ಬುಧವಾರ, ಏಪ್ರಿಲ್ 1, 2020
19 °C
ಹೂ ಮಳೆಗೆರೆದು, ಉತ್ತುತ್ತಿ, ಲಿಂಬೆಹಣ್ಣು ಎಸೆದು ಭಕ್ತಿ ಸಮರ್ಪಿಸಿದ ಭಕ್ತಾದಿಗಳು, ಮಾರ್ದನಿಸಿದ ಜೈ.. ಜೈ... ಸಿದ್ಧಾರೂಢ

ಸಿದ್ಧಾರೂಢರ ಸನ್ನಿಧಿಯಲ್ಲಿ ಜನಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನೇಸರ ಪಡುವಣದಂಚಿಗೆ ಸರಿಯಲು ಸಜ್ಜಾಗುತ್ತಿದ್ದಾಗಲೇ ಆಗಸದಲ್ಲಿ ಮೂಡಿದ ಕೆಂಬಣ್ಣದ ಹೊಳಪಿನಲ್ಲಿ ಕಂಗೊಳಿಸಿದ ಉತ್ತರ ಕರ್ನಾಟಕದ ಜನರ ಆರಾಧ್ಯ ದೈವ ಸಿದ್ಧಾರೂಢನ ಸನ್ನಿಧಿಯಲ್ಲಿ ‘ಜೈ.. ಜೈ... ಸಿದ್ಧಾರೂಢ..’ ಎನ್ನುವ ಘೋಷಣೆಗಳು ಮೊಳಗುತ್ತಿದ್ದವು.

ಸಿದ್ಧಾರೂಢ ದೇವಸ್ಥಾನದ ಸುತ್ತಲೂ ಎಲ್ಲಿ ನೋಡಿದರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕಣ್ಣು ಹಾಯಿಸಿದಷ್ಟೂ ಜನವೊ ಜನ. ಸಿದ್ಧಾರೂಢ ಮತ್ತು ಗುರುನಾಥರೂಢರ ಮೂರ್ತಿಗಳ ದರ್ಶನ ಪಡೆಯಲು ಭಕ್ತರ ದಂಡು ನೆರೆದಿತ್ತು. ಶನಿವಾರ ಇಳಿ ಸಂಜೆ ನಡೆದ ಸಿದ್ಧಾರೂಢಮಠದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಉತ್ತುತ್ತಿ, ಲಿಂಬೆಹಣ್ಣು, ಮೋಸಂಬಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಮಹಾಶಿವರಾತ್ರಿ ಮತ್ತು ಜಾತ್ರೆಯ ಹಿನ್ನೆಲೆಯಲ್ಲಿ ಮುಖ್ಯದ್ವಾರ ಮತ್ತು ಮಠವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದಿಂದ ಆರಂಭವಾದ ರಥೋತ್ಸವ ಮುಖ್ಯ ಮಹಾದ್ವಾರದ ತನಕ ನಡೆಯಿತು. ರಥ ಮುಂದೆ, ಮುಂದೆ ಸಾಗಿದಂತೆಲ್ಲ ಭಕ್ತರ ಹರ್ಷೋದ್ಗಾರ, ಭಕ್ತಿ, ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ಮಠದ ಸನಿಹದಲ್ಲಿರುವ ಮನೆಗಳ ಚಾವಣಿ ಮೇಲೂ ನಿಂತಿದ್ದ ಭಕ್ತರು ವಿವಿಧ ಹೂಗಳಿಂದ ಸುಂದರವಾಗಿ ಅಲಂಕರಿಸಲಾಗಿದ್ದ ರಥವನ್ನು ತದೇಕಚಿತ್ತದಿಂದ ನೋಡುವುದು ಸಾಮಾನ್ಯವಾಗಿತ್ತು. ತೇರು ಮುಖ್ಯದ್ವಾರಕ್ಕೆ ಬಂದು ಮರಳಿ ಹೋಗುವಾಗ ತೇರಿಗೆ ಮೇಲಿನಿಂದ ಹೂ ಮಳೆಗೆರೆದಿದ್ದರಿಂದ ಭಕ್ತರ ಸಂಭ್ರಮ ಇಮ್ಮಡಿಗೊಂಡಿತು. ಡೊಳ್ಳು ಕುಣಿತ, ಸಿದ್ಧಾರೂಢರ ಪಲ್ಲಕ್ಕಿ ಮೆರವಣಿಗೆ, ವಿಶೇಷ ಪೂಜೆ ಮತ್ತು ಅಲಂಕಾರಗಳು ಆಕರ್ಷಣೆಯಾಗಿದ್ದವು.

ರಥೋತ್ಸವದ ಸಡಗರ, ಜನಜಾತ್ರೆ, ಭಕ್ತಿ ಸಮರ್ಪಣೆ, ಸೆಲ್ಫಿ ತೆಗೆದುಕೊಳ್ಳುವ ಸಂಭ್ರಮ ಒಂದಡೆಯಾದರೆ, ಮಠದ ಆವರಣದಲ್ಲಿ ಘಮಘಮಿಸುತ್ತಿದ್ದ ಗಿರ್ಮಿಟ್, ಮಿರ್ಚಿ ಸೇರಿದಂತೆ ವಿವಿಧ ತಿನಿಸುಗಳು ಎಲ್ಲರನ್ನೂ ಆಕರ್ಷಿಸುತ್ತಿದ್ದವು. ಇನ್ನೊಂದೆಡೆ ಆಟಿಕೆ ಸಾಮಾಗ್ರಿಗಳು ಮಕ್ಕಳು ಹಾಗೂ ಹಿರಿಯರ ಗಮನ ಸೆಳೆದವು.

ಆಟೊ ಚಾಲಕರ ಸಂಘದವರು ಪ್ರಯಾಣಿಕರಿಗೆ ಮಠದ ತನಕ ಉಚಿತ ಸೇವೆ ಕಲ್ಪಿಸಿದ್ದರಿಂದ ಭಕ್ತರಿಗೂ ಅನುಕೂಲವಾಯಿತು. ಸಿದ್ಧಾರೂಢ ಮತ್ತು ಗುರುನಾಥರೂಢರ ದರ್ಶನ ಪಡೆಯುವ ಸಲುವಾಗಿ ಸಾಕಷ್ಟು ಜನ ಸರತಿ ಸಾಲಿನಲ್ಲಿ ನಿಂತರೂ ಕೆಲವರಿಗೆ ದರ್ಶನ ಸಾಧ್ಯವಾಗಲಿಲ್ಲ. ಹೀಗಾಗಿ ಅನೇಕ ಭಕ್ತರು ದೂರದಿಂದಲೇ ಕೈ ಮುಗಿದು ಭಕ್ತಿ ಸಮರ್ಪಿಸಿದರು. ಮಠದ ದಾಸೋಹ ಕೊಠಡಿಯ ಸನಿಹದ ವೇದಿಕೆಯಲ್ಲಿ ಸದ್ಗುರು ಸಿದ್ಧಾರೂಢಮಠದ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ಭಕ್ತಿಗೀತೆಗಳ ರಸಮಂಜರಿ ಗಾಯನ ನಡೆಸಿಕೊಟ್ಟರು.‌

ಸಿದ್ಧಾರೂಢಜ್ಜನ ದರ್ಶನ ಪಡೆಯಲು ವಿವಿಧೆಡೆಯಿಂದ ಟ್ರಾಕ್ಟರ್‌, ಜಕ್ಕಡಿಯಲ್ಲಿ ಬಂದಿದ್ದ ಭಕ್ತರು ರಸಮಂಜರಿಯ ಗಾನ ಮೋಡಿಯಲ್ಲಿ ಮಿಂದೆದ್ದೆರು. ವಿವಿಧ ಸಂಘಟನೆಗಳ ಸದಸ್ಯರು ಉಚಿತವಾಗಿ ನೀರು, ಪಾನಕ ಹಾಗೂ ಮಜ್ಜಿಗೆ ಸೇವೆಯ ಸೌಲಭ್ಯ ಒದಗಿಸಿದರು. ಹಗಲಿರುಳು ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.‌‌‌ ಹೊತ್ತು ಕಳೆದಂತೆಲ್ಲ ಮಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರು ಇಡಬೇಕು ಎನ್ನುವ ಸಂದೇಶಗಳಿದ್ದ ಭಿತ್ತಿಚಿತ್ರಗಳೂ ಕಂಡು ಬಂದವು.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು