ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಜಿಲ್ಲೆಯಲ್ಲಿ ಬೆಳೆ ನಷ್ಟ ಪರಿಹಾರ ಮರೀಚಿಕೆ

ಕಳೆದ ವರ್ಷ ಸಂಭವಿಸಿದ್ದ ಬೆಳೆ ಹಾನಿ: 14.63 ಲಕ್ಷ ಮಂದಿಗಷ್ಟೇ ಪರಿಹಾರ
Published 11 ಆಗಸ್ಟ್ 2023, 6:42 IST
Last Updated 11 ಆಗಸ್ಟ್ 2023, 6:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದ ವರ್ಷ ಅತಿವೃಷ್ಟಿ ಸೇರಿ ವಿವಿಧ ಕಾರಣಗಳಿಂದ ಬೆಳೆಹಾನಿಯಿಂದ ಆರ್ಥಿಕ ನಷ್ಟಕ್ಕೆ ಒಳಗಾದ ರಾಜ್ಯದ 19.02 ಲಕ್ಷ ರೈತರಲ್ಲಿ 14.63 ಲಕ್ಷ ಮಂದಿಗೆ ಮಾತ್ರ ಪರಿಹಾರ ಸಿಕ್ಕಿದೆ.

ಧಾರವಾಡ ಜಿಲ್ಲೆಯಲ್ಲಿ 1.59 ಲಕ್ಷ ಪೈಕಿ 1.18 ಲಕ್ಷ ರೈತರಿಗೆ ಪರಿಹಾರ ಸಿಕ್ಕಿದೆ. ಜಿಲ್ಲೆಯ ರೈತರಿಗೆ ₹211.72 ಕೋಟಿ ಸೇರಿ ರಾಜ್ಯದ ರೈತರಿಗೆ ₹2,032.22 ಕೋಟಿ ಪರಿಹಾರ ವಿತರಿಸಿರುವುದಾಗಿ ಸರ್ಕಾರದ ದಾಖಲೆ ಹೇಳುತ್ತದೆ. ಇನ್ನೂ ಹಲವು ರೈತರಿಗೆ ವರ್ಷ ಕಳೆದರೂ ಪರಿಹಾರ ಸಿಕ್ಕಿಲ್ಲ.

ಆರೋಪ: ‘ಬೆಳೆವಿಮೆ, ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಪ್ರತಿ ಬಾರಿ ಅವ್ಯವಹಾರ ಆಗುತ್ತದೆ.  ಮಳೆ, ರೋಗದಿಂದ ಬೆಳೆ ಹಾನಿಯಾದಾಗ ಅಧಿಕಾರಿಗಳು ತಡವಾಗಿ ಪರಿಶೀಲಿಸುತ್ತಾರೆ. ಮನ ಬಂದಂತೆ ಮಾಹಿತಿ ದಾಖಲಿಸುತ್ತಾರೆ. ಕೊನೆಗೆ, ದಾಖಲೆ ಸರಿಯಿಲ್ಲವೆಂದು ಹೇಳಿ ಪರಿಹಾರ ತಿರಸ್ಕರಿಸುತ್ತಾರೆ. ನೆಪಮಾತ್ರಕ್ಕೆ ಕೆಲ ರೈತರಿಗೆ ಬಿಡಿಗಾಸಿನಷ್ಟು ಪರಿಹಾರ ಸಿಗುತ್ತದೆ’ ರೈತ ಮುಖಂಡ ಸಿದ್ದು ತೇಜಿ ಆರೋಪಿಸಿದರು.

ವಿಮೆಯಲ್ಲೂ ಮೋಸ: ‘ಬೆಳೆ ವಿಮೆ ಕಟ್ಟಿಸಿಕೊಂಡಿದ್ದಕ್ಕೆ ರಸೀದಿ ನೀಡುವುದಿಲ್ಲ. ಉತ್ತಮ ಇಳುವರಿ ಬರುವ ಭಾಗದ ರೈತರ ಅರ್ಜಿಗಳನ್ನು ಮಾತ್ರ ಬೆಳೆವಿಮೆಗೆ ಪರಿಗಣಿಸಿ, ಕಡಿಮೆ ಇಳುವರಿ ಬರುವ ಭಾಗದ ಜನರ ಅರ್ಜಿ ತಿರಸ್ಕರಿಸುತ್ತಾರೆ’ ಎಂದೂ ಅವರು ಆಪಾದಿಸಿದರು.

‘ಒಂದು ಜಮೀನಿನಲ್ಲಿ ಎರಡು ಬೆಳೆಗಳಿದ್ದರೆ ವಿಮೆ ಮಾಡಿಸಿದ ಬೆಳೆ ಬಿಟ್ಟು, ಬೇರೆ ಬೆಳೆಯ ಮಾಹಿತಿ ಚಿತ್ರ ತೆಗೆಯುತ್ತಾರೆ. ಒಬ್ಬರ ಹೆಸರಲ್ಲಿ ಎರಡು ಪಹಣಿ ಖಾತೆ ಇದ್ದರೆ, ಒಂದು ಖಾತೆಗೆ ಮಾತ್ರ ಪರಿಹಾರ ಸಿಗುತ್ತದೆ. ಹಲವು ರೈತರಿಗೆ ಕಾನೂನಿನ ಅರಿವು ಇರುವುದಿಲ್ಲ. ಪರಿಹಾರಕ್ಕೆ ಅಲೆದಾಡಿ, ಕೊನೆಗೆ ನಿರಾಸೆಗೊಂಡು ಸುಮ್ಮನಾಗುತ್ತಾರೆ’ ಎಂದು ಅವರು ವಿವರಿಸಿದರು.

ಗೊಂದಲ: ಈ ವರ್ಷ ಬೆಳೆ ವಿಮೆ ಮಾಡಿಸಲು ಮುಂದಾದ ರೈತರಿಗೆ ತಾಂತ್ರಿಕ ತೊಂದರೆಯಿಂದ ಗೊಂದಲ ಉಂಟಾಗಿದೆ. ವಿಮೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಯಾರದೋ ಜಮೀನಿನ ಸರ್ವೆ ನಂಬರ್‌, ಇನ್ಯಾರದೋ ಹೆಸರಲ್ಲಿ ತೋರಿಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT