ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂದಗೋಳ: ರಂಗಭೂಮಿ ನಕ್ಷತ್ರ ‘ಸಿದ್ದಯ್ಯಸ್ವಾಮಿ’

ಬಸನಗೌಡ ಪಾಟೀಲ
Published 2 ಜನವರಿ 2024, 4:47 IST
Last Updated 2 ಜನವರಿ 2024, 4:47 IST
ಅಕ್ಷರ ಗಾತ್ರ

ಕುಂದಗೋಳ: ರಂಗಭೂಮಿ, ಚಂದನವನದಲ್ಲಿ ತನ್ನದೇ ಛಾಪು ಮೂಡಿಸಿದ್ದ,  ರಂಗಭೂಮಿಯ ಗಜಸಿಂಹ, ಕಲಿಯುಗದ ಅಶ್ವತ್ಥಾಮ ಎಂದು ಪ್ರಸಿದ್ಧರಾಗಿದ್ದ ಯಲಿವಾಳ ಸಿದ್ದಯ್ಯ ಸ್ವಾಮಿಯವ 34ನೇ ಪುಣ್ಯಸ್ಮರಣೆ ಜನವರಿ 2ರಂದು ಯಲಿವಾಳ ಗ್ರಾಮದ ಶಿವ ದೇವಾಲಯದಲ್ಲಿ ನಡೆಯಲಿದೆ.

1927ರಲ್ಲಿ ಕುಂದಗೋಳ ತಾಲ್ಲೂಕಿನ ಯಲಿವಾಳ ಗ್ರಾಮದಲ್ಲಿ ಜನಿಸಿದ ಸಿದ್ದಯ್ಯ ಸ್ವಾಮಿಯವರು, 9 ವರ್ಷದ ಬಾಲಕನಾಗಿದ್ದಾಗಲೇ ಬಯಲಾಟದಲ್ಲಿ ‘ಮಾರ್ಕಂಡೇಯ’ ಪಾತ್ರದ ಮೂಲಕ ರಂಗ ಪ್ರವೇಶ ಮಾಡಿದರು. 12ನೇ ವಯಸ್ಸಿಗೆ ಗದುಗಿನ ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವ ಸ್ವೀಕರಿಸಿದರು. ನಂತರದ ದಿನಗಳಲ್ಲಿ ಇವರು ಗವಾಯಿಗಳ ನಾಟಕ ಕಂಪನಿಯಲ್ಲಿ ಹಾಡುವುದು, ಬಾಲಕನ ಪಾತ್ರ, ಸ್ತ್ರೀ ಪಾತ್ರಗಳನ್ನು ಮಾಡಿ ಹೆಸರು ಗಳಿಸಿದರು.

‘ಪಠಾಣಪಾಶಾ’ ನಾಟಕದಲ್ಲಿ ಆಕಸ್ಮಿಕವಾಗಿ ಸಿಕ್ಕ ಅವಕಾಶವ ಬಳಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾದರು. ನಂತರ ಅವರು ಹಿಂದಿರುಗಿ ನೋಡಲೆ ಇಲ್ಲ. ಗೋಕಾಕದ ಗಜಾನನ ನಾಟಕ ಕಂಪನಿ, ದಾವಣಗೆರೆಯ ಕೆ.ಜಿ.ಆರ್ ನಾಟಕ ಕಂಪನಿ, ಗುಬ್ಬಿ ವೀರಣ್ಣ ಅವರ ನಾಟಕ ಕಂಪನಿಗಳಲ್ಲಿ ವಿವಿಧ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡರು. ಅವರ ಹೆಸರನ್ನು ನಾಟಕ ಕ್ಷೇತ್ರದಲ್ಲಿ ಮುಗಿಲೆತ್ತರಕ್ಕೆ ತಲುಪಿಸಿದ್ದು ‘ರಕ್ತ ರಾತ್ರಿ’ ನಾಟಕದಲ್ಲಿನ ಅಶ್ವತ್ಥಾಮನ ಪಾತ್ರ.

‘ಸಿದ್ದಯ್ಯನವರು ಇದ್ದರೇ ಸಾಕು ನಾಟಕ ಗೆದ್ದಂತೆ. ಅವರು ಐದು ಕಲಾವಿದರೆ ಸಮ’ ಎಂದು ಅಂದಿನ ದಿನಗಳಲ್ಲಿ ನಾಟಕ ಕಂಪನಿಗಳ ಮಾಲೀಕರು ಹೇಳುತ್ತಿದ್ದುದು ಅವರ ಕಲಾ ನೈಪುಣ್ಯಕ್ಕೆ ಸಾಕ್ಷಿ. ಇವರು ಅಭಿನಯಿಸಿದ ನಾಟಕಗಳು ಸೋಲು ಕಂಡಿಲ್ಲ ಎಂಬುದು  ಗಮನಾರ್ಹ.

ಗುಬ್ಬಿ ವೀರಣ್ಣ, ಆರೂರು ಪಟ್ಟಾಭಿ, ಹುಣಸೂರು ಕೃಷ್ಣಮೂರ್ತಿ, ಕೆ.ಶಂಕರ್, ಟಿ.ವಿ.ಸಿಂಗ್ ಠಾಕೂರ್ ಅವರಂತಹ ನಿರ್ದೇಶಕರೊಂದಿಗೆ ಇವರ ಸಿನಿಪಯಣ ಆರಂಭವಾಯಿತು.

‘ಸತಿನಾಳಯಿನಿ, ಓಹಿಲೇಶ್ವರ, ಭಕ್ತ ವಿಜಯ, ಶ್ರೀ ಕೃಷ್ಣ ಗಾರುಡಿ, ಭೂ ಕೈಲಾಸ (ಇಂದ್ರನ ಪಾತ್ರ)’ ಸಿನಿಮಾಗಳಲ್ಲಿ ಅಭಿನಯಿಸಿದರು. ಡಾ.ರಾಜ್‌ಕುಮಾರ್‌, ವಾದಿರಾಜರು, ನರಸಿಂಹರಾಜು, ಕಲ್ಯಾಣ ಕುಮಾರ್‌, ಸರೋಜಾ ದೇವಿ, ಪಂಡರೀಬಾಯಿ ಅವರಂತ ಶ್ರೇಷ್ಠ ಕಲಾವಿದರೊಂದಿಗೆ ತೆರೆ ಹಂಚಿಕೊಂಡರು.

ಇವರ ಕಲಾಸಾಧನೆಗೆ ‘1987ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ’ ದೊರೆತಿದೆ. ‘ರಂಗಭೂಮಿ ಚಕ್ರವರ್ತಿ, ವಿನೋದ ಪುಷ್ಪ’ ಎಂಬ ಬಿರುದುಗಳು ಇವರಿಗೆ ಸಂದಿವೆ.

ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದ ಸಿದ್ದಯ್ಯನವರು 1990 ಜನವರಿ 2 ರಂದು ನಿಧನರಾದರು. ಅಂದಿನಿಂದ ಯಲಿವಾಳ ಗ್ರಾಮದಲ್ಲಿ ಇವರ ನೆನಪಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ ಏರ್ಪಡಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT