ಅಣ್ಣಿಗೇರಿ: ಪಟ್ಟಣದ ಶ್ರೀಮತಿ ನಿಂಗಮ್ಮ ಎಸ್. ಹೂಗಾರ ಸಮೂಹ ವಿದ್ಯಾಲಯದ ಪ್ರಾಚಾರ್ಯ, ಸಾಹಿತಿ ಪ್ರೊ ಎಸ್.ಎಸ್.ಹರ್ಲಾಪೂರ ಅವರಿಗೆ ರನ್ನಕವಿ ಕಲಾ ಸಾಹಿತ್ಯ ಬಳಗ ನೀಡುವ ಕವಿಚಕ್ರವರ್ತಿ ರನ್ನ ಪ್ರಶಸ್ತಿಯನ್ನು ಭಾನುವಾರ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಹರ್ಲಾಪೂರ, ‘ನಾವು ಮಾಡುವ ಕಾಯಕದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಮುಂದೊಂದು ದಿನ ಒಳ್ಳೆಯ ಸಮಯ ಬಂದೇ ಬರುತ್ತೆ ಎನ್ನುವದಕ್ಕೆ ಈ ಪ್ರಶಸ್ತಿಯೇ ಸಾಕ್ಷಿಯಾಗಿದೆ. ನಾವು ಯಾವ ಕೆಲಸವನ್ನು ಮಾಡುತ್ತವೆಯೋ ಆ ಕೆಲಸ ನಮ್ಮ ಮನಸ್ಸಿಗೆ ತೃಪ್ತಿ ತರುವಂತಾಗಿರಬೇಕು’ ಎಂದರು.
‘ಆದಿಕವಿ ಪಂಪ ಜನಿಸಿದ ಮನೆಯಲ್ಲಿಯೇ ನನಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ಪಟ್ಟಣದಲ್ಲಿ ಪಂಪಸ್ಮಾರಕ ಭವನ ನಿರ್ಮಾಣಕ್ಕಾಗಿ ಹೋರಾಡಿದ ಸಾಹಿತಿ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಈ ಸಂದರ್ಭದಲ್ಲಿ ನಾವೆಲ್ಲರೂ ಸ್ಮರಣೆ ಮಾಡುವದು ಅತ್ಯಗತ್ಯ’ ಎಂದರು.
ಪಂಪಸ್ಮಾರಕ ಭವನದಲ್ಲಿ ಆದಿಕವಿ ಪಂಪನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ, ಪಟ್ಟಣದ ಎರಡು ಬದಿಯಲ್ಲೂ ಆದಿಕವಿ ಪಂಪನ ಜನ್ಮಸ್ಥಳ ಎಂಬ ಮಹಾದ್ವಾರವನ್ನು ಅಳವಡಿಸಲು ಸ್ಥಳೀಯ ಆಡಳಿತ ಮುಂದಾಗಬೇಕು ಎಂದರು.
ದಕ್ಷಿಣ ಭಾರತ ಜೈನ್ ಸಮಾಜದ ಸದಸ್ಯ ಸುರೇಂದ್ರ ನಾವಳ್ಳಿ ಮಾತನಾಡಿ, ಮುಂದಿನ ಒಂದು ತಿಂಗಳೊಳಗೆ ಆದಿಕವಿ ಪಂಪನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಭರವಸೆ ನೀಡಿದರು.
ರನ್ನಕವಿ ಕಲಾ ಸಾಹಿತ್ಯ ಬಳಗದ ಅಧ್ಯಕ್ಷ ದೇವರಾಜ ನಾವಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅನ್ವರಭಾಷಾ ಹುಬ್ಬಳ್ಳಿ, ಎನ್.ಎಸ್.ಮೇಲ್ಮರಿ, ರವಿರಾಜ ವೇರ್ಣೆಕರ, ಮಂಜುನಾಥ ತಿಗಡಿ, ಲಲಿತಾ ಸಾಲಿಮಠ, ಪದ್ಮರಾಜ ಅಂತಣ್ಣವರ, ಪಾಂಡುರಂಗ ಓಸೇಕರ, ಐ.ಬಿ.ಅಕ್ಕಿ ಉಪಸ್ಥಿತರಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.