ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಬ್ಯಾಡಗಿ ಡಬ್ಬಿ, ಕಡ್ಡಿ, ಗುಂಟೂರು ಮಾರಾಟ

ಮೂರುಸಾವಿರ ಮಠದ ಪ್ರೌಢಶಾಲೆ ಮೈದಾನದಲ್ಲಿ ಒಣ ಮೆಣಸಿನಕಾಯಿ ಮೇಳ
Published 3 ಫೆಬ್ರುವರಿ 2024, 5:02 IST
Last Updated 3 ಫೆಬ್ರುವರಿ 2024, 5:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ’ಬ್ಯಾಡಗಿ ಡಬ್ಬಿ, ಕಡ್ಡಿ, ಗುಂಟೂರು, ದೇವನೂರು ಲೋಕಲ್‌, ಹಳಿಯಾಳ ಲೋಕಲ್‌... ಹೀಗೆ ಹತ್ತಾರು ಬಗೆಯ ಒಣ ಮೆಣಸಿನಕಾಯಿ ಮಾರಾಟವು ನಗರದ ಮೂರುಸಾವಿರ ಮಠದ ಪ್ರೌಢಶಾಲೆ ಮೈದಾನದಲ್ಲಿ ಶುಕ್ರವಾರ ತುಸು ಜೋರಾಗಿಯೇ ನಡೆಯಿತು.

ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯು ‘12ನೇ ಒಣ ಮೆಣಸಿನಕಾಯಿ ಮೇಳ: 2023–24’ ಆಯೋಜಿಸಿದ್ದು, ಮೇಳದಲ್ಲಿ ಧಾರವಾಡ, ಗದಗ ಮತ್ತು ವಿಜಯಪುರ ಜಿಲ್ಲೆಗಳಿಂದ 50ಕ್ಕೂ ಅಧಿಕ ರೈತರು ತಾವು ಬೆಳೆದಿದ್ದ ಒಣ ಮೆಣಸಿನಕಾಯಿ ಮಾರಾಟ ಮಾಡಿದರು.

ರೈತರ ಅನುಕೂಲಕ್ಕಾಗಿಯೇ ಮಂಡಳಿಯ ಅಧಿಕಾರಿಗಳು ನೂರು ಮಳಿಗೆಗಳನ್ನು ತೆರಿದ್ದಿದ್ಧಾರೆ. ಒಣ ಮೆಣಸಿನಕಾಯಿ ತಳಿ ಹಾಗೂ ಗುಣಮಟ್ಟದ ಆಧಾರದ ಮೇಲೆ ಅವುಗಳ ಬೆಲೆಯೂ ಇದೆ. ಆರಂಭದಲ್ಲಿ ‍ಪ್ರತಿ ಕೆಜಿಗೆ ₹250ರಿಂದ ₹700 ರತನಕ ಒಣ ಮೆಣಸಿನಕಾಯಿ ದರ ನಿಗದಿ ಮಾಡಲಾಗಿದೆ. ಇದರೊಂದಿಗೆ ವಿವಿಧ ತಳಿಯ ಖಾರದ ಪುಡಿ ಮಾರಾಟವೂ ಇದೆ. ಅಲ್ಲದೇ ಜವಾರಿ ಮಡಿಕೆ ಕಾಳು, ಕೊತ್ತಂಬರಿ ಬೀಜ, ಬಾಳೆ ಹಣ್ಣುಗಳ ಮಾರಾಟವೂ ಮೇಳದಲ್ಲಿ ಇದೆ.

ಮೇಳವು ಫೆ.4ರವರೆಗೆ ನಡೆಯಲಿದೆ. ಮೊದಲ ದಿನದ ಮೇಳದಲ್ಲಿಯೇ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹತ್ತಾರು ಕೆಜಿ ಒಣಮೆಣಸಿನಕಾಯಿ ಖರೀದಿ ಮಾಡಿದ್ದೂ ಕಂಡು ಬಂದಿತು.

ಮೊದಲ ದಿನ 9 ಕ್ವಿಂಟಲ್‌ ಮಾರಾಟ:

’ಧಾರವಾಡ, ಗದಗ ಮತ್ತು ವಿಜಯಪುರ ಜಿಲ್ಲೆಗಳಿಂದ 50ಕ್ಕೂ ಅಧಿಕ ರೈತರು ಮೇಳದಲ್ಲಿ ಭಾಗವಹಿಸಿದ್ದು, ಮೊದಲ ದಿನ 124 ಕ್ವಿಂಟಲ್‌ ಒಣ ಮೆಣಸಿನಕಾಯಿ ಬಂದಿದ್ದು, ಇದರಲ್ಲಿ 9 ಕ್ವಿಂಟಲ್‌ ಮಾರಾಟ ಮಾಡಲಾಗಿದ್ದು, ₹8 ಲಕ್ಷ ವಹಿವಾಟು ನಡೆದಿದೆ. ಫೆ.4ರ ತನಕವೂ ಮೇಳ ನಡೆಯಲಿದ್ದು, ಇನ್ನೂ ಕೆಲ ಜಿಲ್ಲೆಗಳ ರೈತರು ನಾಳೆ, ನಾಡಿದ್ದು ಮೇಳದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ವಹಿವಾಟು ಸಹ ನಡೆಯಲಿದೆ’ ಎಂದು ರಾಜ್ಯ ಸಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್‌.ಗಿರೀಶ್‌  ಹಾಗೂ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಸಿದ್ದರಾಮಯ್ಯ ಮು.ಬರಗಿಮಠ ಹೇಳಿದರು.

ಫೆ.4ರ ತನಕ ನಡೆಯುವ ಮೇಳ ಮೊದಲ ದಿನ ₹8 ಲಕ್ಷ ವಹಿವಾಟು ಖಾರದ ಪುಡಿ, ಮಡಿಕೆ ಕಾಳು ಮಾರಾಟ ವಿವಿಧ ಬಗೆಯ ತಳಿಗಳ ಮಾರಾಟ

ರೈತರಿಗೆ ಅನುಕೂಲ: ಲಾಡ್‌ ‘ಒಣ ಮೆಣಸಿನಕಾಯಿ ಮೇಳವು ಬೆಳೆಗಾರರಿಗೆ ತುಂಬಾ ಅನುಕೂಲವಾಗಿದೆ. ಅದರಲ್ಲಿಯೂ ರೈತರೊಂದಿಗೆ ಗ್ರಾಹಕರು ನೇರವಾಗಿ ವ್ಯಾಪಾರ ವಹಿವಾಟು ನಡೆಸಲು ಸಹಾಯಕವಾಗಲಿದೆ. ರೈತರಿಗೆ ಉತ್ತಮ ಮಾರುಕಟ್ಟೆಯೂ ದೊರೆಯಲಿದೆ. ಕೃಷಿ ತೋಟಗಾರಿಕೆ ವಿಷಯ ಅಧ್ಯಯನ ನಡೆಸುವಂತಹ ಸಂಶೋಧನಾ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿ ವಿವಿಧ ಬಗೆಯ ಒಣ ಮೆಣಸಿನಕಾಯಿ ತಳಿಗಳ ಬಗ್ಗೆ ಮಾಹಿತಿ ಪಡೆಯಬಹುದು‘ ಎಂದು ಮೇಳವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು. ಫಲಾನುಭವಿಗಳ ಜತೆ ಚರ್ಚೆ ‘ಶಾಸಕರಾದ ಪ್ರಸಾದ್‌ ಅಬ್ಬಯ್ಯ ಹಾಗೂ ಮಹೇಶ ಟೆಂಗಿನಕಾಯಿ ಅವರ ಕ್ಷೇತ್ರದಲ್ಲಿ ಫೆ.3ರಂದು ಸರ್ಕಾರದ ಯೋಜನೆಗಳ ಫಲಾನುಭವಿಗಳ ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನವಲಗುಂದ ಕಲಘಟಗಿ ಹಾಗೂ ಕುಂದಗೋಳದಲ್ಲಿಯೂ ಸಭೆ ನಡೆಸಲಾಗುವುದು‘ ಎಂದರು. ’ಫೆ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿ ಜನರೊಂದಿಗೆ ಸಭೆ ನಡೆಸುವ ಸಾಧ್ಯತೆಯೂ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT