ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನಾ ರ‍್ಯಾಲಿ ಜ. 28ಕ್ಕೆ

ಹುಬ್ಬಳ್ಳಿಯ ವಿವಿಧ ದಲಿತ ಸಂಘ–ಸಂಸ್ಥೆಗಳ ಮಹಾಮಂಡಳದಿಂದ ಆಯೋಜನೆ
Last Updated 25 ಜನವರಿ 2020, 10:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಿಎಎ, ಎನ್‌ಆರ್‌ಸಿ ವಿರೋಧಿಸಿ ವಿವಿಧ ದಲಿತ ಸಂಘ, ಸಂಸ್ಥೆಗಳ ಮಹಾಮಂಡಳದಿಂದ ಜ.28ರಂದು ನಗರದಲ್ಲಿ ಬೃಹತ್‌ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಅಂದು ಬೆಳಿಗ್ಗೆ 11ಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಗುವುದು. ಬಳಿಕ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ವರೆಗೆ ರ‍್ಯಾಲಿ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಿಎಎ ಮತ್ತು ಎನ್‌ಆರ್‌ಸಿಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ಕೇಂದ್ರ ಸರ್ಕಾರ ಕಿವಿಗೊಡುತ್ತಿಲ್ಲ. ಸಂಸತ್ತಿನಲ್ಲಿ ಬಹುಮತ ಇದೆ ಎಂಬ ಒಂದೇ ಕಾರಣಕ್ಕೆ ಸಂವಿಧಾನದ ಚೌಕಟ್ಟನ್ನು ಮೀರಿ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿರುವ ನುಸುಳುಕೋರರು, ಭಯೋತ್ಪಾದಕನ್ನು ಹುಡುಕಿ ಹೊರಹಾಕಿ. ಅದಕ್ಕೆ ನಮ್ಮ ಬೆಂಬಲ ಇದೆ. ಅದನ್ನು ಬಿಟ್ಟು ತಮ್ಮ ಗುಪ್ತ ಅಜೆಂಡಾವನ್ನು ಇಟ್ಟುಕೊಂಡು ಎನ್‌ಆರ್‌ಸಿ, ಎನ್‌ಪಿಆರ್‌ ಜಾರಿಗೆ ದೇಶದ ಜನ ಬಿಡುವುದಿಲ್ಲ ಎಂದರು.

ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ದೇಶವನ್ನು ಜಾತಿ, ಧರ್ಮದ ಆಧಾರದ ಮೇಲೆ ಒಡೆಯಲು ಬಿಜೆಪಿ ಮುಂದಾಗಿದೆ ಎಂದು ಹೇಳಿದರು.

ಶಾ ಹೇಳಿಕೆ ಸುಳ್ಳು:ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಲ್ಲಿ ಮತೀಯ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾಗಿ ಬಂದವರಲ್ಲಿ ದಲಿತರೇ ಹೆಚ್ಚಿದ್ದಾರೆ ಎಂಬ ಕೇಂದ್ರ ಗೃಹ ಸಚಿವರ ಹೇಳಿಕೆ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ದಲಿತರ ಬಗ್ಗೆ ಬಿಜೆಪಿಗೆ ಕಿಂಚಿತ್ತೂ ಕಾಳಜಿ ಇಲ್ಲ. ದಲಿತರನ್ನು ದಾರಿ ತಪ್ಪಿಸುವ ಕೆಲಸವನ್ನು ಶಾ ಮತ್ತು ಮೋದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಭಿವೃದ್ಧಿ ಕುಂಟಿತ:ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕುಸಿದುಹೋಗಿದೆ. ಕೈಗಾರಿಕಾ ಕ್ಷೇತ್ರ, ಆಟೋ ಮೊಬೈಲ್‌ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ರಫ್ತು ಉದ್ಯಮ ಶೂನ್ಯವಾಗಿದೆ. ಯುವ ಜನರಿಗೆ ಉದ್ಯೋಗವಿಲ್ಲದೇ ಪರಿತಪಿಸುತ್ತಿದ್ದಾರೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡು ಹತಾಶರಾಗಿದ್ದಾರೆ. ಆರು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ದೇಶದ ಅಭಿವೃದ್ಧಿ 10 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಎಂದು ಆರೋಪಿಸಿದರು.

ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಬಿಪಿಸಿಎಲ್‌, ಬಿಎಸ್‌ಎನ್‌ಎಲ್‌, ಎಲ್‌ಐಸಿ ದಿವಾಳಿಯಾಗಿವೆ. ಇವುಗಳನ್ನು ಖಾಸಗಿಯವರಿಗೆ ಮಾರುವ ಹುನ್ನಾರ ನಡೆದಿದೆ. ಈ ಕಂಪನಿಗಳ ಉಳಿವಿಗೆ ಯಾವುದೇ ಕ್ರಮಕೈಗೊಳ್ಳದೇ ಜನವಿರೋಧಿ, ದೇಶವಿರೋಧಿ ಕಾನೂನುಗಳನ್ನು ಜಾರಿ ಮಾಡಲು ಮುಂದಾಗಿರುವುದು ಖಂಡನೀಯ ಎಂದರು.

ಬಿಜೆಪಿ ಆಡಳಿತಕ್ಕೂ ಮೊದಲು ದೇಶದ ಸಾಲದ ಮೊತ್ತ ₹ 40 ಸಾವಿರ ಲಕ್ಷ ಕೋಟಿ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಾಲದ ಪ್ರಮಾಣ ದುಪ್ಪಟ್ಟಾಗಿದ್ದು, ₹80 ಸಾವಿರ ಲಕ್ಷ ಕೋಟಿ ತಲುಪಿದೆ ಎಂದು ಹೇಳಿದರು.

ದಲಿತ ಮುಖಂಡರಾದ ಪಿತಾಂಬ್ರಪ್ಪ ಬಿಳಾರ, ಗುರುನಾಥ ಉಳ್ಳಿಕಾಶಿ, ಗಣೇಶ ಟಗರಗುಂಟಿ, ವೆಂಕಟೇಶ ಮೇಸ್ತ್ರಿ, ಮಾರುತಿ ದೊಡ್ಡಮನಿ, ಗಣೇಶ ದೊಡ್ಡಮನಿ, ಪ್ರಭು ಪ್ರಭಾಕರ, ಯಮನೂರು ಗುಡಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT