ಕುಡಿಯುವ ನೀರಿನ ಶಾಶ್ವತ ಯೋಜನೆಗೆ ಬೇಡಿಕೆ

7

ಕುಡಿಯುವ ನೀರಿನ ಶಾಶ್ವತ ಯೋಜನೆಗೆ ಬೇಡಿಕೆ

Published:
Updated:
Prajavani

ಧಾರವಾಡ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ಇದ್ದರೂ ಬೊಗಸೆ ನೀರಿಗೆ ಅಭಾವ ಆಗದಿರಲಿ ಎಂಬ ಪ್ರಾರ್ಥನೆ ಜಿಲ್ಲೆಯ ಜನರದ್ದು.

ಜಿಲ್ಲೆಯ ಕುಂದಗೋಳ, ಹುಬ್ಬಳ್ಳಿ ತಾಲ್ಲೂಕಿನ ಕೆಲ ಭಾಗ, ಅಳ್ನಾವರ ಪಟ್ಟಣ ಹಾಗೂ ಮಲಪ್ರಭಾ ನೀರು ಸಿಗುತ್ತಿರುವ ಹುಬ್ಬಳ್ಳಿ ಧಾರವಾಡದ ಕೆಲ ಬಡಾವಣೆಗಳಲ್ಲೂ ನೀರಿನ ಬವಣೆ ಈಗಲೂ ಇದೆ. ಹೊಟ್ಟೆಪಾಡಿಗಾಗಿ ಸಂಬಳದ ಕೆಲಸ ಸಿಕ್ಕರೂ ನೀರಿಗಾಗಿ ಮನೆಯಲ್ಲೇ ಕಾದು ಕೂರಬೇಕಾದ ಪರಿಸ್ಥಿತಿ ಕುಂದಗೋಳ ಭಾಗದಲ್ಲಿರುವುದು ಇಂದಿಗೂ ನೀರಿಗಾಗಿ ಇರುವ ಪರಿಸ್ಥಿತಿಯನ್ನು ಸಾರಿ ಹೇಳುವಂತಿದೆ.

ಕುಂದಗೋಳದ 14 ಹಳ್ಳಿಗಳು ಕಳೆದ ಹಲವು ವರ್ಷಗಳಿಂದ ಟ್ಯಾಂಕರ್‌ ನೀರಿನ ಹಾದಿಯನ್ನೇ ಕಾದು ಕೂರಬೇಕಿದ್ದ ಪರಿಸ್ಥಿತಿಯಿಂದ ಕೊಂಚ ಬದಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾದ ನಂತರ ಈ ಭಾಗದ ಕೆಲ ಊರುಗಳು ಮಲಪ್ರಭಾದ ನೀರು ಪಡೆಯುತ್ತಿವೆ. ಇನ್ನೂ ಕೆಲ ಹಳ್ಳಿಗಳೂ ಇದೇ ನಿರೀಕ್ಷೆಯಲ್ಲಿವೆ.ಜತೆಗೆ ಗ್ರಾಮಗಳಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೆಲವು ಆಗಾಗ ಕೈಕೊಡುವುದರಿಂದ,ದೂರದ ಊರುಗಳಿಗೆ ಹೋಗಿ ನೀರು ತರುವ ಸಂಕಷ್ಟ ಇಂದಿಗೂ ತಪ್ಪಿಲ್ಲ.

ಅಳ್ನಾವರ ಪಟ್ಟಣದ ಪಕ್ಕದಲ್ಲೇ ಇರುವ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೆ ಕಾಳಿ ನದಿ ನೀರು ಬಂದಿದೆ. ಆದರೆ ಅಳ್ನಾವರಕ್ಕೆ ಇರುವ ಏಕೈಕ ಡೌಗಿ ನಾಲಾ ಬರಿದಾಗುತ್ತಿದೆ.

ಇನ್ನು ಈ ಹಳ್ಳ ಹರಿಯುವುದು ಮಳೆಬಂದರಷ್ಟೇ. ಅಲ್ಲಿಯವರೆಗೆ ಪಟ್ಟಣದಲ್ಲಿರುವ ನೀರು ಸರಬರಾಜಿನ ಟ್ಯಾಂಕ್‌ಗೆ ಟ್ಯಾಂಕರ್ ಮೂಲಕ ನೀರು ತುಂಬಿಸಿ, ಹಂಚುವ ಕೆಲಸ ತ್ರಾಸದಾಯಕವಾದರೂ ಅನಿವಾರ್ಯ.

ಕುಂದಗೋಳದ ನೀರಿನ ಸಮಸ್ಯೆ ಬಿಚ್ಚಿಟ್ಟ ಯರೇಬೂದಿಹಾಳದ ಬಸವರಾಜ ಕಟ್ಟಿಮನಿ, ‘ನೀರಿಗಾಗಿಯೇ ಮನೆಗೊಬ್ಬರು ಆಳು ಇರಬೇಕಾದ್ದು ಕಡ್ಡಾಯ ಎಂಬಂತಾಗಿದೆ. ಶ್ರೀಮಂತರು ನೀರು ತರಲು ಆಳು ಇಟ್ಟುಕೊಳ್ಳುತ್ತಾರೆ. ಆದರೆ ದುಡಿಮೆ ಅನಿವಾರ್ಯವಾದ ಕುಟುಂಬಗಳು ನೀರಿಗಾಗಿ ನಿದ್ದೆ, ಊಟವನ್ನೂ ಬಿಡಬೇಕಾದ ಪರಿಸ್ಥಿತಿ ಇದೆ’ ಎಂದರು.

‘ಇಲ್ಲಿನ ಬಹಳಷ್ಟು ಪುರುಷರು ದುಡಿಮೆಗಾಗಿ ಹುಬ್ಬಳ್ಳಿಗೆ ಹೋಗುತ್ತಾರೆ. ಬೆಳಿಗ್ಗೆ 7ಕ್ಕೆ ಇಲ್ಲಿಂದ ಬಸ್ಸಿದೆ. ಅಷ್ಟರೊಳಗೆ ಮನೆಯಲ್ಲಿ ನೀರು ತುಂಬಿಸಿಡಬೇಕಾದ ಧಾವಂತ. ಊರಲ್ಲಿರುವ 19 ಎಕರೆ ಕರೆಗೆ ನಸುಕಿನ 4ಕ್ಕೆ ತಳ್ಳು ಗಾಡಿಗಳ ತುಂಬಾ ಕೊಡಗಳನ್ನು ತಂದು, ನೀರು ತುಂಬಿಸಿ ಕೊಂಡೊಯ್ಯುವ ದೃಶ್ಯ ಸಾಮಾನ್ಯವಾಗಿದೆ. ನೀರು ಸವಳು ನಮಗೆ ಕುಡಿದು ರೂಢಿ ಇದೆ. ಮನೆಗೆ ಬರುವವರಿಗೆ ನೀರು ಬೇಕೆಂದರೆ ಕನಿಷ್ಠ 5 ಕಿ.ಮೀ. ದೂರದಲ್ಲಿರುವ ಪಕ್ಕದ ಹಳ್ಳಿಗೆ ಹೋಗಿ ಶುದ್ಧ ಕುಡಿವ ನೀರಿನ ಘಟಕದಿಂದ ತರಬೇಕಾದ ಅನಿವಾರ್ಯತೆ’ ಎಂದು ಇಲ್ಲಿನ ಕಷ್ಟ ಬಿಚ್ಚಿಟ್ಟರು.

‘ಪಕ್ಕದಲ್ಲಿರುವ ಗದಗ ತಾಲ್ಲೂಕಿನ ಲಕ್ಷ್ಮೀಶ್ವರಕ್ಕೆ ತುಂಗಭದ್ರಾ ನದಿಯಿಂದ ನೀರು ತರಲಾಗಿದೆ. ಈ ಭಾಗದ ಕೆಲ ಹಳ್ಳಿಗಳಿಗೂ ಅದೇ ನೀರು ಕೊಡುವಂತೆ ಮನವಿ ಮಾಡಿಕೊಂಡಿದ್ದೆವು. ಆದರೆ ಅದು ಈವರೆಗೂ ಸಾಧ್ಯವಾಗಿಲ್ಲ. ಗದಗ ಜಿಲ್ಲೆಗೆ ವರದಾ ಮತ್ತು ತುಂಗಭದ್ರಾ ನದಿ ನೀರು ಹರಿಸಲಾಗಿದೆ. ಆದರೆ ನಾವು ಮಲಪ್ರಭಾ ನದಿಯ ಏಕೈಕ ಮೂಲವನ್ನೇ ನೆಚ್ಚಿಕೊಂಡಿದ್ದೇವೆ’ ಎಂದು ಕಟ್ಟಿಮನಿ ಬೇಸರ ವ್ಯಕ್ತಪಡಿಸಿದರು. 

ಒಂದು ಕಾಲದಲ್ಲಿ ನೀರಿನ ಸಮಸ್ಯೆಗಾಗಿ ಕುಟುಂಬ ಸಮೇತರಾಗಿ ಮಂಗಳೂರಿಗೆ ವಲಸೆ ಹೋಗಿದ್ದು ಮರಳಿ ಬಂದು ಕಳೆದ 10 ವರ್ಷಗಳಿಂದ ಇದೇ ಊರಿನಲ್ಲಿರುವ ಬಸಪ್ಪ ಅವರು ಊರಿನ ನೀರಿನ ಸಮಸ್ಯೆ ಕುರಿತು ಮಾತನಾಡಿ, ‘ಕುಂದಗೋಳದ ನೀರಿನ ಸಮಸ್ಯೆಯಿಂದಾಗಿ ಹೆಣ್ಣು ಕೊಡುವವರೇ ಇರಲಿಲ್ಲ. ಆದರೆ ಪರಿಸ್ಥಿತಿ ಬದಲಾಗುತ್ತಿದೆಯಾದರೂ, ಇಂದಿಗೂ ಊರಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ’ ಎಂದೆನ್ನುತ್ತಾರೆ.

ಕಾಳಿಗಾಗಿ ಕಾಯಬೇಕು ಇನ್ನೂ 2 ವರ್ಷ

ಅಳ್ನಾವರಕ್ಕೆ ಕಾಳಿ ನದಿ ಹರಿಸುವ ₹72ಕೋಟಿ ಯೋಜನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಟೆಂಡರ್ ಕೂಡ ಕರೆಯಲಾಗಿದೆ. ಈ ಯೋಜನೆಯಿಂದ ಅರಣ್ಯಕ್ಕೆ ಯಾವುದೇ ಹಾನಿ ಇಲ್ಲ ಎಂಬ ವರದಿ ಬಾಕಿ ಇದೆ. ಇದಾದಲ್ಲಿ ಅಳ್ನಾವರದ ಬಹು ವರ್ಷಗಳ ನೀರಿನ ಬವಣೆ ನೀಗಲಿದೆ.

25 ಸಾವಿರ ಜನಸಂಖ್ಯೆ ಇರುವ ಅಳ್ನಾವರ ಪಟ್ಟಣಕ್ಕೆ ಇಂದಿಗೂ ಟ್ಯಾಂಕರ್ ಮೂಲಕವೇ ನೀರು ಸರಬರಾಜಾಗುತ್ತಿದೆ. ಇರುವ ಡೌಗಿ ನಾಲಾ ಫೆಬ್ರುವರಿ ತಿಂಗಳಲ್ಲಿ ಬರಿದಾಗುತ್ತದೆ. ಮಳೆ ಬಂದರಷ್ಟೇ ಈ ಊರಿನ ಜನರಿಗೆ ನೀರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಮಲೆನಾಡಿನ ಸೆರಗಿನಲ್ಲಿದ್ದರೂ ಈ ಪಟ್ಟಣಕ್ಕೆ ನೀರು ಸಿಕ್ಕಿಲ್ಲ. ಹೀಗಾಗಿ ಇಲ್ಲಿನ ಜನ ಪಕ್ಕದ ಹಳಿಯಾಳ ಕ್ಷೇತ್ರದ ಪ್ರಭಾವಿ ರಾಜಕಾರಣಿ, ಸಚಿವ ಆರ್‌.ವಿ.ದೇಶಪಾಂಡೆ ಅವರಲ್ಲಿ ಕಾಳಿ ನದಿ ನೀರಿಗಾಗಿ ಮನವಿ ಮಾಡಿಕೊಂಡಿದ್ದರು. 

ಸರ್ಕಾರದ ಮಟ್ಟದಲ್ಲಿ ನಿರಂತರ ಚರ್ಚೆ ಹಾಗೂ ಸಾಧಕ ಬಾಧಕ ಅಧ್ಯಯನ ನಂತರ, ಯೋಜನೆಗೆ ಸರ್ಕಾರ ಒಪ್ಪಿದೆ. ದಾಂಡೇಲಿಯಿಂದ ಅಳ್ನಾವರಕ್ಕೆ ಹರಿಯುವ ಕಾಳಿಗೆ ಜಾವಳ್ಳಿ ಬಳಿ ಜಾಕ್ವೆಲ್ ನಿರ್ಮಿಸಲಾಗುತ್ತಿದೆ. ಅಲ್ಲಿ ಶೇಖರಣೆಗೊಳ್ಳುವ ನೀರನ್ನು ನಂತರ ಅಳ್ನಾವರಕ್ಕೆ ಹರಿಸಲಾಗುವುದು.

ಈ ಕುರಿತು ಪ್ರತಿಕ್ರಿಯಿಸಿದ ಕಾಳಿ ನದಿ ಹೋರಾಟ ಸಮಿತಿಯ ಪುಂಡಲೀಕ ಪರ್ಡಿ, ‘ಇರುವ ಏಕೈಕ ನಾಲಾವನ್ನೇ 25 ಸಾವಿರ ಜನ ನಂಬಿಕೊಂಡಿದ್ದಾರೆ. ಬೇಸಿಗೆಯಲ್ಲಂತೂ ಕೊಳವೆಭಾವಿ ಹುಡುಕಿ ಅಲೆಯುವುದೇ ಇಲ್ಲಿನ ಜನರ ಕೆಲಸವಾಗಿರುತ್ತದೆ. ಇರುವ ಡೌಗಿ ನಾಲಾಕ್ಕೂ ಊರಿನ ತ್ಯಾಜ್ಯ ನೀರು ಹರಿಯುವುದರಿಂದ ಅದು ಕಲುಷಿತಗೊಂಡು ಆರೋಗ್ಯ ಸಮಸ್ಯೆಯೂ ಕಾಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರವಾಗಿರುವ ಕಾಳಿ ನದಿಗೆ ಸರ್ಕಾರ ಅಸ್ತು ಎಂದಿರುವುದು ಇಲ್ಲಿನ ಜನರಲ್ಲಿ ಭರವಸೆ ಮೂಡಿಸಿದ್ದು ನೀರು ಸಿಗುವ ಆಸೆ ಇದೆ’ ಎಂದರು.

388 ಹಳ್ಳಿಗೂ ಮಲಪ್ರಭಾ ನೀರು

ಸದ್ಯ ಹುಬ್ಬಳ್ಳಿ ಧಾರವಾಡ ನಗರ ಹಾಗೂ ಧಾರವಾಡ ಮತ್ತು ಕುಂದಗೋಳ ತಾಲ್ಲೂಕಿನ ಕೆಲ ಗ್ರಾಮಗಳಿಗೆ ಮಲಪ್ರಭಾ ಕುಡಿಯುವ ನೀರು ಲಭ್ಯವಾಗುತ್ತಿದೆ. ಜತೆಗೆ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕುಗಳಿಗೆ ಮಲಪ್ರಭಾ ಬಲದಂಡೆ ನಾಲೆ ಮೂಲಕ ಕೆರೆ ತುಂಬಿಸುವ ಕೆಲಸವೂ ಸಾಗಿದೆ. ಈ ನಡುವೆ ₹1,040ಕೋಟಿ ವೆಚ್ಚದಲ್ಲಿ ಜಿಲ್ಲೆಯ 388 ಹಳ್ಳಿಗಳಿಗೂ ನೀರು ನೀಡುವ ಯೋಜನೆಯ ಸಾಧ್ಯತಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಒಂದೊಮ್ಮೆ ಈ ಯೋಜನೆ ಜಾರಿಗೆ ಬಂದಲ್ಲಿ, ಇಡೀ ಧಾರವಾಡ ಜಿಲ್ಲೆಯ ಕುಡಿಯುವ ನೀರಿನ ಹಲವು ವರ್ಷಗಳ ಬವಣೆಗೆ ಶಾಶ್ವತ ಪರಿಹಾರ ದೊರೆಯಲಿದೆ.

ಕೆರೆ ನೀರೇ ನಮಗೆ ಕಸುವು!

ಕುಂದಗೋಳದ ಯರೇಬೂದಿಹಾಳ ಗ್ರಾಮದ ಕೆನೆಗಟ್ಟಿದ ನೀರು ಹೆಚ್ಚು ‘ಕಸುವು’. ಹೀಗಾಗಿ ಪಚನ ಕ್ರಿಯೆ ಉತ್ತಮವಾಗಿ ಆಗುತ್ತದೆ. ಆದರೆ ಶುದ್ಧ ಕುಡಿಯುವ ನೀರು ಕುಡಿದರೆ ಕಫ ಹೆಚ್ಚು ಎಂಬುದು ಇಲ್ಲಿನ ಜನರ ಅನಿಸಿಕೆ. ಇದು ಕುಂದಗೋಳ ಮಾತ್ರವಲ್ಲ ನವಲಗುಂದ ಭಾಗದ ಕೆಲವು ಹಳ್ಳಿಗಳ ಜನರೂ ಶುದ್ಧ ಕುಡಿಯುವ ನೀರಿನಿಂದ ದೂರವಿದ್ದಾರೆ.

‘ತಾತ, ಮುತ್ತಾತರ ಕಾಲದಿಂದಲೂ ನಾವು ಇದೇ ನೀರು ಕುಡಿಯುತ್ತಾ ಬಂದಿದ್ದೇವೆ. ಕೆರೆ ನೀರೇ ನಮಗೆ ಚಲೋ. ಇದರಿಂದಾಗಿಯೇ ಕೆರೆಯ ಆವರಣ ಇಂದಿಗೂ ಶುಚಿಯಾಗಿಟ್ಟುಕೊಂಡು ಬರಲಾಗಿದೆ. ಈ ನೀರಿನ ಮಹತ್ವ ಗೊತ್ತಿರುವುದರಿಂದಲೇ ನೀರಿನ ಮಿತಬಳಕೆಗೂ ದಾರಿಯಾಗಿದೆ’ ಎನ್ನುವುದು ಈ ಭಾಗದ ಜನರ ಅನಿಸಿಕೆ. ಆದರೆ ಹಲವೆಡೆ ಗ್ರಾಮ ಪಂಚಾಯ್ತಿಗಳಿಗೆ ಇವುಗಳ ನಿರ್ವಹಣೆ ವಹಿಸಿರುವುದರಿಂದ ಉತ್ತಮವಾಗಿವೆ. ಇನ್ನೂ ಕೆಲವೆಡೆ ತೀರಾ ಶೋಚನೀಯ ಸ್ಥಿತಿಯಲ್ಲಿವೆ.

ಅವಳಿ ನಗರದಲ್ಲೂ ನೀರಿನ ಬವಣೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಧಾರವಾಡದ 4 ಮತ್ತು ಹುಬ್ಬಳ್ಳಿಯ 4 ಬಡಾವಣೆಗಳು 24X7 ಯೋಜನೆಯ ಲಾಭ ಪಡೆಯುತ್ತಿವೆ. ಆದರೆ ಉಳಿದ ವಾರ್ಡ್‌ಗಳು ಇಂದಿಗೂ ನಳಕ್ಕಾಗಿ ಕಾದು ಕೂರಬೇಕಾದ ಪರಿಸ್ಥಿತಿ ಇದೆ. ನವನಗರ, ನವಲೂರು, ಕಲ್ಯಾಣನಗರ, ತೇಜಸ್ವಿನಗರ ಮುಂತಾದ ಬಡಾವಣೆಗಳು ನೀರಿನ ಸಮಸ್ಯೆ ಇಂದಿಗೂ ಎದುರಿಸುತ್ತಿವೆ.

ಮಲಪ್ರಭಾದಿಂದ ಅವಳಿ ನಗರಕ್ಕೆ 2 ಟಿಎಂಸಿ ನೀರು ಬೇಡಿಕೆ ಇದೆ. ಜತೆಗೆ ನೀರಸಾಗರವೂ ಹುಬ್ಬಳ್ಳಿಯ ಕೆಲ ಭಾಗಗಳ ದಾಹ ತಣಿಸುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ನೀರಸಾಗರ ತುಂಬದ ಕಾರಣ ನೀರಿನ ಅಭಾವ ಉಂಟಾಗಿದೆ. ಕೆಲ ಬಡಾವಣೆಗಳಲ್ಲಿ 10 ದಿನಗಳಿಗೆ ಒಮ್ಮೆ ನೀರು ಸಿಗುತ್ತಿರುವ ಉದಾಹರಣೆಗಳೂ ಇವೆ.

ವರದಾ ನದಿಯಿಂದ ನೀರು

ವರದಾ ನದಿಯಿಂದ ನೀರು ಹರಿಸಿ ರಟ್ಟಿಗೇರಿ ಬಳಿ 100 ಎಕರೆ ಜಮೀನಿನಲ್ಲಿ ಕೆರೆ ನಿರ್ಮಿಸಿ ಶೇಖರಿಸುವುದರಿಂದ 8 ಹಳ್ಳಿಗೆ ನೀರು ನೀಡಬಹುದಾದ ಯೋಜನೆಯ ನೀಲನಕ್ಷೆಯನ್ನು ಜಲಮಂಡಳಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದರು. ಈ ನದಿಯಿಂದ ಒಟ್ಟು 65ಎಂಸಿಎಫ್‌ಟಿ ನೀರು ಸಿಗುವುದರಿಂದ ಕುಂದಗೋಳ ಭಾಗದ ಹಳ್ಳಿಗಳ ನೀರಿನ ಬವಣೆ ನೀಗಲಿದೆ ಎಂಬ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ 28 ಎಂಸಿಎಫ್‌ಟಿ ನೀಡುವ ಭರವಸೆ ಸಿಕ್ಕಿದೆ. ಇದಾದಲ್ಲಿ ಕೇವಲ 4 ಹಳ್ಳಿಗೆ ಮಾತ್ರ ನೀರು ಸಿಗಲಿದೆ. ಅದು ಇನ್ನೂ ಯೋಜನೆ ಹಂತದಲ್ಲಿದೆ.

ನೀರು ಕೊಟ್ಟ ಭಗೀರಥ

ಕುಂದಗೋಳ ತಾಲ್ಲೂಕಿನ ಹಿರೇಗುಂಜಾಳದ ಯಲ್ಲಪ್ಪ ಬಿಸಿರೊಟ್ಟಿ ಈ ಊರಿನ ಪಾಲಿಗೆ ಭಗೀರಥ. ಕಳೆದ ಎರಡು ವರ್ಷಗಳಿಂದ ಜನರಿಗೆ ಉಚಿತವಾಗಿ ನೀರು ನೀಡಿದ್ದಕ್ಕಾಗಿ ಇಂದಿಗೂ ಈ ಊರಿನ ಜನ ಇವರನ್ನು ನೆನೆಸುತ್ತಾರೆ. ತಮ್ಮ ಮನೆ ಬಳಿ ಕೊರೆಯಿಸಿದ ಕೊಳವೆಭಾವಿಯಲ್ಲಿ ಸಾಕಷ್ಟು ನೀರು ಲಭಿಸಿದ್ದರಿಂದ ಅದನ್ನು ಊರಿನ ಜನರಿಗೆ ಹಂಚಲು ನಿರ್ಧರಿಸಿದರು. 2016ರಿಂದ ನಿರಂತರವಾಗಿ ಉಚಿತವಾಗಿ ನೀರು ನೀಡಿದ್ದಾರೆ.

ಇತ್ತೀಚೆಗೆ ಇವರ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದೀಪಾ ಚೋಳನ್, ಇವರು ಕೊಳವೆಭಾವಿಯನ್ನು ಬಾಡಿಗೆಗೆ ಪಡೆಯುವುದಾಗಿ ತಿಳಿಸಿದ್ದಾರೆ. ಸದ್ಯ ಬೆಳಿಗ್ಗೆ ಹಾಗೂ ಸಂಜೆ 2 ಗಂಟೆ ನೀರನ್ನು ಹಂಚಲಾಗುತ್ತಿದೆ. ಈ ಹೊತ್ತಿನಲ್ಲಿ ನೂರಾರು ನೀರಿನಗಾಡಿಗಳು ಇವರ ಮನೆ ಮುಂದೆ ಜಮಾಯಿಸಿರುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !