ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಕೈಗಾರಿಕೆಗಳಿಗೆ ಬೇಡಿಕೆ ಕೊರತೆ

ತಲುಪದ ಪ್ಯಾಕೇಜ್‌; ಹೊರ ರಾಜ್ಯಗಳ ಮೇಲೂ ಅವಲಂಬಿತ
Last Updated 6 ಮೇ 2020, 9:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್ ಸಡಿಲವಾಗಿ ಕೈಗಾರಿಕೆಗಳು ಆರಂಭಿಸಲು ಅನುಮತಿ ಇದ್ದರೂ, ಅವುಗಳ ಕಾರ್ಯಾರಂಭಕ್ಕೆ ‘ಬೇಡಿಕೆ’ಯ ಕೊರತೆಯೇ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳ ಸಂಕಷ್ಟ ಅಧಿಕವಾಗುತ್ತಲೇ ಇದೆ.

ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಹಾಗೂ ಆರ್.ಬಿ.ಐ ಪ್ಯಾಕೇಜ್‌ಗಳನ್ನು ಘೋಷಿಸಿದ್ದರೂ ಅವುಗಳು ಇನ್ನೂ ಕೈಗಾರಿಕೆಗಳಿಗೆ ತಲುಪಿಲ್ಲ. ಇದರ ಜೊತೆಗೆ, ಕೈಗಾರಿಕೆಗಳು ಹಿಂದೆ ಪೂರೈಸಿದ್ದ ಉತ್ಪನ್ನಗಳಿಗೆ ಬರಬೇಕಿರುವ ಹಣವೂ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೇ, ಕಟ್ಟಡ ಬಾಡಿಗೆ, ವಿದ್ಯುತ್ ಬಿಲ್, ಕಾರ್ಮಿಕರಿಗೆ ವೇತನ ಎಲ್ಲವನ್ನೂ ನಿಭಾಯಿಸಬೇಕಿದೆ.

ಆಟೊಮೊಬೈಲ್, ಗೃಹೋ ಪಯೋಗಿ ವಸ್ತುಗಳು ಸೇರಿದಂತೆ ಐಷಾರಾಮಿ ಉತ್ಪನ್ನಗಳ ಬಿಡಿ ಭಾಗಗಳನ್ನು ಬಹುತೇಕ ಸಣ್ಣ-ಮಧ್ಯಮ ಕೈಗಾರಿಕೆಗಳು ತಯಾರಿಸುತ್ತವೆ. ಆದರೆ ಈ ಬೃಹತ್ ಉದ್ಯಮಗಳು ಇನ್ನೂ ಆರಂಭವಾಗಿಲ್ಲ. ಐಷಾರಾಮಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿಲ್ಲ. ಹೀಗಾಗಿ, ಕೈಗಾರಿಕೆಗಳಿಗೆ ಬಿಡಿಭಾಗಗಳ ತಯಾರಿಕೆ ಬೇಡಿಕೆ ಬರುತ್ತಿಲ್ಲ.

ಇನ್ನು, ಸಣ್ಣ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿಗಳನ್ನು ಪೂರೈಸುವವರು, ಉತ್ಪನ್ನಗಳನ್ನು ಖರೀದಿಸುವವರು ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇತರೆ ರಾಜ್ಯದಲ್ಲಿದ್ದಾರೆ. ಅಲ್ಲಿ ಇದೀಗ ಯಾವ ಚಟುವಟಿಕೆ ಇಲ್ಲ. ದಾಸ್ತಾನಿನಲ್ಲಿರುವ ಉತ್ಪನ್ನಗಳು ಮಾರಾಟವಾದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದಾರೆ. ಹೀಗಾಗಿ, ಸಣ್ಣ ಕೈಗಾರಿಕೆಗಳು ಅವಕಾಶವಿದ್ದರೂ ಕಾರ್ಯಾರಂಭ ಮಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿವೆ.

‘ಈಗ ಸರಿಯಾಗಿ ಕಾರ್ಮಿಕರು ಸಿಗುತ್ತಿಲ್ಲ, ಬಹುತೇಕರೆಲ್ಲ ಹೊರಗೆ ಹೋಗಿಬಿಟ್ಟಿದ್ದಾರೆ. ನಾವು ವಾಷಿಂಗ್ ಮೆಷಿನ್ ನ ಬಿಡಿಭಾಗಗಳನ್ನು ತಯಾರಿಸುತ್ತೇವೆ. ಇವು ಐಷಾರಾಮಿ ಉತ್ಪನ್ನವಾಗಿರುವುದರಿಂದ ಈ ಬಗ್ಗೆ ಯಾರೂ ತಲೆಗೆ ಹಾಕಿಕೊಳ್ಳುವುದಿಲ್ಲ. ಏಕೆಂದರೆ ಈಗ ಅದನ್ನು ಖರೀದಿಸುವವರು ಇಲ್ಲ. ಮನೆ ನಡೆಸಬೇಕು, ಅನಿವಾರ್ಯ ಅಗತ್ಯಗಳ ಬಗ್ಗೆ ಮಾತ್ರ ಜನ ಪ್ರಾಮುಖ್ಯ ನೀಡುತ್ತಾರೆ. ಹೀಗಾಗಿ ಜನರು ಖರೀದಿಗೆ ಮುಂದಾಗುವವರೆಗೆ ಕೈಗಾರಿಕೆಗಳು ಸಂಕಷ್ಟದಲ್ಲೇ ಇರಬೇಕಾಗುತ್ತದೆ’ ಎನ್ನುತ್ತಾರೆ ಧಾರವಾಡದ ಗಾಮನಗಟ್ಟಿಯ ಗ್ರೀನ್ ಟೆಕ್ ಇಂಡಸ್ಟ್ರಿಯಲ್ ಪಾರ್ಕ್ ಅಧ್ಯಕ್ಷ ನಾಗರಾಜ್ ದೀವಟೆ.

‘ಉತ್ಪನ್ನಗಳು ಸಿದ್ಧವಾದರೂ ಅವುಗಳನ್ನು ಕೊಂಡೊಯ್ಯಲು ಬೇಡಿಕೆ ನೀಡಿರುವ ಕಂಪನಿಗಳು ಮುಂದಾಗುತ್ತಿಲ್ಲ. ಸರ್ಕಾರ ಎಲ್ಲವನ್ನೂ ಘೋಷಣೆಗೆ ಸೀಮಿತವಾಗಿಸಿರುವುದರಿಂದ ಕೈಗಾರಿಕೆಗಳು ಕಾರ್ಯಾರಂಭ ಮಾಡಿದರೆ ಇನ್ನೂ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗುತ್ತವೆ' ಎಂದರು.

‘ಇದಲ್ಲದೆ, ಬ್ಯಾಂಕ್ ಗಳಿಂದ ಪಡೆದಿರುವ ಸಾಲವನ್ನು ತೀರಿಸಬೇಕಿದೆ. ಮಾಸಿಕ ಕಂತು ಮುಂದಕ್ಕೆ ಹೋಗಿದ್ದರೂ ಅದರ ಮೇಲಿನ ಬಡ್ಡಿ ಮತ್ತೆ ಹೊರೆಯೇ ಆಗುತ್ತದೆ. ನಮಗೆ ಬರಬೇಕಿರುವ ಪೇಮೆಂಟ್ ಬರುತ್ತಿಲ್ಲ. ಏಕೆಂದರೆ, ನಮಗೆ ಕೊಡಬೇಕಾದವರಿಗೂ ಹಣ ಬಂದಿಲ್ಲ. ಕಾರ್ಮಿಕರ ವೇತನದ ಶೇ 50ರಷ್ಟು ಹಣದ ಪ್ಯಾಕೇಜ್ ಕೊಡಿ, ವಿದ್ಯುತ್ ಬಿಲ್‌ಗೆ ವಿನಾಯಿತಿ ಕೊಡಿಸಿ ಎಂದೂ ಸರ್ಕಾರಗಳನ್ನು ಕೇಳಿದ್ದೆವು. ಆದರೆ ಯಾವುದೂ ಆಗಿಲ್ಲ. ಈಗ ಇದೆಲ್ಲ ನಮ್ಮ ತಲೆಗೇ ಬಂದಿದೆ’ ಎಂಬುದು ಕೈಗಾರಿಕೋದ್ಯಮಿಗಳ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT