ಸರ್ಕಾರಿ ಸಹಭಾಗಿತ್ವಕ್ಕೆ ಹಿಂಜರಿಕೆ ಬೇಡ
ಹುಬ್ಬಳ್ಳಿ: ’ಸರ್ಕಾರದ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಖಾಸಗಿ ಕಂಪನಿಗಳು ಹಾಗೂ ಸರ್ಕಾರೇತರ ಸಂಸ್ಥೆ–ಸಂಸ್ಥೆಗಳು ಹಿಂಜರಿಯುವ ಅಥವಾ ಭಯಪಡುವ ಅಗತ್ಯವಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಹಾಗೂ ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದರು.
ದೇಶಪಾಂಡೆ ಫೌಂಡೇಷನ್ ವತಿಯಿಂದ ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಎರಡು ದಿನಗಳ ‘ಅಭಿವೃದ್ಧಿ ಸಂವಾದ– ಪರಿಣಾಮಗಳ ಮರುಚಿಂತನೆ (ಡೆವಲಪ್‌ಮೆಂಟ್ ಡೈಲಾಗ್– ರಿಇಮ್ಯಾಜಿನಿಂಗ್ ಇಂಪ್ಯಾಕ್ಟ್)’ ಕಾರ್ಯಕ್ರಮದಲ್ಲಿ ‘ಸಹಭಾಗಿತ್ವದ ಮರುಚಿಂತನೆ’ ಗೋಷ್ಠಿಯಲ್ಲಿ ಇಬ್ಬರೂ ಹೀಗೆ ಒಮ್ಮತದಿಂದ ನುಡಿದರು.
ಗೋಷ್ಠಿಗೆ ಪೀಠಿಕೆ ಹಾಕಿದ ಫೋರ್ಡ್ ಫೌಂಡೇಷನ್‌ನ ಪ್ರಾದೇಶಿಕ ನಿರ್ದೇಶಕ ಪ್ರದೀಪ್ ನಾಯರ್, ‘ಖಾಸಗಿ ಕಂಪನಿಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಸರ್ಕಾರದೊಂದಿಗೆ ಕೆಲಸ ಮಾಡಲು ಹಿಂಜರಿಯುತ್ತವೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ‘ಈಗಿನ ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಿಂದಾಗಿ, ಸರ್ಕಾರದ ಜತೆ ಕೆಲಸ ಮಾಡುವುದು ಬಹಳ ಕಠಿಣ ಎಂಬ ವಾತಾವರಣ ಸೃಷ್ಟಿಯಾಗಿದೆ. ಇದು ತಪ್ಪು ಗ್ರಹಿಕೆ. ಸಾರ್ವಜನಿಕ ಹಿತಾಸಕ್ತಿಯ ಉತ್ತಮ ಯೋಜನೆಯೊಂದಿಗೆ ಯಾರೇ ಬಂದರೂ, ಅದಕ್ಕೆ ಸರ್ಕಾರದ ಸಹಯೋಗ ಸಿಗಲಿದೆ. ಈಗಾಗಲೇ ಹಲವು ಕಂಪನಿಗಳು ಮತ್ತು ಸಂಘ–ಸಂಸ್ಥೆಗಳು ಸರ್ಕಾರದೊಂದಿಗೆ ಕೆಲಸ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದರು.
ಅವರ ಮಾತಿಗೆ ದನಿಗೂಡಿಸಿದ ಎನ್.ಆರ್. ನಾರಾಯಣಮೂರ್ತಿ, ‘ಸರ್ಕಾರದೊಂದಿಗೆ ಕೆಲಸ ಮಾಡುವುದು ಬಹಳ ಕಠಿಣ ಎಂಬುದು ಮಿಥ್. ನಾವು ರೂಪಿಸುವ ಯೋಜನೆ ವೈಯಕ್ತಿಕ ಹಿತಾಸಕ್ತಿಗಿಂತ, ಸಾರ್ವಜನಿಕ ಹಿತಾಸಕ್ತಿ ಮತ್ತು ಸೇವಾ ಕೇಂದ್ರಿತವಾಗಿದ್ದರೆ ಸರ್ಕಾರದ ಸಹಕಾರ ಖಂಡಿತಾ ಸಿಗುತ್ತದೆ’ ಎಂದು ಅಭಿಪ್ರಾಯಟ್ಟರು.
‘ಸರ್ಕಾರದ ಬಳಿ ಇರುವುದು ಜನರ ದುಡ್ಡು. ಹಾಗಾಗಿ, ಖಾಸಗಿ ಕಂಪನಿ ಅಥವಾ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಕೆಲಸ ಮಾಡಬೇಕಾದರೆ, ಅನೇಕ ಕಾನೂನುಗಳಿರುತ್ತವೆ. ಜತೆಗೆ, ಅದರ ಪ್ರಕ್ರಿಯೆಯೂ ನಿಧಾನವಾಗಿರುತ್ತದೆ’ ಎಂದ ಅವರು, ಇನ್ಫೊಸಿಸ್ ಸ್ಥಾಪನೆಯ ಆರಂಭದ ದಿನಗಳಲ್ಲಿ ಅಮೆರಿಕದಲ್ಲಿ ತಮಗಾದ ಅನುಭವವೊಂದನ್ನು ಮೆಲುಕು ಹಾಕಿದರು.
ಆರು ತಿಂಗಳು ಅಲೆದಿದ್ದೆ:‘1983ರಲ್ಲಿ ಅಮೆರಿಕದಿಂದ ಭಾರತಕ್ಕೆ ಕಂಪ್ಯೂಟರ್‌ಗಳನ್ನು ರಫ್ತು ಮಾಡಲು ನನಗೆ ಆರು ತಿಂಗಳು ಬೇಕಾಯಿತು. ಅದಕ್ಕಾಗಿ ಪ್ರತಿ ವಾರ ನಾನು ವಾಷಿಂಗ್ಟನ್‌ಗೆ ಹೋಗುತ್ತಿದೆ. ಹೋದಾಗಲೆಲ್ಲ ಹೊಸ ಫೈಲ್ ಮತ್ತು ದಾಖಲೆಗಳನ್ನು ಕೊಂಡೊಯ್ಯುತ್ತಿದ್ದೆ’ ಎಂದು ನೆನಪು ಮಾಡಿಕೊಂಡರು.
ವೇದಿಕೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಪಿರಮಲ್ ಫೌಂಡೇಷನ್ ಮುಖ್ಯಸ್ಥ ಪರೇಶ್ ಎಸ್. ಪ್ಯಾರಾಸ್ನಿಸ್ ಇದ್ದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All