ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಪಾವತಿಗೆ ಒತ್ತು ನೀಡಲು ಸಲಹೆ

ಪಿಎಂ ಸ್ವನಿಧಿ ಯೋಜನೆ; ದಿನಪತ್ರಿಕೆ ಹಂಚಿಕೆದಾರರು, ಹಾಲು ಮಾರಾಟಗಾರರಿಗೆ ಜಾಗೃತಿ ಕಾರ್ಯಕ್ರಮ
Published 10 ಅಕ್ಟೋಬರ್ 2023, 16:34 IST
Last Updated 10 ಅಕ್ಟೋಬರ್ 2023, 16:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬೀದಿ ಬದಿ ವ್ಯಾಪಾರಿಗಳು, ಅಸಂಘಟಿತ ವಲಯದ ಕಾರ್ಮಿಕರು ಡಿಜಿಟಲ್‌ ಪಾವತಿಗೆ ಒತ್ತು ನೀಡಬೇಕು’ ಎಂದು ಪಿ.ಎಂ.ಸ್ವನಿಧಿ ಯೋಜನೆಯ ರಾಜ್ಯ ಸಂಚಾಲಕ ಎಸ್.ಎ.ರಾಮದಾಸ್ ಹೇಳಿದರು.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಅಡಿ ದಿನಪತ್ರಿಕೆ ಹಂಚಿಕೆದಾರರು ಹಾಗೂ‌ ಹಾಲು ಮಾರಾಟಗಾರರಿಗೆ ಪಿಎಂ‌ ಸ್ವನಿಧಿ ಯೋಜನೆ ಕುರಿತು ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಿಜಿಟಲ್ ಪಾವತಿ ಮಾಡುವವರು ಬೀದಿ ಬದಿ ವ್ಯಾಪಾರಿಗಳಿಗೆ ಮೋಸವಾಗದಿರಲೆಂದು ಉಚಿತವಾಗಿ ಸೌಂಡ್ ಬಾಕ್ಸ್‌ ನೀಡಲಾಗುತ್ತದೆ. ಅಲ್ಲದೆ, ಇವರ ಖಾತೆಗಳಿಗೆ ತಿಂಗಳಿಗೆ ₹100 ಸಹಾಯಧನ ಹಾಕಲಾಗುತ್ತದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಡಿಜಿಟಲ್ ಪಾವತಿಯಲ್ಲಿ ಧಾರವಾಡ ಜಿಲ್ಲೆಯು ನಂಬರ್ ಒನ್‌ ಆಗಬೇಕು ಎಂದರು.

ಪಿಎಂ ಸ್ವನಿಧಿ ಯೋಜನೆಗೆ ವಿವಿಧ ಎಂಟು ಯೋಜನೆಗಳನ್ನು ಜೋಡಿಸಲಾಗುತ್ತದೆ. ಇದಕ್ಕೆ ನೋಂದಣಿ ಮಾಡಿಕೊಳ್ಳುವ ಅವಧಿಯನ್ನು 2024ರ ಡಿಸೆಂಬರ್ ವರೆಗೂ ವಿಸ್ತರಿಸಲಾಗಿದೆ. ಯೋಜನೆ ಅಡಿ ನೀಡಲಾದ ಸಾಲದಲ್ಲಿ ಶೇ 89ರಷ್ಟು ಮರುಪಾವತಿಯಾಗಿದೆ. ಸಮರ್ಪಕವಾಗಿ ಸಾಲ ಮರುಪಾವತಿ ಮಾಡಿದವರಿಗೆ ₹700 ಬೋನಸ್ ನೀಡಲಾಗುತ್ತದೆ ಎಂದು ಹೇಳಿದರು.

ಶಾಸಕ‌‌ ಮಹೇಶ ಟೆಂಗಿನಕಾಯಿ‌ ಮಾತನಾಡಿ, ‘ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಅವರು ಅನೇಕ ಕಷ್ಟಗಳನ್ನು ಎದುರಿಸಿದ್ದರು. ಹೀಗಾಗಿ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಬೇಕು, ಬೇರೆಯವರಿಗೆ ಕೆಲಸ ಕೊಡುವಂತಾಗಬೇಕು ಎಂದು ಯೋಜನೆ ಜಾರಿಗೆ ತರಲಾಗಿದೆ’ ಎಂದರು.

ಕೋವಿಡ್ ಸಂದರ್ಭದಲ್ಲಿ ಪತ್ರಿಕಾ ವಿತರಕರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರಿಗೆ ಈ ಯೋಜನೆ ಮೂಲಕ ನೆರವು ನೀಡಲಾಗಿದೆ. ಈ ಯೋಜನೆ ಅಡಿ ಸಾಲ ಪಡೆಯಲು ಯಾರಿಗೂ ಲಂಚ ಕೊಡಬೇಕಾದ ಅಗತ್ಯ ಇಲ್ಲ ಎಂದು ತಿಳಿಸಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಅಸಂಘಟಿತ ವಲಯದ ಕಾರ್ಮಿಕರು ದುಡಿದ ಹಣ ಬಡ್ಡಿ ಕಟ್ಟಲು ಸರಿಯಾಗುತ್ತಿತ್ತು. ಅವರು ಬಡತನದಿಂದ‌ ಹೊರಬಂದು, ಸ್ವಾವಲಂಬಿ ಜೀವನ‌ ಕಟ್ಟಿಕೊಳ್ಳಲು ಪಿ.ಎಂ ಸ್ವನಿಧಿ ಯೋಜನೆ ಸಹಕಾರಿಯಾಗಿದ್ದು, ಇದರ ಸದ್ಬಳಕೆ‌‌ ಮಾಡಿಕೊಳ್ಳಬೇಕು ಎಂದು ಹೇಳಿದರು.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, 12,397 ಜನರಿಗೆ ಸಾಲ‌ ನೀಡುವ ಗುರಿ ಹೊಂದಲಾಗಿತ್ತು. ಆದರೆ, 14,876 ಜನರಿಗೆ ಸಾಲ ವಿತರಿಸಲಾಗಿದ್ದು, ಶೇ 120 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಮೇಯರ್ ವೀಣಾ ಭರದ್ವಾಡ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ರೂಪಾ ಶೆಟ್ಟಿ, ಶಿವು ಮೆಣಸಿನಕಾಯಿ, ಸಂತೋಷ್ ಚವಾಣ್, ಬೀರಪ್ಪ ಖಂಡೇಕಾರ, ಸಂಜಯ ಕಪಟಕರ, ಹುಬ್ಬಳ್ಳಿ ವೃತ್ತ ಪತ್ರಿಕೆ ಮಾರಾಟಗಾರ ಸಂಘದ ಮನೋಹರಿ ಪರ್ವತಿ, ರಮೇಶ ಜಿತೂರಿ ಇದ್ದರು.

ಬೀದಿ ಬದಿ ವ್ಯಾಪಾರಿಗಳು ಆತ್ಮಗೌರವದಿಂದ ಬದುಕಬೇಕು ಎಂಬುದು ಈ ಪಿಎಂ ಸ್ವನಿಧಿ ಯೋಜನೆಯ ಉದ್ದೇಶ. 18 ಜಿಲ್ಲೆಗಳ 5107 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ
ಎಸ್.ಎ.ರಾಮದಾಸ್‌ ರಾಜ್ಯ ಸಂಚಾಲಕ ಪಿ.ಎಂ.ಸ್ವನಿಧಿ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT