ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಿಸಿದ್ದು ಗುಂಡೋ? ಪಟಾಕಿಯೋ...?

ಸ್ಪಷ್ಟತೆ ಇಲ್ಲದ ಪ್ರಥಮ ವರ್ತಮಾನ ವರದಿ; ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ
Last Updated 6 ಜೂನ್ 2022, 13:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಹೊರವಲಯದ ಕುಸಗಲ್‌ ರಸ್ತೆಯ ಎವಿಕೆ ಗಾರ್ಡನ್‌ ಫಾರ್ಮ್‌ನಲ್ಲಿ ಸೋಮವಾರ ರಾತ್ರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಜನ್ಮದಿನ ಕಾರ್ಯಕ್ರಮ ಆಚರಿಸಲಾಗಿದೆ.

ಕೇಶ್ವಾಪುರದ ಸುಂದರಪೌಲ್ ಗೊಟ್ಟೆಮುಕುಲ ಮತ್ತು ಅವನ ತಂದೆ ಫಿಲೋಮಿನ್ ಗೊಟ್ಟೆಮುಕುಲ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸೋಮವಾರ ರಾತ್ರಿ ಫಿಲೋಮಿನ್‌ ಅವರ ಪುತ್ರ ಸುಂದರಪೌಲ್‌ ಅವರ ಜನ್ಮದಿನ ಕಾರ್ಯಕ್ರಮಕ್ಕೆ ನೂರಾರು ಮಂದಿ ಪಾಲ್ಗೊಂಡಿದ್ದರು. ಆ ವೇಳೆ ಗುಂಡಿನ ಸದ್ದೋ, ಪಟಾಕಿಯ ಸದ್ದೋ ಕೇಳಿರುವ ಸಾರ್ವಜನಿಕರು ಪೊಲೀಸ್‌ ಠಾಣೆಗೆ ಕರೆ ಮಾಡಿದ್ದರು. ಕರೆ ಆಧರಿಸಿ ಸ್ಥಳಕ್ಕೆ ತೆರಳಿದಾಗ ಮದ್ಯದ ಬಾಟಲುಗಳು ಸಿಕ್ಕಿವೆ. ಗುಂಡು ಹಾರಿಸಿರುವ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಫಿಲೋಮಿನಾ ಅವರ ಬಳಿಯಿದ್ದ ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್‌ ರಮೇಶ ಗೋಕಾಕ ತಿಳಿಸಿದರು.

ನಡೆದಿದ್ದೇನು? ‘ಫಿಲೋಮಿನ್‌ ಗೊಟ್ಟೆಮುಕುಲ ಅವರ ಪುತ್ರನ ಜನ್ಮದಿನ ಕಾರ್ಯಕ್ರಮದಲ್ಲಿ ರೌಡಿಗಳು ಪಾಲ್ಗೊಂಡಿದ್ದರು. ಮದ್ಯದ ಅಮಲಿನಲ್ಲಿ ಒಬ್ಬರು ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಆ ಸದ್ದು ಕೇಳಿ ಫಾರ್ಮ್‌ಹೌಸ್‌ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಯಾವುದರ ಸದ್ದು ಎಂದು ಸ್ಪಷ್ಟವಾಗಿ ಗೊತ್ತಾಗದ ಕಾರಣ ಠಾಣೆಯಲ್ಲಿ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ (ಪಟಾಕಿ/ಗುಂಡು ಹಾರಿಸಿ) ನಿರ್ಲಕ್ಷ್ಯ ತೋರಿದ ಕುರಿತು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿಯೇ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ಹೇಳುತ್ತವೆ.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಕೆಲವರು ಹಾಗೂ ರೌಡಿಗಳು ಪಿಸ್ತೂಲ್‌ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅದನ್ನು ಬಳಸಲು ಅನುಮತಿ ಪಡೆದವರು ಚುನಾವಣೆ ಸಂದರ್ಭದಲ್ಲಿ ಠಾಣೆಗಳಿಗೆ ಹಸ್ತಾಂತರಿಸಬೇಕು ಎನ್ನುವ ಕಟ್ಟುನಿಟ್ಟಿನ ನಿಯಮವಿದೆ. ಹಾಗಿದ್ದಾಗಲೂ, ಫಿಲೋಮಿನಾ ಅವರ ಬಳಿ ಅನುಮತಿ ಪಡೆದ ಪಿಸ್ತೂಲ್‌ ಹೇಗೆ ಇತ್ತು? ಎನ್ನುವ ಪ್ರಶ್ನೆ ಸಾರ್ವಜನಿಕರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT