ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರೋತ್ಸವ: ಉತ್ತರ ಕರ್ನಾಟಕ ಕಡೆಗಣನೆ

ರಾಜಧಾನಿ ಬೆಂಗಳೂರಿಗಷ್ಟೇ ಸೀಮಿತವಾಗುವ ಅಕಾಡೆಮಿ ಚಟುವಟಿಕೆಗಳು– ಅಸಮಾಧಾನ
Last Updated 30 ಜನವರಿ 2022, 3:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಾಷ್ಟ್ರೀಯ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ಹಾಗೂ ಇತರ ಚಟುವಟಿಕೆಗಳು ಬೆಂಗಳೂರಿಗಷ್ಟೇ ಸೀಮಿತವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಲೇ ಇವೆ. ಇದಕ್ಕೆ ಪುಷ್ಟಿ ನೀಡುವಂತೆ, ಮಾರ್ಚ್ 3ರಿಂದ 10ರವರೆಗೆ ನಡೆಯಲಿರುವ ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೂಡ ರಾಜಧಾನಿಯಲ್ಲೇ ನಡೆಯುತ್ತಿದೆ.

ಏಕ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು, ವಿಮಾನ ಸಂಪರ್ಕ, ರೈಲು, ಬಸ್ ಸಂಪರ್ಕ, ದೇಶ–ವಿದೇಶಗಳ ಅತಿಥಿಗಳ ವಸತಿ ವ್ಯವಸ್ಥೆಗೆ ಬೇಕಾದ ಪಂಚತಾರಾ ಹೋಟೆಲ್‌ಗಳು, ಸಿನಿಪ್ರಿಯರು ಸೇರಿದಂತೆ ಚಲನಚಿತ್ರೋತ್ಸವ ಆಯೋಜನೆಗೆ ಅಗತ್ಯವಿರುವ ಮೂಲಸೌಕರ್ಯಗಳು ಉತ್ತರ ಕರ್ನಾಟದಲ್ಲೂ ಇದೆ. ಆದರೂ ಉತ್ಸವಗಳ ವಿಷಯದಲ್ಲಿ ಈ ಭಾಗ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಇವೆ.

ಚಟುವಟಿಕೆಗಳು ಸ್ಥಳಾಂತರಗೊಳ್ಳಲಿ

‘ಸಿನಿಮಾ ಪ್ರೇಮಿಗಳು ಬೆಂಗಳೂರಿಗಿಂತ ಹೆಚ್ಚಾಗಿರುವುದು ಉತ್ತರ ಕರ್ನಾಟಕದಲ್ಲಿ. ಅಲ್ಲಿ ನಡೆಯುವ ಚಲನಚಿತ್ರೋತ್ಸವಗಳಿಗೆ ಇಲ್ಲಿನವರು ದುಡ್ಡು ಖರ್ಚು ಮಾಡಿಕೊಂಡು ಹೋಗಲು ಸಾಧ್ಯವೇ? ಈ ಭಾಗದಲ್ಲೂ ಚಲನಚಿತ್ರೋತ್ಸವ ಆಯೋಜಿಸಬೇಕಿತ್ತು’ ಎಂದು ನಟ ಹಾಗೂ ರಂಗಕರ್ಮಿ ಯಶವಂತ ಸರದೇಶಪಾಂಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಚಲನಚಿತ್ರ ಅಕಾಡೆಮಿಯ ಕಾರ್ಯಕ್ರಮಗಳು ದ್ವಿತೀಯ ಹಂತದ ನಗರಗಳಿಗೆ ಸ್ಥಳಾಂತರಗೊಳ್ಳಬೇಕು. ಅದಕ್ಕೆ ಬೇಕಾದ ನೆರವು ನೀಡುವವರು, ಕಲಾವಿದರು ಸೇರಿದಂತೆ ಅಗತ್ಯ ಸಂಪನ್ಮೂಲಗಳು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಹಲವೆಡೆ ಸಿಗುತ್ತವೆ. ಒಗ್ಗೂಡಿಸುವ ಇಚ್ಛಾಶಕ್ತಿ ಬೇಕಷ್ಟೆ. ಈ ನಿಟ್ಟಿನಲ್ಲಿ ಅಕಾಡೆಮಿ ಮತ್ತು ಸರ್ಕಾರ ನಿರ್ಧಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರತ್ಯೇಕ ಚಲನಚಿತ್ರೋತ್ಸವ

‘ಉತ್ತರ ಕರ್ನಾಟಕದಲ್ಲಿ ಯಾವುದೇ ಚಟುವಟಿಕೆಗಳು ನಡೆಯದಿರುವುದು ಬೇಸರ ತಂದಿದೆ. ಅದಕ್ಕಾಗಿಯೇ, ಅಕಾಡೆಮಿ ಸಹಯೋಗದಲ್ಲಿ ಈ ಭಾಗದಲ್ಲಿಯೂ ಮಂಡಳಿಯಿಂದ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಪ್ರತ್ಯೇಕವಾಗಿ ಆಯೋಜಿಸುವ ಚಿಂತನೆ ನಡೆಸಲಾಗಿದೆ’ ಎಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ ಹೇಳಿದರು.

ಸಂಗಮದ ವೇದಿಕೆ

‘ಚಲನಚಿತ್ರೋತ್ಸವೆಂದರೆ ಪ್ರೇಕ್ಷಕರು, ಕಲಾವಿದರು, ನಿರ್ದೇಶಕರು, ತಾಂತ್ರಿಕ ವರ್ಗದವರ ಸಂಗಮದ ವೇದಿಕೆ. ಹೈಬ್ರೀಡ್ ಉತ್ಸವದಿಂದ ಅದು ಸಾಧ್ಯವಿಲ್ಲ. ಬದಲಿಗೆ, ಬೆಂಗಳೂರೇತರ ನಗರಗಳ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲೂ ಚಲನಚಿತ್ರೋತ್ಸವ ಆಯೋಜನೆಯಾಗಬೇಕು’ ಎಂದು ನಟ ರಾಣೆಬೆನ್ನೂರಿನ ಏಕಲವ್ಯ ಅಭಿಪ್ರಾಯಟ್ಟರು.

‘ಚಲನಚಿತ್ರೋತ್ಸವ ನಡೆಸಲು ಬೇಕಾದ ಸೌಲಭ್ಯಗಳು ಇಲ್ಲಿವೆ. ಉತ್ತಮ ಸಂಪರ್ಕ ವ್ಯವಸ್ಥೆಯೂ ಇದೆ. ಕಿತ್ತೂರು ಕರ್ನಾಟಕದವರೇ ಆಗಿರುವ ಮುಖ್ಯಮಂತ್ರಿ ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕು’ ಎಂದು ಚಲನಚಿತ್ರ ಪೋಷಕ ಕಲಾವಿದರ ಸಂಘದ ಸದಸ್ಯರಾದ ಬೆಳಗಾವಿಯ ಎನ್. ನಟರಾಜ್ ಹಂಜಾಗಿಮಠ ಒತ್ತಾಯಿಸಿದರು.

ಚಿತ್ರಮಂದಿರಗಳಿಲ್ಲ ಕೊರತೆ

ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಕಲಬುರ್ಗಿ ಸೇರಿದಂತೆ ವಿವಿಧ ನಗರಗಳಲ್ಲಿ ಚಲನಚಿತ್ರೋತ್ಸವಕ್ಕೆ ಬೇಕಾದ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳ ಕೊರತೆ ಇಲ್ಲ. ಆದರೆ, ಆಯೋಜಕರು ಇಚ್ಛಾಶಕ್ತಿ ತೋರಿಸುತ್ತಿಲ್ಲ.

‘ಚಲನಚಿತ್ರೋತ್ಸವದ ಸಿನಿಮಾಗಳ ಪ್ರದರ್ಶನಕ್ಕಾಗಿ, ಮಲ್ಟಿಪ್ಲೆಕ್ಸ್‌ ಮತ್ತು ಚಿತ್ರಮಂದಿರಗಳ ಮಾಲೀಕರೊಂದಿಗೆಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿದರೆ, ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಗುತ್ತದೆ’ ಎಂದು ಹೆಸರು ಹೇಳಲು ಇಚ್ಛಿಸದ ಹುಬ್ಬಳ್ಳಿಯ ಮಲ್ಟಿಪ್ಲೆಕ್ಸ್‌ ಮತ್ತು ಚಿತ್ರಮಂದಿರಗಳ ವ್ಯವಸ್ಥಾಪಕರು ಹೇಳಿದರು.

‘ರಾಜಧಾನಿಯಾಚೆಗೂ ಸಿನಿಮಾ ವೀಕ್ಷಣೆಗೆ ಅವಕಾಶ’

‘ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಇಲ್ಲಿ ಬಿಟ್ಟು ಬೇರೆ ಕಡೆ ಆಯೋಜಿಸಲು ಅವಕಾಶವಿಲ್ಲ. ಅದಕ್ಕಾಗಿಯೇ, ಈ ಬಾರಿ ಹೈಬ್ರೀಡ್ ಮಾದರಿಯಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಹೊರಗಿನವರು ತಮ್ಮ ಸ್ಮಾರ್ಟ್‌ಫೋನ್‌ನಿಂದ ಕುಳಿತಲ್ಲೇ ಸಿನಿಮಾ ವೀಕ್ಷಿಸಲು ಅವಕಾಶವಿದೆ’ ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಹೇಳಿದರು.

‘ಅದಕ್ಕಾಗಿ ಆ್ಯಪ್‌ ಸಿದ್ಧಪಡಿಸಲಾಗಿದೆ. ವೀಕ್ಷಕರು ಅದರಲ್ಲಿ ನೋಂದಣಿ ಮಾಡಿಕೊಂಡು, ನಿಗದಿತ ಶುಲ್ಕವನ್ನು ಪಾವತಿಸಿ ದಿನಕ್ಕೆ ನಾಲ್ಕೈದು ಸಿನಿಮಾಗಳನ್ನು ವೀಕ್ಷಿಸಬಹುದು. ಇಲ್ಲಿ ಪ್ರದರ್ಶನಗೊಂಡ ಚಿತ್ರಗಳನ್ನು ಮುಂದೆ ಉತ್ತರ ಕರ್ನಾಟಕ ಸೇರಿದಂತೆ, ಇತರ ಭಾಗಗಳಲ್ಲಿ ತೋರಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಅಕಾಡೆಮಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ, ಬೆಳ್ಳಿ ಹೆಜ್ಜೆ, ಸಿನಿಮಾ ಉತ್ಸವ, ಕಾರ್ಯಾಗಾರದಂತಹ ಕಾರ್ಯಕ್ರಮಗಳನ್ನು ಧಾರವಾಡ, ಬೆಳಗಾವಿ, ಮೈಸೂರು, ಮಂಗಳೂರು, ಕಲಬುರಗಿ ಸೇರಿದಂತೆ ವಿವಿಧ ನಗರಗಳಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT