ಶನಿವಾರ, ಸೆಪ್ಟೆಂಬರ್ 18, 2021
27 °C
ಸ್ವಾತಂತ್ರ್ಯ ದಿನಾಚರಣೆ: ಕೆಕೆಜಿಎಸ್‌ಎಸ್‌ನಿಂದ ₹92 ಲಕ್ಷ ಮೊತ್ತದ ಧ್ವಜಗಳ ಮಾರಾಟ

ಹುಬ್ಬಳ್ಳಿ: ‘ರಾಷ್ಟ್ರಧ್ವಜ’ ಬೇಡಿಕೆ ತುಸು ಚೇತರಿಕೆ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಇಲ್ಲಿನ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಲ್ಲಿ (ಕೆಕೆಜಿಎಸ್‌ಎಸ್‌) ಈ ಬಾರಿ ರಾಷ್ಟ್ರಧ್ವಜಗಳ ಬೇಡಿಕೆ ತುಸು ಚೇತರಿಕೆ ಕಂಡಿದೆ.ಕೋವಿಡ್ ಎರಡನೇ ಅಲೆಯ ಅಬ್ಬರ ತಗ್ಗಿದ ನಂತರ, ಸಂಸ್ಥೆಯ ವಹಿವಾಟು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಇದುವರೆಗೆ ₹92 ಲಕ್ಷ ಮೌಲ್ಯದ ವಿವಿಧ ಅಳತೆಯ ಧ್ವಜಗಳು ಮಾರಾಟವಾಗಿವೆ. ಕಳೆದ ವರ್ಷ ಕೋವಿಡ್‌ನಿಂದಾಗಿ ವಹಿವಾಟು ಪಾತಾಳಕ್ಕೆ ಕುಸಿದಿತ್ತು. ಕಾರ್ಮಿಕರಿಗೆ ವೇತನ ಪಾವತಿಸಲಾಗದ ಸ್ಥಿತಿ ಒದಗಿ ಬಂದಿತ್ತು.

‘ರಾಷ್ಟ್ರಧ್ವಜ ತಯಾರಿಕೆಗಾಗಿ ಬ್ಯುರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ಮಾನ್ಯತೆ ಪಡೆದಿರುವ ಏಕೈಕ ಸಂಸ್ಥೆ ನಮ್ಮದು. ಧ್ವಜ ಮಾರಾಟದಿಂದಲೇ ವಾರ್ಷಿಕ ₹2 ಕೋಟಿಗೂ ಹೆಚ್ಚು ಆದಾಯ ಬರುತ್ತಿತ್ತು. ಆದರೆ, ಕಳೆದ ವರ್ಷ ಕೇವಲ ₹56 ಲಕ್ಷದ ಉತ್ಪನ್ನ ಮಾರಾಟವಾಗಿತ್ತು’ ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ದೆಹಲಿ, ಗುಜರಾತ್‌ನಿಂದ ಹೆಚ್ಚಿನ ಬೇಡಿಕೆ:

‘ಕೋವಿಡ್‌ನಿಂದಾಗಿ ಬಂದ್ ಆಗಿದ್ದ ಶಿಕ್ಷಣ ಸಂಸ್ಥೆಗಳು, ಈ ಸಲ ತೆರೆದಿವೆ. ಸರ್ಕಾರಿ ಕಚೇರಿಗಳಿಂದಲೂ ಎಂದಿನಂತೆ ಬೇಡಿಕೆ ಬಂದಿದೆ. ಹೊರ ರಾಜ್ಯಗಳ ಪೈಕಿ, ದೆಹಲಿ ಮತ್ತು ಗುಜರಾತ್‌ ರಾಜ್ಯಗಳು ಅತಿ ಹೆಚ್ಚು ₹20 ಲಕ್ಷ ಮೌಲ್ಯದ ಧ್ವಜಗಳನ್ನು ಖರೀದಿಸಿವೆ. ದೆಹಲಿಯ ಖಾದಿ ಭಂಡಾರದಿಂದ ಸಂಸತ್ತು ಮತ್ತು ವಿದೇಶಗಳಲ್ಲಿರುವ ಭಾರತದ ರಾಯಭಾರಿ ಕಚೇರಿಗಳಿಗೆ ಧ್ವಜ ಪೂರೈಕೆಯಾಗುತ್ತದೆ’ ಎಂದು ಹೇಳಿದರು.

‘ಮಹಾರಾಷ್ಟ್ರ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಪಂಜಾಬ್, ಬಿಹಾರ, ಹರಿಯಾಣ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ರಾಜಸ್ಥಾನ, ಸಿಕ್ಕಿಂ, ಛತ್ತೀಸಗಡ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಬೇಡಿಕೆ ಬಂದಿರುವುದು ಸಮಾಧಾನ ತಂದಿದೆ. ಒಟ್ಟಿನಲ್ಲಿ ಕೋವಿಡ್ ಬಳಿಕ ಸಂಸ್ಥೆಯ ಧ್ವಜದ ವಹಿವಾಟು ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ’ ಎಂದರು.

‘2021–22ನೇ ಹಣಕಾಸು ವರ್ಷದಲ್ಲಿ ಇದುವರೆಗೆ ₹92 ಲಕ್ಷ ವಹಿವಾಟು ನಡೆದಿದೆ. ಬರುವ ಜನವರಿಯ ಗಣರಾಜ್ಯೋತ್ಸವಕ್ಕೂ ಮಾರಾಟ ಮತ್ತಷ್ಟು ಪ್ರಗತಿ ಕಾಣಬಹುದು. ಅಲ್ಲದೆ, 2022ನೇ ಆಗಸ್ಟ್ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಲಿದೆ. ಈ ಸಂದರ್ಭವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷವಾಗಿ ಆಚರಿಸುವ ಸಾಧ್ಯತೆ ಇರುವುದರಿಂದ, ತ್ರಿವರ್ಣ ಧ್ವಜಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ದಾಖಲೆಯ ವಹಿವಾಟು ನಡೆಯುವ ನಿರೀಕ್ಷೆ ಇದೆ’ ಎಂದು ಆಶಾಭಾವ ವ್ಯಕ್ತಪಡಿಸಿದರು.

ನನೆಗುದಿಗೆ ಬಿದ್ದ ಮ್ಯೂಸಿಯಂ ನಿರ್ಮಾಣ

ಹದಿಮೂರು ಎಕರೆಯಲ್ಲಿರುವ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಲಿ ರಾಷ್ಟ್ರಧ್ವಜ ಹಾಗೂ ಇತರ ಖಾದಿ ಉತ್ಪನ್ನಗಳ ಮಾರಾಟಕ್ಕಾಗಿ ಖಾದಿ ಎಂಪೋರಿಯಂ ಹಾಗೂ ಧ್ವಜದ ಮ್ಯೂಸಿಯಂ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ.

‘ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ 2015ರಲ್ಲಿ ₹1 ಕೋಟಿ ಘೋಷಿಸಿತ್ತು. ಆ ಪೈಕಿ, ಬಿಡುಗಡೆಯಾದ ₹30 ಲಕ್ಷದಲ್ಲಿ ಕಟ್ಟಡದ ಅಡಿಪಾಯ ಸೇರಿದಂತೆ ಕೆಲ ಕಾಮಗಾರಿ ನಡೆದಿದೆ. ಉಳಿದ ಮೊತ್ತ ಇನ್ನೂ ಬಾರದಿರುವುದರಿಂದ ಕಟ್ಟಡ ನಿರ್ಮಾಣ ಅರ್ಧಕ್ಕೇ ನಿಂತಿದೆ’ ಎಂದು ಶಿವಾನಂದ ಮಠಪತಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.