ಶನಿವಾರ, ಜುಲೈ 31, 2021
28 °C
ಕೋವಿಡ್‌ನಿಂದ ಚೇತರಿಸಿಕೊಂಡ ಮಾಜಿ ಮೇಯರ್‌ ಸುಧೀರ ಸರಾಫ್‌

ಸೋಂಕಿಗೆ ಹೆದರಬೇಡಿ, ಬಿಸಿ ನೀರು, ಕಷಾಯ ಕುಡಿಯಿರಿ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ’ಹೆದರುವಷ್ಟು ಕೊರೊನಾ ಗಂಭೀರ ಕಾಯಿಲೆಯೇನಲ್ಲ. ನಿತ್ಯ ಬಿಸಿನೀರು, ಕಷಾಯ ಕುಡಿಯುವುದನ್ನು ರೂಢಿಸಿಕೊಳ್ಳಿ. ಪದೇ ಪದೇ ಜ್ವರ ಬಾರದಂತೆ ಎಚ್ಚರ ವಹಿಸಿ...’

ಕೋವಿಡ್‌ 19ನಿಂದ ಚೇತರಿಸಿಕೊಂಡು ಗುರುವಾರ ಮನೆಗೆ ತೆರಳಿದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್‌ ಸುಧೀರ ಸರಾಫ್‌ ಹೇಳಿದ ಮಾತುಗಳಿವು. ನಗರದ ಕಿಮ್ಸ್‌ ಆಸ್ಪತ್ರೆಯಲ್ಲಿ ಹತ್ತು ದಿನ ದಾಖಲಾಗಿದ್ದ ಅವರು ಈಗ ಮನೆಯಲ್ಲಿ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ಬೇರೆ ಕಾರಣಕ್ಕೆ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಹೋದಾಗ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿ ಎಂದು ಸಲಹೆ ನೀಡಿದರು. ಅದರಂತೆ ಪರೀಕ್ಷೆಗೆ ಒಳಗಾದಾಗ ಸೋಂಕು ಇರುವುದು ದೃಢವಾಯಿತು. ಎಲ್ಲಿಯೂ ಹೋಗದಿದ್ದರೂ ಸೋಂಕು ಹೇಗೆ ತಗುಲಿತು? ಎನ್ನುವುದೇ ಅಚ್ಚರಿ ಮೂಡಿಸಿತು. ಯಾವ ಭಯವಿಲ್ಲದೆ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ವಿಟಮಿನ್‌ ಸಿ ಮತ್ತು ಜ್ವರ ಇದ್ದರೆ ಪ್ಯಾರಾಸಿಟಮಲ್‌ ಮಾತ್ರೆ ಕೊಡುತ್ತಾರೆ. ಆಸ್ಪತ್ರೆಗೆ ದಾಖಲಾದ ಎರಡ್ಮೂರು ದಿನಗಳಲ್ಲಿ ಜ್ವರ ಬಾರದಿದ್ದರೆ ನೀವು ಗುಣಮುಖರಾದಂತೆ.

ಸೋಂಕಿತ ವ್ಯಕ್ತಿಗೆ ಆರೋಗ್ಯ ತಪ್ಪಿದರೆ ಮಾತ್ರ ವೈದ್ಯರು ಚಿಕಿತ್ಸೆ ಕೊಡುತ್ತಾರೆ. ಇಲ್ಲವಾದರೆ ವಿಟಮಿನ್‌ಗಳ ಮಾತ್ರೆ ಸೇವನೆಯಷ್ಟೇ ಕೆಲಸ. ಸೋಂಕಿತರಲ್ಲಿ ಶೇ 50ರಿಂದ 60ರಷ್ಟು ಜನ ಮನೆಯಿಂದಲೇ ಬಿಸಿ ನೀರು ತರಿಸಿಕೊಂಡು ಕುಡಿಯುತ್ತಿದ್ದರು. ಬಿಸಿ ನೀರು ಕುಡಿಯುವುದನ್ನು ಬದುಕಿನ ಭಾಗವಾಗಿಸಿಕೊಳ್ಳಿ. ಹೆಚ್ಚು ವಿಶ್ರಾಂತಿ ಪಡೆಯಿರಿ.

ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮತ್ತೆ ಜ್ವರ ಬಾರದಂತೆ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆಸ್ಪತ್ರೆಯಲ್ಲಿಯೂ ಉತ್ತಮ ಊಟದ ವ್ಯವಸ್ಥೆ ಇತ್ತು. ಹತ್ತು ದಿನಗಳನ್ನು ಆರಾಮವಾಗಿ ಕಳೆದು ಬಂದಿದ್ದೇನೆ. ಆದ್ದರಿಂದ ಯಾರೂ ಸೋಂಕಿಗೆ ಹೆದರುವ ಅಗತ್ಯವಿಲ್ಲ. ಧೈರ್ಯದಿಂದ ಎದುರಿಸಿದರೆ ಅಷ್ಟೇ ಸಾಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.