ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ

ಕಿಮ್ಸ್ ಉಪ ವೈದ್ಯಕೀಯ ಅಧೀಕ್ಷಕ ಡಾ. ಮುಲ್ಕಿ ಪಾಟೀಲ ಸೇವೆ
Last Updated 30 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಸ್ಪತ್ರೆಗೆ ಬರಲಾಗದ ಸ್ಥಿತಿಯಲ್ಲಿರುವ ನಗರದ ಕೋವಿಡ್ ಮತ್ತು ಕೋವಿಡ್‌ಯೇತರ ರೋಗಿಗಳ ಮನೆಗೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲು, ಕಿಮ್ಸ್ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಎಸ್‌.ವೈ. ಮುಲ್ಕಿ ಪಾಟೀಲ ಮುಂದಾಗಿದ್ದಾರೆ.

ಭಾರತೀಯ ಜೈನ ಸಂಘಟನೆಯ ಹುಬ್ಬಳ್ಳಿ ಘಟಕದ ಸಹಯೋಗದೊಂದಿಗೆ, ನಿತ್ಯ ಮೂರು ತಾಸು ಉಚಿತ ಸೇವೆ ನೀಡುತ್ತಿದ್ದಾರೆ. ಇದಕ್ಕಾಗಿ, ಸಹಾಯವಾಣಿ ಆರಂಭಿಸಿರುವಪಾಟೀಲ ಅವರು, ಇಲ್ಲಿಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳುವವರ ಮನೆಗೆ ತೆರಳಿ ಚಿಕಿತ್ಸೆ ನೀಡಲಿದ್ದಾರೆ.

15 ಮಂದಿಗೆ ಚಿಕಿತ್ಸೆ: ‘ಲಾಕ್‌ಡೌನ್‌ ಅಂತ್ಯಗೊಳ್ಳುವ ಮೇ 12ರವರೆಗೆ ಸಂಜೆ 4ರಿಂದ ರಾತ್ರಿ 7ರವರೆಗೆ ಚಿಕಿತ್ಸೆ ನೀಡಲಿದ್ದೇನೆ. ಕರ್ತವ್ಯದ ಜತೆಗೆ ಈ ಸೇವೆ ಮಾಡುತ್ತಿರುವುದರಿಂದ ಮೊದಲ 15 ಮಂದಿ ಮನೆಗೆ ಮಾತ್ರ ಭೇಟಿ ನೀಡುವೆ. ಮೊದಲ ಒಂದೂವರೆ ತಾಸು ಕೋವಿಡ್‌ಯೇತರ ರೋಗಿಗಳ ಮನೆಗೆ, ನಂತರ ಸೋಂಕಿತರ ಮನೆಗೆ ಭೇಟಿ ನೀಡಲಾಗುವುದು. ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಸುರಕ್ಷಾ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ರೋಗಿಗಳಿಂದ ಶುಲ್ಕ ಪಡೆಯುವುದಿಲ್ಲ’ ಎಂದು ಡಾ.ಮುಲ್ಕಿಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಲಕ್ಷಣಗಳಿಲ್ಲದವರ ಆರೋಗ್ಯದಲ್ಲಿಯೂ ಏರುಪೇರಾಗುತ್ತಿದೆ. ಹೋಂ ಐಸೊಲೇಷನ್‌ ಆಗಿದ್ದುಕೊಂಡು ವೈದ್ಯರು ನೀಡುವ ಸಲಹೆ ಮೇರೆಗೆ ಆರೈಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈ ಪೈಕಿ, ಒಂದಿಷ್ಟು ಮಂದಿ ಮನೆಗಾದರೂ ಭೇಟಿ ನೀಡಿ ಚಿಕಿತ್ಸೆ ನೀಡುವುದರಿಂದ, ರೋಗಿಗಳ ಮನೋಸ್ಥೈರ್ಯ ಹೆಚ್ಚಲಿದೆ’ ಎಂದು ಅಭಿಪ್ರಾಯಪಟ್ಟರು.

ವೈದ್ಯರ ಭೇಟಿ ನೋಂದಣಿಗೆ ಸಹಾಯವಾಣಿ

ಪ್ರಕಾಶ್ ಕಾವಡ: 99450 98111
ವಿಶಾಲ್ ಜೈನ್: 90362 00946

ಕರೆ ಮಾಡಬೇಕಾದ ಸಮಯ: ಮಧ್ಯಾಹ್ನ 12 ರಿಂದ 3ರ ತನಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT