ಸೋಮವಾರ, ಸೆಪ್ಟೆಂಬರ್ 20, 2021
24 °C
ಪಂಚಮಸಾಲಿ ಮೀಸಲಾತಿ: ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟ: ಕೂಡಲಸಂಗಮ ಪೀಠದ ಸ್ವಾಮೀಜಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆಯನ್ನು ಆರು ತಿಂಗಳೊಳಗೆ ಈಡೇರಿಸುವುದಾಗಿ ರಾಜ್ಯ ಸರ್ಕಾರ ನೀಡಿದ್ದ ಗಡುವು, ಸೆಪ್ಟೆಂಬರ್ 15ಕ್ಕೆ ಮುಗಿಯಲಿದೆ. ಅಷ್ಟರೊಳಗೆ ಮಾತು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಧರಣಿ ಆರಂಭಿಸಲಾಗುವುದು’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಮೀಸಲಾತಿ ಹೋರಾಟ ಕುರಿತು ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಚಳವಳಿಗಾರರ ದುಂಡು ಮೇಜಿನ ಸಭೆಯ ನಿರ್ಣಯಗಳನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡ ಅವರು, ‘ಸರ್ಕಾರ ಕೊಟ್ಟಿದ್ದ ಮಾತನ್ನು ನೆನಪಿಸುವುದಕ್ಕಾಗಿ ರಾಜ್ಯದಾದ್ಯಂತ ಆ. 26ರಿಂದ ಸೆ. 30ರವರೆಗೆ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್’ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದರು.

‘ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಿಂದ ಅಭಿಯಾನ ಆರಂಭವಾಗಲಿದೆ. ಪಂಚಮಸಾಲಿ ಗೌಡ ಹಾಗೂ ದೀಕ್ಷಾ ಪಂಚಮಸಾಲಿ ಸಮಾಜದವರನ್ನು ಒಗ್ಗೂಡಿಸಿಕೊಂಡು, ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ಹೋರಾಟ ಕುರಿತು ಜಾಗೃತಿ ಮೂಡಿಸಲಾಗುವುದು. ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಜನ್ಮದಿನವಾದ ಅ. 1ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಕೂರಲಾಗುವುದು’ ಎಂದು ಹೇಳಿದರು.

ಸಿ.ಸಿ ಪಾಟೀಲ ಸಂಧಾನಕಾರ: ‘ಮೀಸಲಾತಿ ಹೋರಾಟ ಕುರಿತು ಸರ್ಕಾರದ ಜೊತೆ ಸಂಧಾನಕಾರರಾಗಿ ಮಾತುಕತೆ ನಡೆಸಲು ಸಚಿವ ಸಿ.ಸಿ. ಪಾಟೀಲ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ  ಮೀಸಲಾತಿಗೆ ಸಂಬಂಧಿಸಿದ ಕುರುಬ, ವಾಲ್ಮೀಕಿ, ಮಡಿವಾಳ, ಗಂಗಾಮತ, ಆದಿ ಬಣಜಿಗ, ಕುಡು ಒಕ್ಕಲಿಗ ಹಾಗೂ ಇತರ ಸಮಾಜಗಳ ಬೇಡಿಕೆಗಳನ್ನು ಸಹ ಸರ್ಕಾರ ಈಡೇರಿಸಬೇಕು ಎಂದು ಸಮುದಾಯ ಒತ್ತಾಯಿಸುತ್ತದೆ’ ಎಂದು ತಿಳಿಸಿದರು.

‘ಒಬಿಸಿಗಳನ್ನು ಗುರುತಿಸುವ ಮತ್ತು ಪ್ರತ್ಯೇಕ ಪಟ್ಟಿ ರೂಪಿಸುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ರಾಜ್ಯ ಸರ್ಕಾರಕ್ಕೆ ನಮ್ಮ ಬೇಡಿಕೆ ಈಡೇರಿಸುವ ಹಾದಿ ಈಗ ಸುಗಮವಾಗಿದೆ. ಇದಕ್ಕೆ ಪೂರಕವಾಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಶೀಘ್ರ ವರದಿ ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೀಸಲಾತಿಯೇ ಗುರಿ: ‘ಕೆಲ ಮಠಾಧೀಶರು ತಮ್ಮ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿ, ಸಚಿವರನ್ನಾಗಿ ಮಾಡಿ ಎಂದು ಒತ್ತಾಯಿಸುತ್ತಾರೆ. ನಮ್ಮ ಗುರಿ ಸಮುದಾಯಕ್ಕೆ ಮೀಸಲಾತಿ ಕೊಡಿಸುವುದಷ್ಟೇ. ನಂಬಿಕೆ ಇದ್ದವರು ಹೋರಾಟದಲ್ಲಿ ಪಾಲ್ಗೊಳ್ಳಬಹುದು’ ಎಂದು ಸ್ವಾಮೀಜಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ‘ಇನ್ನೂ ಹತ್ತು ಪಂಚಮಸಾಲಿ ಪೀಠಗಳು ಸ್ಥಾಪನೆಯಾದರೂ, ಯಾವ ಪೀಠದ ಅಂತರಂಗದಲ್ಲಿ ಏನಿದೆ ಎಂಬುದು ಸಮುದಾಯದವರಿಗೆ ಗೊತ್ತಾಗಿದೆ’ ಎಂದರು.

ಸಚಿವ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರು ಸಭೆ ಆರಂಭಕ್ಕೂ ಮುಂಚೆ, ಸ್ವಾಮೀಜಿಯನ್ನು ಭೇಟಿ ಮಾಡಿದರು. ‘ಸಭೆಯಲ್ಲಿ ಭಾಗವಹಿಸುವುದಿಲ್ಲ’ ಎಂದು ಸ್ವಕ್ಷೇತ್ರ ನರಗುಂದ ಕಡೆಗೆ ಪ್ರಯಾಣ ಬೆಳೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು