ಧಾರವಾಡ: ತಾಲ್ಲೂಕಿನ ಹನುಮನಾಳ ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದು ರೈತ ಭೀಮನಗೌಡ ಮಲ್ಲನಗೌಡ ಪಾಟೀಲ (65) ಮೃತಪಟ್ಟಿದ್ಧಾರೆ.
ಅವರು ಮಧ್ಯಾಹ್ನ ಹೊಲದಿಂದ ವಾಪಸ್ಸಾಗುವಾಗ ಸಿಡಿಲು ಬಡಿದಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ಧಾರೆ.
ಧಾರವಾಡ ಜಿಲ್ಲೆಯ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ಕುಂದಗೋಳ, ಧಾರವಾಡ, ಉಪ್ಪಿನಬೆಟಗೇರಿ ಹುಬ್ಬಳ್ಳಿ ಭಾಗದಲ್ಲಿಯೂ ಗುಡುಗಿನ ಆರ್ಭಟ ಸಹಿತ ಮಳೆಯಾಗಿದೆ.
ಕಾರವಾರ ವರದಿ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗ ಸೇರಿ ಕೆಲವೆಡೆ ಆಗಾಗ ಬಿರುಸಿನ ಮಳೆಯಾಗಿದೆ. ಕರಾವಳಿ ಭಾಗದಲ್ಲಿ ಕೆಲ ಹೊತ್ತು ಬಿರುಸಿನ ಮಳೆ ಸುರಿದಿದ್ದರೆ, ಹಳಿಯಾಳ, ಮುಂಡಗೋಡ, ಸಿದ್ದಾಪುರ, ದಾಂಡೇಲಿಯಲ್ಲಿ ಆಗಾಗ ಮಳೆ ಬಿದ್ದಿದೆ.