಗ್ಲಿ (ಕಾಣೆ), ಪಾಂಪ್ರೆಟ್‌, ಸುರಮೈ (ಇಶ್ವಾಣ) ಮೀನುಗಳ ದರ ಮೂರಂಕಿಗೆ ಇಳಿದಿದೆ. ₹1,600 ಇದ್ದ ಪಾಂಪ್ರೆಟ್‌ ದರ ಈಗ ₹800 (ದೊಡ್ಡ ಗಾತ್ರದ್ದು) ₹350 (ಸಣ್ಣ ಗಾತ್ರದ್ದು)ಕ್ಕೆ ಸಿಗಲಿದೆ. ₹1,550 ಇದ್ದ ಸುರಮೈ ದರ ₹990ಕ್ಕೆ ಇಳಿದಿದೆ.

‘ಸಹಜವಾಗಿ ಆಗಸ್ಟ್‌ ತಿಂಗಳು ಎಂದರೆ ಅದು ಮೀನಿನ ಸುಗ್ಗಿ ಸಮಯ. ಮೀನಿನ ದರದಲ್ಲಿ ಇಳಿಕೆ ಸಾಮಾನ್ಯ. ಆದರೆ ಇದೇ ವೇಳೆ ಶ್ರಾವಣ ಮಾಸ ಆರಂಭವಾಗುವುದದರಿಂದ ಈ ಮಾಸದಲ್ಲಿ ಅರ್ಧದಷ್ಟು ಮಾಂಸಾಹಾರಿಗಳು ಮೀನು, ಮಾಂಸಾಹಾರ ತ್ಯಜಿಸುವ ಕಾರಣ ಮೀನಿನ ದರ ಕಡಿಮೆಯಾಗುತ್ತದೆ. 30ಕ್ಕೂ ಹೆಚ್ಚು ಬಗೆಯ ಸಮುದ್ರ ಮೀನುಗಳು ಗಣೇಶಪೇಟೆಯಲ್ಲಿ ಸಿಗುತ್ತವೆ’ ಎಂದು ಮೀನಿನ ವ್ಯಾಪಾರಿ ಮೋಯಿನ್‌ ಖರಾತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರಾವಳಿ ಭಾಗದಿಂದ ಪ್ರತಿ ದಿನ 20 ಟನ್‌ ಮೀನುಗಳು ಹುಬ್ಬಳ್ಳಿಯ ಗಣೇಶಪೇಟೆ ಮೀನು ಮಾರುಕಟ್ಟೆಗೆ ಬರುತ್ತವೆ.  ಮೀನುಗಾರಿಕೆಗೆ ನಿಷೇಧವಿದ್ದ ವೇಳೆ ಹುಬ್ಬಳ್ಳಿಯಿಂದಲೇ ಮಲ್ಪೆ, ಕಾರವಾರ, ಅಂಕೋಲಾ ಸಮೇತ ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೂ ಪೂರೈಸುತ್ತೇವೆ. ಆಗಸ್ಟ್‌ 15ರ ಬಳಿಕ ಮೀನಿನ ದರ ಅರ್ಧದಷ್ಟು ಕಡಿಮೆ ಆಗಲಿದೆ’ ಎಂದು ಸಗಟು ವ್ಯಾಪಾರಿ ಮೊಹಮ್ಮದ್‌ ಯಸೂಪ್‌ ಧಾರವಾಡಕರ್‌ ತಿಳಿಸಿದರು.

ಆಂಧ್ರಪ್ರದೇಶ ಹಾಗೂ ತಮಿಳನಾಡಿನಿಂದ ಮೀನು ತರಿಸಲಾಗುತ್ತದೆ. ಆಗಸ್ಟ್‌ 15ರ ನಂತರ ಕರಾವಳಿ ಭಾಗಗಳಿಂದ ಮೀನು ಬರಲಿವೆ. ಅಲ್ಲಿವರೆಗೆ ಕರಾವಳಿ ಭಾಗಕ್ಕೆ ಹುಬ್ಬಳ್ಳಿಯಿಂದ ಮೀನು ಪೂರೈಕೆಯಾಗುತ್ತವೆ.
ಮೊಹಮ್ಮದ್‌ ಯಸೂಪ್‌ ಧಾರವಾಡಕರ್‌ ಮೀನಿನ ಸಗಟು ವ್ಯಾಪಾರಿ 
ಮೀನಿನ ದರ ಏಷ್ಟೇ ಏರಿಕೆಯಾದರೂ ನಮಗೆ ಮಾತ್ರ ಊಟದಲ್ಲಿ ಸಮುದ್ರ ಮೀನು ಬೇಕು. ನಮಗೆ ಈ ದರದ ಏರಿಳಿತ ಲೆಕ್ಕಕ್ಕಿಲ್ಲ
ಜೋಸೆಫ್‌ ವೆಸ್ಲಿ ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT