ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಕ್ರಮ: ಗತಿ ಶಕ್ತಿ ಯುನಿಟ್‌ ರಚನೆ

Published 5 ಆಗಸ್ಟ್ 2023, 5:32 IST
Last Updated 5 ಆಗಸ್ಟ್ 2023, 5:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಮೃತ್‌ ಭಾರತ್‌ ನಿಲ್ದಾಣ ಯೋಜನೆಯಡಿ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗದ 16 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 6 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಕಾಮಗಾರಿಗಳ ಅನುಷ್ಠಾನಕ್ಕಾಗಿ ಅಧಿಕಾರಿಗಳ ವಿಶೇಷ ತಂಡ ‘ಗತಿ ಶಕ್ತಿ ಯುನಿಟ್‌’ ರಚಿಸಲಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ರೈಲ್ವೆ ಮ್ಯಾನೇಜರ್‌ ಹರ್ಷ ಖರೆ ಹೇಳಿದರು. 

ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈಲ್ವೆ ವಿಭಾಗದ ಸಿವಿಲ್‌ ಕಾಮಗಾರಿಗಳನ್ನು ನೋಡಿಕೊಳ್ಳುವ ಸಿಬ್ಬಂದಿಗೆ ಕೆಲಸದ ಒತ್ತಡ ಇರುವುದರಿಂದ ಹೊಸ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಈ ತಂಡದ ಸಿಬ್ಬಂದಿ ಅಮೃತ್‌ ಭಾರತ್‌ ನಿಲ್ದಾಣ ಯೋಜನೆಯಡಿ ಕಾಮಗಾರಿಗಳನ್ನು ಮಾತ್ರ ನೋಡಿಕೊಳ್ಳಲಿದ್ದಾರೆ. ನಿಗದಿತ ಅವಧಿ ಜನವರಿ ಒಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ’ ಎಂದು ತಿಳಿಸಿದರು.

ಹುಬ್ಬಳ್ಳಿ ವಿಭಾಗದಲ್ಲಿ ಒಟ್ಟು 135 ರೈಲ್ವೆ ನಿಲ್ದಾಣಗಳಿವೆ. ಇವುಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರು ಬಳಸುವ, ಪ್ರಮುಖ ಸ್ಥಳಗಳ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ 6 ನಿಲ್ದಾಣಗಳನ್ನು ಈ ಯೋಜನೆಯಡಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ದೇಶದಾದ್ಯಂತ 1,275 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಡೆಯಲಿದೆ. ರಾಜ್ಯದಲ್ಲಿ 55 ನಿಲ್ದಾಣಗಳ ಅಭಿವೃದ್ಧಿಯಾಗಲಿದೆ ಎಂದು ಅವರು ವಿವರಿಸಿದರು. 

ಪ್ರಧಾನಿ ಚಾಲನೆ: ಈ ಯೋಜನೆಗೆ ಇದೇ ತಿಂಗಳ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ. ನಮ್ಮ ವಿಭಾಗದ ಕಾರ್ಯಕ್ರಮವನ್ನು ಅಳ್ನಾವರ ರೈಲ್ವೆ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಹುಬ್ಬಳ್ಳಿ, ವಾಸ್ಕೊ ನಿಲ್ದಾಣಕ್ಕೆ ಹೊಸ ರೂಪ: ಹುಬ್ಬಳ್ಳಿ ಹಾಗೂ ವಾಸ್ಕೊ ರೈಲ್ವೆ ನಿಲ್ದಾಣಗಳಿಗೆ ಹೊಸ  ರೂಪ ನೀಡಲು ಯೋಜನೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ. 4–5 ತಿಂಗಳಲ್ಲಿ ವಿಸ್ತೃತ ಯೋಜನೆಯ ವರದಿ (ಡಿಪಿಆರ್‌) ಸಿದ್ಧವಾಗಲಿದೆ ಎಂದು ಹೇಳಿದರು. 

 ಗತಿ ಶಕ್ತಿ ಯೋಜನೆಯ ಮುಖ್ಯ ಮ್ಯಾನೇಜರ್‌ ಸಂಜಯ ಕುಮಾರ್‌, ಉಪ ಮುಖ್ಯ ಎಂಜಿನಿಯರ್‌ ರಮೇಶ ಚಂದ್ರ,  ವಿಭಾಗೀಯ ವಾಣಿಜ್ಯ ವಿಭಾಗದ ಹಿರಿಯ ಮ್ಯಾನೇಜರ್‌ ಹರೀತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT