ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್ಗಾದಲ್ಲಿ ಕಾಮಣ್ಣನ ಪ್ರತಿಷ್ಠಾಪನೆಗೆ ಪಟ್ಟು

ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
Last Updated 8 ಮಾರ್ಚ್ 2023, 20:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶ ಚೌತಿ, ಟಿಪ್ಪು ಜಯಂತಿ ಆಚರಣೆಗೆ ಪಾಲಿಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಕಾಮಣ್ಣ–ರತಿ ಮೂರ್ತಿ ಪ್ರತಿಷ್ಠಾಪಿಸಿ ಹೋಳಿ ಹಬ್ಬಕ್ಕೂ ಅವಕಾಶ ನೀಡಬೇಕು ಎಂದು ನಗರದ ವಿವಿಧ ಸಂಘ–ಸಂಸ್ಥೆಗಳು ಪಾಲಿಕೆ ಅಧಿಕಾರಿಗಳಿಗೆ, ಮೇಯರ್‌ಗೆ ಮನವಿ ಸಲ್ಲಿಸಿವೆ.

ಮನವಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಮೇಯರ್‌ ಈರೇಶ ಅಂಚಟಗೇರಿ ಬುಧವಾರ ಪಾಲಿಕೆ ಸಭಾ ನಾಯಕರು, ವಿರೋಧ ಪಕ್ಷದ ನಾಯಕರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಪಕ್ಷದ ಸದಸ್ಯರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ‘ಪಾಲಿಕೆ ಸದಸ್ಯರ ಜತೆ ಚರ್ಚಿಸಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಸಮಿತಿಗೆ ಕಾಮಣ್ಣ–ರತಿ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡುವ ನಿರ್ಣಯ ಕೈಗೊಳ್ಳಲಾಗಿದ್ದು, ಮುಂದಿನ ಕ್ರಮಕ್ಕೆ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ರಾತ್ರಿಯಾದರೂ ಆಯುಕ್ತರು ಅನುಮತಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡ ಮಹಾಮಂಡಳಿ ಸಮಿತಿ ಸದಸ್ಯರು ಈದ್ಗಾ ಮೈದಾನದ ಎದುರು ಪ್ರತಿಭಟನೆ ನಡೆಸಿದರು. ಹಲಗೆ, ತಮಟೆ ಬಾರಿಸಿ, ಕಾಮಣ್ಣ–ರತಿ ಮೂರ್ತಿ ಪ್ರತಿಷ್ಠಾಪಿಸಿ, ಹೋಳಿ ಹಬ್ಬ ಆಚರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸಂಜಯ ಬಡಸ್ಕರ್‌, ಕೆ. ಗೋವರ್ಧನರಾವ್, ವಿಜಯ ಕ್ಷೀರಸಾಗರ, ರಮೇಶ ಕದಂ, ವಿವೇಕ ಎಂ., ರಾಘು ಯಲ್ಲಕ್ಕನವರ, ಶರಣಯ್ಯ ಹಿರೇಮಠ, ರಾಜು ಪಿ., ಅರುಣ ಪ್ರಭು, ಸುನೀಲ ಕಟ್ಟಿಮನಿ, ಗಂಗಾಧರ ಶೆಟ್ಟರ್‌, ದೀಪಕ ಬೊಮ್ಮಸಾಗರ ಇದ್ದರು.

ಬಿಗಿ ಭದ್ರತೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಇಲಾಖೆ ಈದ್ಗಾ ಮೈದಾನದಲ್ಲಿ ವಾಹನಗಳ ನಿಲುಗಡೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಮೈದಾನ ಪ್ರವೇಶಿಸುವ ಎರಡೂ ದ್ವಾರಗಳಿಗೆ ಬೀಗ ಹಾಕಲಾಗಿದೆ. ಪೊಲೀಸ್‌ ಹಿರಿಯ ಅಧಿಕಾರಿಗಳು ಮೈದಾನಕ್ಕೆ ತೆರಳಿ ಪರಿಶೀಲನೆ ನಡೆಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

‘ಮೈದಾನದ ಗೇಟ್‌ ಎದುರು ಮೂರ್ತಿ ಪ್ರತಿಷ್ಠಾಪನೆ’
‘ಮೇಯರ್‌ ಅನುಮತಿ ನೀಡಿದರೂ ಆಯುಕ್ತರು ನೀಡುತ್ತಿಲ್ಲ. ಮೊಬೈಲ್‌ ಫೋನ್‌ ಬಂದ್‌ ಮಾಡಿರುವುದರಿಂದ, ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರ ಹಿಂದೆ ಯಾರದ್ದೋ ಷಡ್ಯಂತ್ರವಿದೆ. ಗುರುವಾರ ಬೆಳಿಗ್ಗೆ 9ರ ಒಳಗೆ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅನುಮತಿ ನೀಡಬೇಕು. ಇಲ್ಲದಿದ್ದರೆ ಮಹಾಮಂಡಳಿ ಸಮಿತಿ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಮೈದಾನದ ಪ್ರವೇಶದ್ವಾರದ ಎದುರು ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸಿ ಹೋಳಿ ಹಬ್ಬ ಆಚರಿಸುತ್ತೇವೆ’ ಎಂದು ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಸಮಿತಿ ಅಧ್ಯಕ್ಷ ಸಂಜಯ ಬಡಸ್ಕರ್‌ ಹೇಳಿದರು.

*
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ನಗರದಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಶಾಂತಿಯಿಂದ ಹಬ್ಬ ಆಚರಿಸಬೇಕು.
-ರಮನ್‌ ಗುಪ್ತಾ, ಕಮಿಷನರ್‌, ಹು–ಧಾ ಮಹಾನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT