ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಓಪಿ ಗಣಪ: ಜಿಲ್ಲಾಡಳಿತ ಬದ್ಧ, ತಯಾರಕರಿಗೆ ಅನುಮಾನ

ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ
Last Updated 1 ಸೆಪ್ಟೆಂಬರ್ 2018, 10:05 IST
ಅಕ್ಷರ ಗಾತ್ರ

ಜಿಲ್ಲಾಡಳಿತವು 2016 ರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು ಎಂದು ಹೇಳುತ್ತಲೇ ಬರುತ್ತಿದೆ. 2017ರಲ್ಲಿ ಅಭಿಯಾನವನ್ನು ತೀವ್ರಗೊಳಿಸಲಾಗಿತ್ತು. ಆದರೂ ಕೊನೆ ಗಳಿಗೆಯಲ್ಲಿ ಬಂದ ಒತ್ತಡದಿಂದಾಗಿ ಜಿಲ್ಲಾಡಳಿತ ಪಿಒಪಿ ಮೂರ್ತಿಗಳನ್ನು ಕೂಡಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿಲ್ಲ. ಹಾಗಾಗಿ, ಮಣ್ಣಿನ ಮೂರ್ತಿ ತಯಾರಿಸಿದವರು ಒಂದಷ್ಟು ನಷ್ಟವನ್ನೂ ಅನುಭವಿಸಿದರು.

ಈ ವರ್ಷ ಜಿಲ್ಲಾಡಳಿತ ಈಗಾಗಲೇ ಗಣೇಶ ಮೂರ್ತಿಗಳ ತಯಾಕರು, ಗಣೇಶ ಮಂಡಳಗಳು ಹಾಗೂ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಿದೆ. ಪರಿಸರ ಸ್ನೇಹಿ ಹಬ್ಬವನ್ನಾಗಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚೆಕ್‌ ಪೋಸ್ಟ್‌ಗಳನ್ನು ಆರಂಭಿಸಿ, ಪಿಒಪಿ ಮೂರ್ತಿಗಳನ್ನು ಅವಳಿ ನಗರಕ್ಕೆ ತರದಂತೆ ತಡೆಯಲಾಗುತ್ತಿದೆ.

‘ಪಿಒಪಿ ಗಣೇಶ ಮೂರ್ತಿಗಳನ್ನು ಬಳಸದಂತೆ ಸರ್ಕಾರ ಆದೇಶ ಹೊರಡಿಸಿದೆ. ಎರಡು ವರ್ಷ ಸಡಿಲಿಕೆ ನೀಡಲಾಗಿತ್ತು. ಈ ಬಾರಿ ಅಂತಹ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರೆ ಕಠಿಣ ಕ್ರಮ ಜರುಗಿಸುವುದು ಖಚಿತ’ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಎಚ್ಚರಿಸಿದ್ದಾರೆ.

ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಸಾಥ್‌

ಹೋದ ವರ್ಷ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು ಎಂಬ ಕೂಗಿಗೆ ಹುಬ್ಬಳ್ಳಿಯ ಗಣೇಶೋತ್ಸವ ಸಮಿತಿಗಳ ಮಹಾಮಂಡಳವೂ ಧ್ವನಿಗೂಡಿಸಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಪಿಒಪಿ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಾಗ ಯಾವುದೇ ಪ್ರತಿರೋಧ ತೋರಿರಲಿಲ್ಲ.

ಈ ಬಾರಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯ ಜಿಲ್ಲಾಡಳಿತದ ನಿರ್ಧಾರಕ್ಕೆ ಮಹಾಮಂಡಳ ಸಾಥ್‌ ನೀಡಲು ಮುಂದಾಗಿದೆ. ಯಾರಾದರೂ, ಪಿಒಪಿ ಮೂರ್ತಿಗಳನ್ನು ನೀಡಿದರೆ ದೂರು ನೀಡಲಾಗುವುದು ಎಂದು ಮಹಾಮಂಡಳ ಅಧ್ಯಕ್ಷ ಶ್ರೀಶೈಲಪ್ಪ ಶೆಟ್ಟರ್‌ ಹೇಳಿದ್ದಾರೆ.

ಏಕ ಗವಾಕ್ಷಿ ವ್ಯವಸ್ಥೆ

ಮೂರ್ತಿಗಳ ಪ್ರತಿಷ್ಠಾಪನೆಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳವರು ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪಾಲಿಕೆ, ಹೆಸ್ಕಾಂ, ಅಗ್ನಿಶಾಮಕ ದಳದ ಅನುಮತಿಯನ್ನು ಒಂದೇ ಕಡೆ ನೀಡಲಾಗುವುದು. ಅದಕ್ಕಾಗಿ ಮೂರು ಏಕ ಗವಾಕ್ಷಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ಜೊತೆಗೆ ಪೊಲೀಸ್‌ ಇಲಾಖೆಯು ಚೆಕ್‌ ಪೋಸ್ಟ್ ಆರಂಭಿಸಿ ಪಿಇಪಿ ಮೂರ್ತಿಗಳನ್ನು ಹೊರಗಡೆಯಿಂದ ತಡೆಯಲು ಮುಂದಾಗಿದೆ.

ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಹಿಂದಿನ ವರ್ಷಗಳಲ್ಲಿ ಕೊನೆ ಗಳಿಗೆಯಲ್ಲಿ ಅವಕಾಶ ನೀಡಿದ್ದನ್ನು ನೋಡಿದ ಮೂರ್ತಿ ತಯಾರಕರಿಗೆ, ಪಿಒಪಿ ಮೂರ್ತಿಗಳನ್ನು ಕೂಡಿಸುವುದನ್ನು ತಡೆಯುತ್ತಾರೆ ಎಂಬ ಬಗ್ಗೆ ಅನುಮಾನವಿದೆ. ಅದನ್ನು ಹೋಗಲಾಡಿಸಲು ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗುವುದೇ? ಕಾದುನೋಡಬೇಕಿದೆ.

ಜಾಗ ಕೊಡಲೇ ಇಲ್ಲ

ಗಣೇಶ ಮೂರ್ತಿಗಳ ತಯಾರಿಕೆಗೆ ಈ ಬಾರಿ ಬಿಟ್ಟುಬಿಡದೇ ಜಿಟಿ, ಜಿಟಿ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ.

ಬಿಸಿಲು ಬಿದ್ದರೆ ಮನೆಯಂಗಳದಲ್ಲಿಯೂ ಗಣೇಶ ಮೂರ್ತಿ ತಯಾರಿಸುವ ಕೆಲಸ ನಡೆಯುತ್ತಿತ್ತು. ಮೂರ್ತಿಗಳು ಬೇಗನೆ ಒಣಗುತ್ತಿದ್ದವು. ಸತತವಾಗಿ ಮಳೆ ಬೀಳುತ್ತಿರುವುದರಿಂದ ವಾತಾವರಣ ತಂಪಾಗಿರುವುದರಿಂದ ಮೂರ್ತಿಗಳೇ ಒಣಗುತ್ತಿಲ್ಲ ಎನ್ನುತ್ತಾರೆ ಮೂರ್ತಿ ತಯಾರಕ ಗಣೇಶ ಪೋಣಾರ್ಕರ್.ಜೋರಾದ ಮಳೆಯಾಗಿದ್ದರೆ ಹಳ್ಳಗಳಲ್ಲಿ ನೀರು ಹರಿದು ಗಣೇಶ ಮೂರ್ತಿ ತಯಾರಿಕೆಗೆ ಬೇಕಾದ ಒಳ್ಳೆಯ ಮಣ್ಣು ದೊರೆಯುತ್ತಿತ್ತು. ಮಳೆ ಜಿಟಿ, ಜಿಟಿಯಾಗಿರುವುದರಿಂದ ಮರಳು ಮಿಶ್ರಿತ ಮಣ್ಣು ಸಿಗುತ್ತಿದೆ.

ಅದನ್ನೇ ಪುಡಿ ಮಾಡಿ, ಮರಳು ತೆಗೆದು ಮೂರ್ತಿಗಳನ್ನು ಸಿದ್ಧಪಡಿಸಬೇಕಿದೆ ಎನ್ನುತ್ತಾರೆ ಅವರು.ಮಣ್ಣಿನ ಮೂರ್ತಿಗಳನ್ನು ತಯಾರಿಸಲು ಜಾಗದ ಅವಶ್ಯಕತೆ ಇದೆ ಎಂದು ಕಳೆದ ಬಾರಿ ಜಿಲ್ಲಾಡಳಿತ ನಡೆಸಿದ್ದ ಸಭೆಯಲ್ಲಿ ಕೇಳಿದ್ದವು. ಆಗಿದ್ದ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ, ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಜಾಗ ಒದಗಿಸುವ ಭರವಸೆ ನೀಡಿದ್ದರು. ಆ ನಂತರ ಈಡೇರಿಸಲೇ ಇಲ್ಲ. ಈಗ ಇಬ್ಬರೂ ಬದಲಾಗಿದ್ದಾರೆ. ಈಗಿರುವವರಿಗೆ ಕೇಳಿದರೆ, ಈ ವರ್ಷವೂ ಅದೇ ಭರವಸೆ ದೊರೆತಿದೆ ಎನ್ನುತ್ತಾರೆ ಅವರು.

ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರೆ, ಅಂಥವರಿಗೆ ₹ 10 ಸಾವಿರ ದಂಡ ಅಥವಾ ಮೂರು ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಕಠಿಣ ಕ್ರಮಕ್ಕೆ ಅವಕಾಶ ಕೊಡಬೇಡಿ
–ದೀಪಾ ಚೋಳನ್‌, ಜಿಲ್ಲಾಧಿಕಾರಿ

ಕಳೆದ ವರ್ಷ ಕೊನೆ ಗಳಿಗೆಯಲ್ಲಿ ಪಿಒಪಿ ಮೂರ್ತಿಗಳಿಗೆ ಅವಕಾಶ ನೀಡಿದ್ದರಿಂದ ಮಣ್ಣಿನ ಮೂರ್ತಿಗಳು ಹಾಗೆಯೇ ಉಳಿದವು. ಹೀಗಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕಿದೆ
ಗಣೇಶ ಪೋಣಾರ್ಕರ್, ಮೂರ್ತಿ ತಯಾರಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT