ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳು ಸಾಂಸ್ಕೃತಿಕ ಕ್ರಾಂತಿಯ ಸೈನಿಕರಾಗಿ: ಪ್ರೊ.ಕೆ.ಎಸ್‌.ಶರ್ಮಾ ಕರೆ

ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ
ಬಿ.ಜೆ. ಧನ್ಯಪ್ರಸಾದ್‌
Published 7 ಮಾರ್ಚ್ 2024, 5:42 IST
Last Updated 7 ಮಾರ್ಚ್ 2024, 5:42 IST
ಅಕ್ಷರ ಗಾತ್ರ

ಧಾರವಾಡ: ‘ಸಾಹಿತಿಗಳೆಲ್ಲರೂ ಸಾಂಸ್ಕೃತಿಕ ಕ್ರಾಂತಿಯ ಸೈನಿಕರಾಗಬೇಕು. ಹೋರಾಟನಿರತ ಕಾರ್ಮಿಕ ಸೈನ್ಯದೊಡನೆ ಹೆಗಲಿಗೆ ಹೆಗಲುಕೊಟ್ಟು ಸಾಮಾಜಿಕ ಪುನರ್‌ ರಚನೆಯ ಕ್ರಾಂತಿಕಾರಿ ಹೋರಾಟದಲ್ಲಿ ಭಾಗವಹಿಸಲು ಸನ್ನದ್ಧ ರಾದಾಗ ಸಮಾನತೆಯ ಹೊಸ ಸಮಾಜ ನಿರ್ಮಾಣವಾಗುತ್ತದೆ. ಆಗ ಸಾಹಿತಿಗಳು ನವ ಮಾನವೀಯ ಸಮಾಜದ ನಿರ್ಮಾಣದ ಸೈನಿಕರಾಗುತ್ತಾರೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಕೆ.ಎಸ್‌.ಶರ್ಮಾ ಹೇಳಿದರು.

ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ ಆವರಣದ ಸನ್ನಿಧಿ ಕಲಾಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿರುವ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಹಿತಿಗಳಿಗೆ ಆದರ್ಶ ಇರಬೇಕು. ಕಲ್ಪನಾಲೋಕದಲ್ಲಿ ವಿಹರಿಸುವ, ಅದನ್ನೇ ರಚಿಸುವವರಾದರೆ ಅದು ಸಾಹಿತ್ಯಕ್ಕಾಗಿ ಸಾಹಿತ್ಯ ಆಗಿಬಿಡುತ್ತದೆ. ಸಾಹಿತ್ಯ ಸಾಮಾಜಿಕ ಪರಿವರ್ತನೆ ಮತ್ತು ಪುನರ್‌ರಚನೆಗೆ ಇದೆ. ಈ ಗುರಿ ಸಾಧನೆಗೆ ಸಾಹಿತ್ಯ ರಚಿಸಿದರೆ, ಅಂಥವರು ಪ್ರಗತಿಪರ ಸಾಹಿತಿ, ಸಮಾಜದ ಮಾರ್ಗದರ್ಶಕರಾಗುತ್ತಾರೆ’ ಎಂದರು.

‘ಸಾಹಿತಿಗಳು ಸಾಮಾನ್ಯರಿಗಿಂತ ವಿಭಿನ್ನರು ನಿಜ. ಆದರೆ, ಸಾಹಿತಿಗಳು ಸಾಮಾನ್ಯರಂತೆಯೇ ತಾದಾತ್ಮ್ಯ ಹೊಂದಿ, ಅವರ ನೋವು–ನಲಿವು, ಅರಿತುಕೊಳ್ಳಬೇಕು. ಸಾಮಾನ್ಯರೊಡನೆ ಬೆರೆತು, ಅವರ ವಿಶ್ವಾಸ ಗಳಿಸಿ, ಸಮಸ್ಯೆ ಹಾಗೂ ಶೋಷಣೆಯಿಂದ ಅವರನ್ನು ವಿಮೋಚನೆಗೊಳಿಸಲು ಸಂಘಟಿಸಬೇಕು. ಅವರೊಡನೆ’ ಎಂದರು.

‘ದ.ರಾ.ಬೇಂದ್ರೆ ಅವರ ಕರ್ನಾಟಕದ ಪರಿಕಲ್ಪನೆಯಾದ ‘ನನ್ನದು ನಿನ್ನದು ಅವನದು ಆಸ್ತಿ–ಪಾಸ್ತಿ, ಕನ್ನಡ ತಾಯಿಗೆ ಸೇರುತ್ತದೆ, ಪಾನೆ ನಾಸ್ತಿ’ ಎಂಬ ತತ್ವದಡಿ ಸಮಾಜವಾದಿ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕಂಕಣಬದ್ದರಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

‘ಬೇಂದ್ರೆ ಅವರು ಸರ್ವಕಾಲಕ್ಕೆ ಸಲ್ಲುವವರು. ಅವರ ‘ನರಬಲಿ’ ಕವನವು ಇಂದಿಗೂ–ಎಂದಿಗೂ ಮಾರ್ಗದರ್ಶಿ ಕವನ. ಅವರ ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನವು ಭವಿಷ್ಯ ದರ್ಶನ ಒಳಗೊಂಡಿದೆ. ಅವರಿಗೆ ‘ಜೀವನವೇ ಕಾವ್ಯ ಹಾಗೂ ಕಾವ್ಯವೇ ಜೀವನವಾಗಿತ್ತು. ಅವರು 1,427 ಕವನಗಳನ್ನು ರಚಿಸಿದ್ದಾರೆ. ಬೇಂದ್ರೆ ಸಾಹಿತ್ಯ, ಕಾವ್ಯವನ್ನು ಮರು ಓದು ಮಾಡಬೇಕಾಗಿದೆ’ ಎಂದರು.

‘ಮಾರ್ಕ್ಸ್‌ವಾದವು ಜಾಗತಿಕ ದೃಷ್ಟಿಕೋನದ ವೈಜ್ಞಾನಿಕ ಬುನಾದಿ ಹೊಂದಿದೆ. ಭಾರತದ ಇತಿಹಾಸ, ಸಾಮಾಜಿಕ ರಚನೆ, ಪ್ರಚಲಿತ ಸ್ಥಿತಿಗಳನ್ನು ಆಳವಾಗಿ ಅಭ್ಯಾಸ ಮಾಡಿ ಮೂಲಸೂತ್ರಗಳನ್ನು ಪ್ರಯೋಗಿಸಬೇಕು. ಮಾರ್ಕ್ಸ್‌ವಾದಿ ಸಿದ್ಧಾಂತದ ಸೂತ್ರಗಳನ್ನು ಕಾರ್ಯಾಚರಣೆಗೊಳಿಸುವ ಅವಶ್ಯಕತೆ ಇದೆ’ ಎಂದರು.

ರಾಷ್ಟ್ರಧ್ವಜ, ಕನ್ನಡ ಧ್ವಜ ಮತ್ತು ಕಸಾಪ ಧ್ವಜಾರೋಹಣ ಮಾಡಲಾಯಿತು. ಸಾಹಿತಿ ವೆಂಕಟೇಶ ಮಾಚಕನೂರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಮತ್ತು ವಕೀಲ ಪ್ರಕಾಶ ಉಡಕೇರಿ ಅವರು ಧ್ವಜಾರೋಹಣ ನೆರವೇರಿಸಿದರು.

ಕನ್ನಡಕ್ಕಾಗಿ, ಕರ್ನಾಟಕ್ಕಾಗಿ ಬಹಳಷ್ಟು ಮಂದಿ ಹೋರಾಟ ಮಾಡಿದ್ದಾರೆ. ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸರ್ಕಾರ ಸಹ ಕಾರ್ಯಕ್ರಮ ಆಯೋಜಿಸುತ್ತಿದೆ
ಸಂತೋಷ ಎಸ್‌.ಲಾಡ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT