ಮಂಗಳವಾರ, ನವೆಂಬರ್ 24, 2020
22 °C
₹56 ಲಕ್ಷ ಜಪ್ತಿ

ಜೂಜಾಟ: ಕಾಂಗ್ರೆಸ್‌ , ಬಿಜೆಪಿ ಮುಖಂಡರು ಸೇರಿದಂತೆ 126 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಹೊರವಲಯದ ರಮ್ಯಾ ರೆಸಿಡೆನ್ಸಿ ಮತ್ತು ಪ್ರೀತಿ ರೆಸಿಡೆನ್ಸಿಯಲ್ಲಿ ಜೂಜಾಟದಲ್ಲಿ ತೊಡಗಿದ್ದ 126 ಜನರನ್ನು ಪೊಲೀಸರು ಬಂಧಿಸಿ, ಒಟ್ಟು ₹56 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಶನಿವಾರ ತಡರಾತ್ರಿ ದಾಳಿ ನಡೆಸಿದ ಪೊಲೀಸರು, ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್ ತಮ
ಟಗಾರ, ಬಿಜೆಪಿಯ ತವನಪ್ಪ ಅಷ್ಟಗಿ, ಹೋಟೆಲ್‌ ಉದ್ಯಮಿ ಮಹೇಶ ಶೆಟ್ಟಿ, ಕೆಸಿನೋ ಕಿಂಗ್ ಸಮುಂದರ ಸಿಂಗ್ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.

‘ದಾಳಿ ನಡೆಸಿದ ವೇಳೆ 40 ಕಾರು, 65 ಮೊಬೈಲ್ ಸೇರಿದಂತೆ ಜೂಜಾಟಕ್ಕೆ ಬಳಸುತ್ತಿದ್ದ ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ್ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್‌ ತಮಟಗಾರ, ‘ನಾನು, ತವನಪ್ಪ ಅಷ್ಟಗಿ ಹಾಗೂ ದೀಪಕ ಚಿಂಚೋರೆ ಅವರು ರಮ್ಯಾ ರೆಸಿಡೆನ್ಸಿಗೆ ಹೋಗಿದ್ದು ನಿಜ. ದೀಪಾವಳಿ ಹಬ್ಬದ ಹಿನ್ನೆಲೆ ಪೂಜೆಗೆ ಹೋಟೆಲ್‌ ಮಾಲೀಕರು ಆಹ್ವಾನಿಸಿದ್ದರು. ಪೂಜೆ
ಮುಗಿಸಿಕೊಂಡು, ಎಲ್ಲರೂ ಜತೆಯಲ್ಲಿಯೇ ಊಟ ಮಾಡಿದ್ದೇವೆ. ನಂತರ ಆದ ಘಟನೆಗೂ ನಮಗೂ ಸಂಬಂಧವಿಲ್ಲ. ಒಂದು ವೇಳೆ ಈ ಪ್ರಕರಣದಲ್ಲಿ ನಮ್ಮ ಹೆಸರನ್ನು ಸೇರಿಸಿದರೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ’ ಎಂದರು.

ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಪ್ರತಿಕ್ರಿಯಿಸಿ, ‘ರಮ್ಯಾ ರೆಸಿಡೆನ್ಸಿ ಲೈಸೆನ್ಸ್ ಇರುವ ಕ್ಲಬ್ ಆಗಿದ್ದು, ನಾವು ಅಧಿಕೃತ ಕ್ಲಬ್‌ನಲ್ಲಿ ಆಟವಾಡುತ್ತಿದ್ದೆವು. ಇದರಲ್ಲಿ ಪೊಲೀಸರ ಸಂಚು ಇದೆ’ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಐಜಿಪಿ ರಾಘವೇಂದ್ರ ಸುಹಾಸ್, ‘ರಮ್ಯಾ ರೆಸಿಡೆನ್ಸಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಕುರಿತು ದಾಖಲೆಗಳಿವೆ. ಏನೇ ಇದ್ದರೂ ನ್ಯಾಯಾಲಯದಲ್ಲಿ ಹೇಳಲಿ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ನೇತೃತ್ವದಲ್ಲಿ ದಾಳಿ ನಡೆದಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.