ಪೌರಕಾರ್ಮಿಕರಿಗೆ ದೀಪಾವಳಿ ಉಡುಗೊರೆ

7
ವೇತನಕ್ಕೆ ಆಗ್ರಹಿಸಿ ಪಾಲಿಕೆ ಎದುರು ಬೆಳಿಗ್ಗೆ ಪ್ರತಿಭಟನೆ, ಸಂಜೆ ಸಂಬಳ!

ಪೌರಕಾರ್ಮಿಕರಿಗೆ ದೀಪಾವಳಿ ಉಡುಗೊರೆ

Published:
Updated:
Deccan Herald

ಹುಬ್ಬಳ್ಳಿ: ಬಾಕಿ ಉಳಿದ ಒಂದು ತಿಂಗಳ ವೇತನ ಕೂಡಲೇ ನೀಡಬೇಕು ಎಂದು ಆಗ್ರಹಿಸಿ ಬುಧವಾರ ಬೆಳಿಗ್ಗೆ ಹೋರಾಟ ಮಾಡಿದ್ದ ಪಾಲಿಕೆಯ ಕಾಯಂ ಪೌರಕಾರ್ಮಿಕರಿಗೆ ಸಂಜೆ ವೇಳೆಗೆ ‘ದೀಪಾವಳಿ ಉಡುಗೊರೆ’ ಲಭಿಸಿದೆ.

ದೀಪಾವಳಿ ಹಬ್ಬದ ವೇಳೆಗೆ ಬಾಕಿ ವೇತನ ನೀಡಬೇಕು, ಪ್ರತಿತಿಂಗಳು ಐದನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು ಎನ್ನುವ ಬೇಡಿಕೆ ಮುಂದಿಟ್ಟು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘದ ಸದಸ್ಯರು ಪ್ರತಿಭಟನೆ ಮಾಡಿ ಪಾಲಿಕೆ ಕಚೇರಿ ಮುಂದೆ ಹಲಿಗೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಎಲ್ಲರೂ ಸಂಭ್ರಮದಿಂದ ದೀಪಾವಳಿ ಆಚರಿಸುತ್ತಿದ್ದಾರೆ. ಆದರೆ, ನಮಗೆ ವೇತನ ನೀಡಿದ ಕಾರಣ ನಮ್ಮ ಮನೆಯಲ್ಲಿ ಸಂಭ್ರಮವೇ ಇಲ್ಲ. ನಮ್ಮನ್ನು ನಂಬಿಕೊಂಡ ಕುಟುಂಬದವರು ಕೂಡ ಬೇಸರದಲ್ಲಿದ್ದಾರೆ. ಆದ್ದರಿಂದ ವೇತನ ನೀಡಬೇಕು ಪಟ್ಟು ಹಿಡಿದರು.

ಸಂಘದ ಗೌರವ ಅಧ್ಯಕ್ಷ ಬಸಪ್ಪ ಮಾದರ ಮಾತನಾಡಿ ‘ಪ್ರತಿ ತಿಂಗಳು 10 ಇಲ್ಲವೇ 15ನೇ ತಾರೀಖಿಗೆ ವೇತನ ಬರುತ್ತದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಆದ್ದರಿಂದ 5ನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು’ ಎಂದು ಪಾಲಿಕೆ ಆಯುಕ್ತ ಶಕೀಲ್‌ ಅಹ್ಮದ್‌ ಅವರಲ್ಲಿ ಮನವಿ ಮಾಡಿಕೊಂಡರು.

ಮನವಿ ಆಲಿಸಿದ ಬಳಿಕ ಶಕೀಲ್‌ ಅಹ್ಮದ್ ‘ಸಂಜೆ ವೇಳೆಗೆ ನಿಮ್ಮ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಈಗ ಪ್ರತಿಭಟನೆ ಕೈಬಿಡಿ’ ಎಂದು ಭರವಸೆ ನೀಡಿದರು.

‘ಆಯುಕ್ತರು ಕೊಟ್ಟ ಮಾತಿನಂತೆ ವೇತನ ನೀಡಿದ್ದರಿಂದ ಸಂತೋಷವಾಗಿದೆ. ಈಗ ದೀಪಾವಳಿ ಹಬ್ಬ ಆಚರಿಸಬಹುದು’ ಎಂದು ಬಸಪ್ಪ ಮಾದರ ಸಂತಸ ವ್ಯಕ್ತಪಡಿಸಿದರು.

ಸಂಘದ ಗೌರವಾಧ್ಯಕ್ಷ ಗಂಗಾಧರ ಟಗರಗುಂಟಿ, ಅಧ್ಯಕ್ಷ ನಿಂಗಪ್ಪ ಮೊರಬದ, ಉಪಾಧ್ಯಕ್ಷ ಡಿ.ಬಿ. ಕೆಂಪಣ್ಣನವರ, ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ದೇವಗಿರಿ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !