ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ ಉತ್ಪನ್ನಗಳ ಬಹಿಷ್ಕಾರಕ್ಕೆ ಒತ್ತಾಯ

ಅಂಜುಮನ್‌ ಸಮಿತಿ, ಪೌರ ಕಾರ್ಮಿಕರ ಸಂಘದಿಂದ ಪ್ರತಿಭಟನೆ
Last Updated 2 ನವೆಂಬರ್ 2020, 14:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೊಹಮ್ಮದ್‌ ಪೈಗಂಬರ್‌ ಅವರನ್ನು ಅವಹೇಳನ ಮಾಡಿದ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮಾಕ್ರೋನ್‌ ಬಹಿರಂಗ ಕ್ಷಮೆಯಾಚಿಸಬೇಕು, ಭಾರತ ಆ ದೇಶದ ಉತ್ಪನ್ನಗಳ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ಹುಬ್ಬಳ್ಳಿ ಅಂಜುಮನ್‌ ಎ ಇಸ್ಲಾಂ ಸಮಿತಿ, ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘ ಆಗ್ರಹಿಸಿದೆ.

ಇದಕ್ಕಾಗಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಎರಡೂ ಸಂಘಟನೆಗಳ ಪದಾಧಿಕಾರಿಗಳು ಪ್ರಧಾನಿ ಮತ್ತು ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಮಿನಿವಿಧಾನ ಸೌಧದಲ್ಲಿ ಹುಬ್ಬಳ್ಳಿ ತಹಶೀಲ್ದಾರ್‌ ಅವರಿಗೆ ಸಲ್ಲಿಸಿದರು.

ಪೈಗಂಬರ್‌ ಅವರ ಬಗ್ಗೆ ಫ್ರಾನ್ಸ್‌ ನಿಯತಕಾಲಿಕೆ ಚಾರ್ಲಿ ಹೆಬ್ಡೋದಲ್ಲಿ ಪ್ರಕಟವಾದ ವ್ಯಂಗಚಿತ್ರಗಳು ಹಾಗೂ ಅದಕ್ಕೆ ಪ್ರತಿಯಾಗಿ ನಡೆದ ಹಿಂಸಾಚಾರಗಳು ವಿಶ್ವವ್ಯಾಪಿ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿವೆ. ಆದ್ದರಿಂದ ಈ ಕುರಿತು ಕ್ರಮ ಕೈಗೊಳ್ಳಬೇಕು. ಯುರೋಪಿಯನ್‌ ರಾಷ್ಟ್ರಗಳಲ್ಲಿ ನಡೆಯುವ ಇಂಥ ಘಟನೆಗಳ ಬಗ್ಗೆ ಗಟ್ಟಿ ಧ್ವನಿ ಎತ್ತಬೇಕು ಎಂದು ಅಂಜುಮನ್‌ ಸಮಿತಿ ಪದಾಧಿಕಾರಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಶಾಂತಿ, ಭಾವೈಕ್ಯ, ಸೌಹಾರ್ದತೆ, ಸಮಾನತೆ ಮತ್ತು ಬದುಕುವ ಮಾರ್ಗ ಬೋಧಿಸಿದ ಮಹಮ್ಮದ್‌ ಪೈಗಂಬರ್‌ ಜಗತ್ತಿಗೆ ಮಾನವೀಯ ಮೌಲ್ಯಗಳ ಸಂದೇಶಗಳನ್ನು ಸಾರಿದ್ದಾರೆ. ವಿಶ್ವದಲ್ಲಿಯೇ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಇದನ್ನು ಸಹಿಸಿಕೊಳ್ಳದ ಕೆಲ ದೇಶಗಳು ಆಧಾರ ರಹಿತ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಶಾಂತಿ ಭಂಗ ಉಂಟು ಮಾಡುತ್ತಿದ್ದಾರೆ. ನಿರ್ದಿಷ್ಟವಾಗಿ ಮುಸ್ಲಿಂ ಸಮಾಜವನ್ನು ಗುರಿಯಾಗಿರಿಸಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಫ್ರಾನ್ಸ್‌ ಅಧ್ಯಕ್ಷರು ಕ್ಷಮೆಯಾಚಿಸಬೇಕು ಎಂದು ಪೌರ ಕಾರ್ಮಿಕರ ಸಂಘ ಆಗ್ರಹಿಸಿದೆ.‌

ಅಂಜುಮನ್‌ ಸಮಿತಿಯ ಪ್ರಮುಖರಾದ ಅಲ್ತಾಫ್‌ ನವಾಜ್‌ ಕಿತ್ತೂರ, ಅಲ್ತಾಫ್‌ ಹಳ್ಳೂರ, ಎಂ.ಸಿ. ಸವಣೂರ, ಬಶೀರ ಹಳ್ಳೂರ, ಸಲೀಮ್‌ ಬಿಜಾಪುರಿ, ಅಸ್ತಫಿಕ್‌ ಬಿಜಾಪುರಿ, ಪೌರ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಎಂ. ಗುಂಟ್ರಾಳ, ಬಾಬಾಜಾನ್‌ ಮುಧೋಳ, ಎಂ.ಎಂ. ಬ್ಯಾಹಟ್ಟಿ, ಎಂ.ಎ. ಮೊರಬ್‌, ಇಮ್ತಿಯಾಜ್‌ ಬಿಳಿಪಸಾರ, ಮಂಜುನಾಥ ನಾಗನೂರ, ಗಾಳೆಪ್ಪ ದ್ವಾಸಲಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT