ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕರೆಗೆ ₹20 ಸಾವಿರ ಬರ ಪರಿಹಾರ ನೀಡಿ: ಕಿಸಾನ್ ಸಂಘ ಆಗ್ರಹ

ವಿವಿಧ ಬೇಡಿಕೆಗಳ ಈಡೇರಿಕೆಗೆ ಭಾರತೀಯ ಕಿಸಾನ್ ಸಂಘ ಆಗ್ರಹ
Published 3 ನವೆಂಬರ್ 2023, 14:27 IST
Last Updated 3 ನವೆಂಬರ್ 2023, 14:27 IST
ಅಕ್ಷರ ಗಾತ್ರ

ಧಾರವಾಡ: ರೈತರ ಸಾಲಮನ್ನಾ ಮಾಡಬೇಕು, ಎಕರೆಗೆ ₹20 ಸಾವಿರ ಬರ ಪರಿಹಾರ ನೀಡಬೇಕು ಎಂಬುದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಭಾರತೀಯ ಕಿಸಾನ್ ಸಂಘದ ಕರ್ನಾಟಕ ಉತ್ತರ ಪ್ರಾಂತದ ಜಿಲ್ಲಾ ಘಟಕದವರು ಶುಕ್ರವಾರ ಪ್ರತಿಭಟನೆ ನಡೆಸಿದರು. 

ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಭೀಮಸೇನ ಕೊಕರೆ ಮಾತನಾಡಿ, ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಜಾನುವಾರುಗಳಿಗೆ ಮೇವಿನ ವ್ಯವಸ್ಥೆಗೆ ಕ್ರಮ ವಹಿಸಬೇಕು. ನೀರಾವರಿ ಜಮೀನಿನಲ್ಲಿ ಮೇವು ಬೆಳೆಸಿ ಆ ರೈತರಿಂದ ಸರ್ಕಾರವೇ ಖರೀದಿಸಿ ಪೂರೈಸಬೇಕು ಎಂದು ಒತ್ತಾಯಿಸಿದರು.

ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಪ್ರತಿದಿನ ಹಗಲಿನಲ್ಲಿ 9 ಗಂಟೆ ವಿದ್ಯುತ್ ಪೂರೈಸಬೇಕು,
ನೀರಾವರಿ ಪಂಪಸೆಟ್‍ಗಳಿಗೆ ಈ ಹಿಂದೆ ₹50 ನೋಂದಣಿ ಶುಲ್ಕ ಹಾಗೂ ₹18,500  ಠೇವಣಿ ಪಾವತಿಸಿಕೊಂಡು ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. ಸರ್ಕಾರ ಈ ಯೋಜನೆ ರದ್ದುಗೊಳಿಸಿದೆ. ಇದರಿಂದ ರೈತರಿಗೆ ಸಂಕಷ್ಟವಾಗಿದೆ. ಸರ್ಕಾರವು ಕೂಡಲೇ ಹಿಂದಿನ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಅನೇಕ ಕಡೆ ಮಳೆ ಮಾಪಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಫಸಲ್ ಭೀಮಾ ಯೋಜನೆಯಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಗಳಿಗೆ ಸರಿಯಾದ ಮಾಹಿತಿ ದೊರೆಯದ ಕಾರಣ ಮಳೆ ಆಧಾರಿತ ಬೆಳೆ ಸಮೀಕ್ಷೆಗೆ ತೊಂದರೆಯಾಗುತ್ತಿದೆ. ಮಳೆ ಮಾಪನ ಘಟಕಗಳ ರಿಪೇರಿಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕಲಾ ಭವನದ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಾಸರಘಟ್ಟ, ಜಿಲ್ಲಾಧ್ಯಕ್ಷ ಮಂಜುನಾಥ ಗೌರಿ, ಪುಟ್ಟಸ್ವಾಮಿ, ರಮೇಶ ಕೊರವಿ, ಗುರುನಾಥ ಬೀರನವರ, ಮಹಾದೇವಪ್ಪ ರಾಯನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT