ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಆನ್‌ಲೈನ್ ಮೂಲಕ ಭೂಸಂಪನ್ಮೂಲ ಮಾಹಿತಿ

ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ 80 ಸಾವಿರ ಕಾರ್ಡ್ ವಿತರಣೆ
Last Updated 31 ಜನವರಿ 2020, 19:30 IST
ಅಕ್ಷರ ಗಾತ್ರ

ಧಾರವಾಡ: ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೊಳ್ಳುತ್ತಿರುವ ‘ಸುಜಲಾ–3’ ಯೋಜನೆಯಲ್ಲಿ ಸುಮಾರು 12ಲಕ್ಷ ಹೆಕ್ಟೇರ್ ಕೃಷಿ ಜಮೀನಿನ ಭೂಸಂಪನ್ಮೂಲ ಕಾರ್ಡ್‌ಗಳು ಶೀಘ್ರದಲ್ಲಿ ಮೊಬೈಲ್ ಆ್ಯಪ್ ಹಾಗೂ ಆನ್‌ಲೈನ್ ಮೂಲಕ ಲಭ್ಯವಾಗಲಿದೆ.

ವಿಶ್ವಬ್ಯಾಂಕ್‌ ನೆರವಿನಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆ 2014ರಲ್ಲಿ ಆರಂಭಗೊಂಡಿತು. ರಾಜ್ಯದ ಆರು ಕೃಷಿ ವಿಶ್ವವಿದ್ಯಾಲಯಗಳ ತಜ್ಞರು 11 ಜಿಲ್ಲೆಗಳ ನಕ್ಷೆಗಳನ್ನು ಸಿದ್ಧಪಡಿಸಿದ್ದರು. ಇದು ಈಗ ಆನ್‌ಲೈನ್‌ಗೆ ಅಪ್‌ಲೋಡ್‌ ಆಗುತ್ತಿದ್ದು, ಶೀಘ್ರದಲ್ಲಿ ರೈತರು ತಮ್ಮ ಸರ್ವೆ ಸಂಖ್ಯೆ ನಮೂದಿಸಿ ಜಮೀನಿನ ಭೂ ಸಂಪನ್ಮೂಲ ಮಾಹಿತಿ ಪಡೆಯಬಹುದು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ, ಮಣ್ಣು ವಿಜ್ಞಾನಿ ಡಾ. ಪಿ.ಎಲ್.ಪಾಟೀಲ, ‘ಧಾರವಾಡ ವಿಶ್ವವಿದ್ಯಾಲಯದ ಅಡಿಯಲ್ಲಿ ಗದಗ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಅಧ್ಯಯನ ಪೂರ್ಣಗೊಂಡಿದೆ’ ಎಂದರು.

‘ಈ ಮೂರು ಜಿಲ್ಲೆಗಳಲ್ಲಿ ತಲಾ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಯೋಜನೆಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ರೈತರಿಗೆ ತರಬೇತಿಯನ್ನು ಕೊಡಿಸಲಾಗಿದೆ.ಆಯಾ ಮಣ್ಣಿಗೆ ಸೂಕ್ತವಾಗುವ ಬೆಳೆಗಳನ್ನೇ ಬೆಳೆಯುವಂತೆ ಮನವೊಲಿಸಿದ್ದು, ಕಳೆದೆರಡು ವರ್ಷಗಳಲ್ಲಿ ಉತ್ತಮ ಇಳುವರಿ ಪಡೆದಿದ್ದಾರೆ’ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಈ ಭಾಗಗಳೊಂದಿಗೆ ಕಡಿಮೆ ಮಳೆ ಹಾಗೂ ಒಣಬೇಸಾಯ ನಡೆಸುವ ಬೀದರ್‌, ರಾಯಚೂರು, ಕಲಬುರ್ಗಿ, ಯಾದಗಿರಿ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು.ಇದರಲ್ಲಿಉತ್ತರ ಕರ್ನಾಟಕದ ಮೂರು ಜಿಲ್ಲೆಗಳ ಸುಮಾರು 80ಸಾವಿರ ಭೂಸಂಪನ್ಮೂಲ ಕಾರ್ಡ್‌ಗಳು ಈಗಾಗಲೇ ರೈತರ ಕೈಸೇರಿವೆ.

2,500 ಕಿರುಜಲಾನಯನ ವ್ಯಾಪ್ತಿಯ ಅಂದಾಜು 12 ಲಕ್ಷ ಹೆಕ್ಟೇರ್ ಕೃಷಿ ಜಮೀನಿನ ಮಣ್ಣಿನ ಸಮೀಕ್ಷೆ ನಡೆಸಲಾಗಿದೆ.ಭೂ ಪ್ರದೇಶದ ಮಣ್ಣಿನ ಮಾದರಿಗಳ ವಿಶ್ಲೇಷಣೆ ಮತ್ತು ಭೂ ಫಲವತ್ತತೆಯ ಅಧ್ಯಯನ ನಡೆಸಿ, ಕಿರುಜಲಾನಯನಗಳ ನಕ್ಷೆ ತಯಾರಿಸಲಾಗಿದೆ.

ಇದೇ ಮೊದಲ ಸಲ ವಿಶ್ವಬ್ಯಾಂಕ್‌ ವಿಜ್ಞಾನ ಆಧಾರಿತ ಯೋಜನೆಗೆ ₹412.59 ಕೋಟಿಯಷ್ಟು ಆರ್ಥಿಕ ನೆರವು ನೀಡಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ಸರ್ವೆ ಸಂಖ್ಯೆಗೆ ಅನುಗುಣವಾಗಿ ಮಳೆ ಪ್ರಮಾಣ, ಮಣ್ಣಿನ ಮೇಲ್ಮೈ ಲಕ್ಷಣ, ಯಾವ ಬೆಳೆಗೆ ಯೋಗ್ಯ ಹೀಗೆ ಸುಮಾರು 50 ಗುಣ ಲಕ್ಷಣಗಳನ್ನು ಪಟ್ಟಿ ಮಾಡಿ ತಜ್ಞರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ಅಟ್ಲಾಸ್ ಸಿದ್ಧಪಡಿಸಲಾಗಿದೆ.

*
ವಿಜ್ಞಾನಿಗಳ ಈ ಪ್ರಯತ್ನಕ್ಕೆ ವಿಶ್ವಬ್ಯಾಂಕ್‌ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ 145 ಜನರಿಗೆ ಉದ್ಯೋಗದ ಜತೆಗೆ ಅನುಭವವೂ ಸಿಕ್ಕಂತಾಗಿದೆ.
– ಡಾ. ಪಿ.ಎಲ್.ಪಾಟೀಲ, ಸಂಶೋಧನಾ ನಿರ್ದೇಶಕ, ಧಾರವಾಡ ಕೃಷಿ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT