ಮಂಗಳವಾರ, ಮೇ 18, 2021
30 °C
ವಿಜ್ಞಾನೇಶ್ವರ ಅಧ್ಯಯನ ಪೀಠಕ್ಕೆ ವರ್ಚುವಲ್‌ ಮೂಲಕ ಬೊಮ್ಮಾಯಿ ಚಾಲನೆ

ಗ್ರಂಥಾಲಯ ಸ್ಥಾಪನೆಗೆ ಮೊದಲ ಆದ್ಯತೆ: ಡಾ. ಶಿವರಾಜ ವಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಜ್ಞಾನೇಶ್ವರ ಅಧ್ಯಯನ ಪೀಠದಲ್ಲಿ ಮೊದಲು ಗ್ರಂಥಾಲಯ ಆರಂಭಿಸಲು ಆದ್ಯತೆ ನೀಡಲಾಗುವುದು ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ ಪೀಠದ ಪ್ರಾಧ್ಯಾಪಕ ಡಾ. ಶಿವರಾಜ ವಿ. ಪಾಟೀಲ ಹೇಳಿದರು.

ವರ್ಚುವಲ್‌ ಮೂಲಕ ಶುಕ್ರವಾರ ನಡೆದ ಪೀಠದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಭಾರತದ ಕಾನೂನಿಗೆ ಸಂಬಂಧಿಸಿದ ಕೃತಿಗಳ ಬಗ್ಗೆ ಆಮೂಲಾಗ್ರವಾಗಿ ಅಧ್ಯಯನವಾಗಬೇಕಿದೆ. ಇದಕ್ಕೆ ಸಂಬಂಧಿಸಿದ ಗ್ರಂಥಗಳು ಗ್ರಂಥಾಲಯದಲ್ಲಿ ಸಿಗುವಂತಾಗಬೇಕು. ಭಾರತೀಯ ಕಾನೂನು ತತ್ವಶಾಸ್ತ್ರದ ಕ್ಷೇತ್ರದಲ್ಲಿ ಹೇರಳವಾಗಿ ಸಂಶೋಧನೆಗಳು ನಡೆಯಬೇಕು. ಆದ್ದರಿಂದ ಗ್ರಂಥಾಲಯ ಆರಂಭಕ್ಕೆ ಪ್ರಾಶಸ್ತ್ಯ ಒದಗಿಸಲಾಗುವುದು’ ಎಂದರು.

‘ಗ್ರಂಥಾಲಯ ಆರಂಭವಾದರೆ ವಿದ್ವಾಂಸರಿಗೆ ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿಷಯ ಪರಿಣಿತರ ಜ್ಞಾನದ ಭಂಡಾರವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಚಿಂತನ–ಮಂಥನ ಕಾರ್ಯಕ್ರಮಗಳನ್ನು ನಡೆಸಲಾಗುವುದು. ನ್ಯಾಯಶಾಸ್ತ್ರದಲ್ಲಿ ಶರಣ ಸಾಹಿತ್ಯ, ದಾಸ ಸಾಹಿತ್ಯ ಅತ್ಯಂತ ಪ್ರಮುಖವಾಗಿದೆ’ ಎಂದರು. ಪೀಠ ಸ್ಥಾಪಿಸುವಲ್ಲಿ ಕಾನೂನು ವಿಶ್ವವಿದ್ಯಾಲಯ ರಚನಾತ್ಮಕ ಹೆಜ್ಜೆಯಿಟ್ಟಿದ್ದು, ಇದರಿಂದ ಜನರಿಗೆ ಹೆಚ್ಚು ಪ್ರಯೋಜನವಾಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ ‘ಅಧ್ಯಯನ ಪೀಠದಲ್ಲಿ ಬೌದ್ಧಿಕ ಚಟುವಟಿಕೆಗಳು ನಡೆಯಬೇಕು. ಪೀಠದಿಂದ ಕಾನೂನು, ಸಂಸ್ಕೃತಿ ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿಶ್ವಗುರು ಬಸವಣ್ಣ ಮತ್ತು ಪ್ರಾಚೀನ ಹಿಂದೂ ನ್ಯಾಯಶಾಸ್ತ್ರಜ್ಞ ವಿಜ್ಞಾನೇಶ್ವರ ಅವರ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ನಿರಂತರ ಅಧ್ಯಯನದ ಮೂಲಕ ಭಾರತೀಯ ಕಾನೂನು ತತ್ವಶಾಸ್ತ್ರದ ಅಭಿವೃದ್ಧಿಗೆ ಪೀಠ ವೇದಿಕೆಯಾಗಲಿ’ ಎಂದು ಆಶಿಸಿದರು. 

ಇದೇ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರು ‘ಕನ್ನಡ ಕಲಿ’ ಹಾಗೂ ನ್ಯಾಯ ಚಿಂತನ 1 ಹಾಗೂ 2 ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ ‘ಕನ್ನಡದಲ್ಲಿ ಗುಣಮಟ್ಟದ ಸಾಹಿತ್ಯವನ್ನು ಹೊರತರುವಲ್ಲಿ ವಿಶ್ವವಿದ್ಯಾಲಯ ಮಾಡಿದ ಪ್ರಯತ್ನ ಶ್ಲಾಘನೀಯ. ಕಾನೂನಿನ ಪುಸ್ತಕಗಳು ಕನ್ನಡದಲ್ಲಿ ಬಂದರೆ ಶ್ರೀಮಂತ ಕನ್ನಡ ಭಾಷೆ ಹಾಗೂ ಸಂಸ್ಕೃತಿ ರಕ್ಷಿಸಲು ಸಾಧ್ಯವಾಗುತ್ತದೆ’ ಎಂದರು.

ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಈಶ್ವರ ಭಟ್‌, ಕುಲಸಚಿವ ಎನ್‌. ಮೊಹಮ್ಮದ್ ಜುಬೈರ್‌, ಕುಲಸಚಿವ (ಮೌಲ್ಯಮಾಪನ) ಪ್ರೊ. ಜಿ. ಬಿ. ಪಾಟೀಲ, ಸಹಾಯಕ ಪ್ರಾಧ್ಯಾಪಕ ಡಾ. ರಂಗಸ್ವಾಮಿ ಡಿ., ಪ್ರೊ. ರತ್ನಾ ಆರ್. ಭರಮಗೌಡರ್, ಪ್ರೊ.ಸಿ.ಎಸ್. ಪಾಟೀಲ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು