ರಾಮನ ಹೆಸರಲ್ಲಿ ಬಿಜೆಪಿ ಅನಾಚಾರ: ದಿನೇಶ್‌ ಗುಂಡೂರಾವ್‌

7

ರಾಮನ ಹೆಸರಲ್ಲಿ ಬಿಜೆಪಿ ಅನಾಚಾರ: ದಿನೇಶ್‌ ಗುಂಡೂರಾವ್‌

Published:
Updated:
Prajavani

ಹುಬ್ಬಳ್ಳಿ: ‘ರಾಮನ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿಯವರು ರಾಜ್ಯದಲ್ಲಿ ಸುಸೂತ್ರವಾಗಿ ನಡೆಯುತ್ತಿರುವ ಮೈತ್ರಿ ಸರ್ಕಾರವನ್ನು ಕೆಡವಲು ಇನ್ನಿಲ್ಲದ ಕುತಂತ್ರಗಳನ್ನು ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಹರಿಹಾಯ್ದರು.

ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಶಾಸಕರನ್ನು ಸೆಳೆಯಲು ಹಣದ ಗಂಟನ್ನೇ ಇಟ್ಟುಕೊಂಡು ಕುಳಿತಿರುವ ಬಿಜೆಪಿಯವರು, ನಮ್ಮ ಹಲವು ಶಾಸಕರನ್ನು ಸಂಪರ್ಕಿಸಿ ಹಣ ತಯಾರಿದೆ ಬಂದು ಒಯ್ಯಿರಿ ಎಂದು ಹೇಳುತ್ತಿದ್ದಾರೆ. ಇದು ಲಜ್ಜೆಗೆಟ್ಟ ರಾಜಕಾರಣ. 10 ದಿನಗಳ ಕಾಲ ದೆಹಲಿ ಬಳಿಯ ಗುರುಗ್ರಾಮದಲ್ಲಿ ದುಬಾರಿ ಹೋಟೆಲ್‌ನಲ್ಲಿ ತಮ್ಮ 100 ಶಾಸಕರನ್ನು ಕೂಡಿ ಹಾಕಿಕೊಂಡಿದ್ದರು. ಅದರ ಖರ್ಚನ್ನು ಕೊಡುವವರು ಯಾರು? ಅಷ್ಟೊಂದು ಹಣ ಎಲ್ಲಿಂದ ಬಂತು’ ಎಂದು ದಿನೇಶ್‌ ಪ್ರಶ್ನಿಸಿದರು.

ಬಸವರಾಜ ಬೊಮ್ಮಾಯಿ, ಆರ್‌.ಅಶೋಕ, ಈಶ್ವರಪ್ಪ, ಸದಾನಂದಗೌಡರು ಬಜೆಟ್‌ ಪಾಸಾಗಲ್ಲ ಎಂದು ಹೇಳಿಕೆ ಕೊಡುತ್ತಿದ್ದಾರೆ. ಈಗಾಗಲೇ ಮೂರು ಬಾರಿ ಅಪರೇಶನ್ ಕಮಲ ಮಾಡಲು ಹೋಗಿ ಅವರಿಗೆ ಮುಖಭಂಗ ಆಗಿದೆ. ನಾಲ್ಕನೇ ಬಾರಿಯೂ ಮತ್ತೆ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಮಾನ ಮರ್ಯಾದೆಯೇ ಇಲ್ಲ ಎಂದರು. 

ನಾಳೆ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ: ವಿವಿಧ ಲೋಕಸಭಾ ಕ್ಷೇತ್ರಗಳಿಂದ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಾವೇಶಗಳನ್ನು ನಡೆಸುವ ಬಗ್ಗೆ ಚರ್ಚಿಸಲು ಇದೇ 6ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿದೆ. ಬಿಜೆಪಿಯವರು ಎಲ್ಲೆಲ್ಲಿ ಸಂಸದರಿದ್ದಾರೋ ಅಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಆದರೆ, ಅವರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ನಾವು ಜೆಡಿಎಸ್‌ ಮುಖಂಡರೊಂದಿಗೆ ಚರ್ಚೆ ನಡೆಸಿ ಸೀಟು ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತೇವೆ. ಬಜೆಟ್‌ ಮಂಡನೆಯಾದ ಬಳಿಕವೇ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ‘ ಎಂದು ಸ್ಪಷ್ಟಪಡಿಸಿದರು.

ಸಂಸದ ಜೋಶಿ ಏಕೆ ಬಾಯಿಮುಚ್ಚಿಕೊಂಡಿದ್ದಾರೆ? ಬರ ಪರಿಹಾರ ಕಾಮಗಾರಿಗೆ ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ₹ 4 ಸಾವಿರ ಕೋಟಿ ನೆರವು ನೀಡಿದೆ. ಆದರೆ, ಕರ್ನಾಟಕಕ್ಕೆ ಮಾತ್ರ ₹ 900 ಕೋಟಿ ನೀಡಿದೆ. ₹ 2 ಸಾವಿರ ಕೋಟಿ ನರೇಗಾ ಯೋಜನೆಯ ಹಣವನ್ನು ಬಿಡುಗಡೆ ಮಾಡಿಲ್ಲ. ಇದನ್ನು ಪ್ರಶ್ನಿಸಬೇಕಾದ ಪ್ರಹ್ಲಾದ ಜೋಶಿ ಸೇರಿದಂತೆ ಇತರ ಬಿಜೆಪಿ ಸಂಸದರು ಯಾಕೆ ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ‘ ಎಂದರು.

ದೇಶದಾದ್ಯಂತ ಮೋದಿ ಸರ್ಕಾರ ಸುಳ್ಳನ್ನು ಹೇಳಿಕೊಂಡು ಓಡಾಡುತ್ತಿದೆ. 45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಉಂಟಾಗಿದೆ. ಅಚ್ಛೆ ದಿನ್‌ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಲೋಕಪಾಲ್‌ ನೇಮಕ ಮಾಡಿಲ್ಲ. ಸಿಬಿಐ, ಆರ್‌ಬಿಐ, ಇಡಿ, ಆದಾಯ ತೆರಿಗೆ ಸಂಸ್ಥೆಗಳನ್ನು ಮೋದಿ ಹಾಳು ಮಾಡಿದ್ದಾರೆ. ಭ್ರಷ್ಟಾಚಾರ ತಡೆಗಟ್ಟಲು ಯಾವ ಕ್ರಮವನ್ನೂ ಕೈಗೊಂಡಿಲ್ಲ. ವಿರೋಧ ಪಕ್ಷದವರನ್ನು ಹುಡುಕಿ ಹುಡುಕಿ ಕಿರುಕುಳ ನೀಡುತ್ತಿದ್ದಾರೆ. ಲಲಿತ್‌ ಮೋದಿ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಬ್ಯಾಂಕ್‌ನ ಸಾವಿರಾರು ಕೋಟಿ ಕೊಂಡು ಪರಾರಿಯಾಗಿದ್ದಾರೆ. ಅವರನ್ನು ಕರೆತರಲು ಚೌಕಿದಾರ ಪ್ರಧಾನಿ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !