ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತೀರ್ಪು| ಹುಬ್ಬಳ್ಳಿಯಲ್ಲಿ ಬಂದೋಬಸ್ತ್ ನಡುವೆಯೂ ಎಂದಿನಂತೆ ವಹಿವಾಟು

Last Updated 9 ನವೆಂಬರ್ 2019, 10:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಇಲ್ಲಿನ‌ ಪ್ರಮುಖ ಮಾರುಕಟ್ಟೆ ಪ್ರದೇಶವಾದ ದುರ್ಗದಬೈಲ್ ವೃತ್ತ ಹಾಗೂ ಸುತ್ತಮುತ್ತ ಶನಿವಾರ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ವಹಿವಾಟು ಎಂದಿನಂತೆ ಸಾಗಿತ್ತು. ಪ್ರಮುಖ ವೃತ್ತಗಳಲ್ಲಿ ನಾಲ್ಕೈದು ಪೊಲೀಸರನ್ನು ನಿಯೋಜಿಸಲಾಗಿತ್ತು.

‌ತುಳಸಿ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಖರೀದಿ ಭರಾಟೆಯೂ ಜೋರಾಗಿದೆ. ಉರಿ ಬಿಸಿಲನ್ನೂ ಲೆಕ್ಕಸದೆ ಜನ ಹಬ್ಬಕ್ಕೆ ಬೇಕಾದ ಕಬ್ಬು, ಹೂವು, ಹಣ್ಣು, ಮಾವಿನ ಸೊಪ್ಪು, ನೆಲ್ಲಿಕಾಯಿ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ತಲಾ 80 ಸಿಬ್ಬಂದಿ:‘ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ಸೇರಿದಂತೆ, ದಕ್ಷಿಣ ವಿಭಾಗದ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ತಲಾ 80 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದೆ' ಎಂದು ದುರ್ಗದ ಬೈಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಹರ ಠಾಣೆಯ ಎಎಸ್‌ಐ ಎಸ್.ಎಫ್. ಅಣ್ಣಿಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ದುರ್ಗದ ಬೈಲ್‌ ವೃತ್ತ ಹುಬ್ಬಳ್ಳಿಯ ಪ್ರಮುಖ ಮಾರುಕಟ್ಟೆ ಪ್ರದೇಶವಾಗಿದೆ. ಇದರ ಸುತ್ತಮುತ್ತ ಷಾ ಬಜಾರ್, ಹಣ್ಣಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಹೋಲ್‌ಸೇಲ್ ಬಜಾರ್, ಸಿಟಿ ಬಸ್ ನಿಲ್ದಾಣ, ಕೊಪ್ಪೀಕರ ರಸ್ತೆ, ಶಿವಾಜಿ ರಸ್ತೆ, ಸ್ಟೇಷನ್ ರಸ್ತೆ, ಬ್ರಾಡ್‌ವೇ ಸೇರಿದಂತೆ ಪ್ರಮುಖ ಮಾರುಕಟ್ಟೆ ಪ್ರದೇಶಗಳಿವೆ. ಜತೆಗೆ, ಹಿಂದೂ ದೇವಾಲಯಗಳು ಹಾಗೂ ಮುಸಲ್ಮಾನರ ಮಸೀದಿಗಳು ಇರುವ ಈ ಜಾಗ ಕೋಮು ಸೂಕ್ಷ್ಮ ಪ್ರದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT