ಬುಧವಾರ, ಅಕ್ಟೋಬರ್ 16, 2019
21 °C
ಜಿಲ್ಲೆಯ ಬೆಣಚಿ, ಅಂಚಟಗೇರಿ, ದುಮ್ಮವಾಡ, ಯಲಿವಾಳ ಗ್ರಾಮ ಪಂಚಾಯ್ತಿಗಳಿಗೂ ಪ್ರಶಸ್ತಿ

ಧಾರವಾಡ: ಮೊರಬಕ್ಕೆ ಸತತ ಎರಡನೇ ಬಾರಿ ‘ಗಾಂಧಿ ಗ್ರಾಮ’

Published:
Updated:
Prajavani

ಮಹಿಳಾ ವಿಶೇಷ ಗ್ರಾಮ ಸಭೆ, ಮಹಿಳೆಯರಿಗೆ ಉದ್ಯೋಗ ತರಬೇತಿ, ಶೌಚಾಲಯ ನಿರ್ಮಾಣ, ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಉತ್ತಮ ಕೆಲಸ ಮಾಡಿದ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮ ಪಂಚಾಯ್ತಿಗೆ ಸತತ ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.

ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿರುವ 175 ಗಾಂಧಿ ಗ್ರಾಮ ಪುರಸ್ಕಾರದಲ್ಲಿ ಮೊರಬ ಹೆಸರು ಎರಡನೇ ಬಾರಿ ಪ್ರಕಟಗೊಂಡಿರುವುದು ಪಂಚಾಯ್ತಿಯ ಚುನಾಯಿತರು, ಅಧಿಕಾರಿಗಳು ಮತ್ತು ಗ್ರಾಮಸ್ಥರಲ್ಲಿ ಹರ್ಷ ಮನೆ ಮಾಡಿದೆ. ಇದರೊಂದಿಗೆ ಜಿಲ್ಲೆಯ ಧಾರವಾಡ ತಾಲ್ಲೂಕಿನ ಬೆಣಚಿ, ಹುಬ್ಬಳ್ಳಿಯ ಅಂಚಟಗೇರಿ, ಕಲಘಟಗಿಯ ದುಮ್ಮವಾಡ, ಕುಂದಗೋಳದ ಯಲಿವಾಳ ಗ್ರಾಮ ಪಂಚಾಯ್ತಿಗಳೂ ಈ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಈ ಗ್ರಾಮಗಳಿಗೆ ತಲಾ ₹5ಲಕ್ಷ ವಿಶೇಷ ಅನುದಾನ ಸಿಗಲಿದೆ.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ರಾಜ್ಯದ 175 ತಾಲ್ಲೂಕುಗಳಿಂದ ಒಟ್ಟು 5925 ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರಶಸ್ತಿಗಾಗಿ 150 ಅಂಕಗಳ ಪ್ರಶ್ನಾವಳಿಗಳಿಗೆ ಉತ್ತರ ನೀಡಲು ಪಂಚತಂತ್ರ ತಂತ್ರಾಂಶದ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಈ ಗ್ರಾಮ ಪಂಚಾಯ್ತಿಗಳಲ್ಲಿ ಹೆಚ್ಚು ಅಂಕಗಳಿಸಿರುವ ತಾಲ್ಲೂಕಿಗೆ ಐದು ಗ್ರಾಮ ಪಂಚಾಯ್ತಿಗಳನ್ನು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಕಳುಹಿಸಲಾಗಿತ್ತು.

ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದ ತಂಡವು ಮಾರ್ಗಸೂಚಿ ಅನುಸಾರ ಸ್ಥಳ ಪರಿಶೀಲನೆ ನಡೆಸಿ, ಸಿಇಒ ನೇತೃತ್ವದ ಸಮಿತಿಗೆ ವರದಿ ಸಲ್ಲಿಸಿತ್ತು. ಇದನ್ನು ಆಧರಿಸಿ ತಾಲ್ಲೂಕಿಗೆ ಒಂದು ಗ್ರಾಮ ಪಂಚಾಯ್ತಿಯನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅಂತಿಮವಾಗಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಘೋಷಣೆಯಾದ ಗ್ರಾಮ ಪಂಚಾಯ್ತಿಗಳಿಗೆ ಅ.2ರಂದು ಬೆಂಗಳೂರಿನ ವಿಧಾನಸೌಧದಲ್ಲಿರುವ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅದರಂತೆಯೇ ಜಿಲ್ಲೆಯಿಂದ ಆಯ್ಕೆಯಾದ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಮರು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

‘ಸದಾ ಹೊಸತನ್ನು ಅಳವಡಿಸಿಕೊಳ್ಳುತ್ತಿರುವ ಮೊರಬ ಗ್ರಾಮ ಪಂಚಾಯ್ತಿ ಈ ಬಾರಿ ಮಹಿಳೆಯರಿಗೆ ವಿಶೇಷವಾಗಿ ಒತ್ತು ನೀಡಿತ್ತು. 823 ಮಹಿಳೆಯರು ಸ್ವಂತ ಉದ್ಯೋಗಕ್ಕಾಗಿ ತರಬೇತಿ ಪಡೆಯಲು ದಿಶಾ ಮತ್ತು ಸಿಡಾಕ್‌ ಸೇರಿದಂತೆ ವಿವಿಧ ಯೋಜನೆ ಅಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರಥಮ ಹಂತವಾಗಿ 150 ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಜತೆಗೆ ಉದ್ಯೋಗ ಕೈಗೊಳ್ಳಲು ಉತ್ತೇಜಿಸಲಾಗುತ್ತಿದೆ’ ಎಂದು ಗ್ರಾಮ ಪಂಚಾಯ್ತಿ ಪಿಡಿಒ ನಾಗರಾಜ ಬಿದರಳ್ಳಿ ತಿಳಿಸಿದರು.

‘ಮೂಲಸೌಕರ್ಯಗಳ ಆಸ್ತಿಗಳ ಸೃಜನೆ ಶೇ 125ರಷ್ಟು ಅನುಷ್ಠಾನಗೊಳಿಸಲಾಗಿದೆ. ಶೇ 100ರಷ್ಟು ಶೌಚಾಲಯ ನಿರ್ಮಾಣಗೊಂಡಿದ್ದು, ಅವುಗಳನ್ನು ಅಂದಗೊಳಿಸಲು ಆದ್ಯತೆ ನೀಡಲಾಗಿದೆ. ಸಕಾಲ, ಸಿಸಿಟಿವಿ ಅಳವಡಿಕೆ, ನಗದು ರಹಿತ ವ್ಯವಹಾರ ಮಾಹಿತಿ ಕೇಂದ್ರ, ಸಾಮಾನ್ಯ ಗ್ರಾಮ ಸಭೆಗಳ ಜತೆ ಮಹಿಳೆ ಮತ್ತು ಮಕ್ಕಳ ಗ್ರಾಮ ಸಭಗಳ ಆಯೋಜನೆ, ಪ್ಲಾಸ್ಟಿಕ್ ಬಳಕೆ ನಿಷೇಧ ಜಾಗೃತಿ, ಸರ್ಕಾರಿ ಶಾಲೆ, ಕಾಲೇಜುಗಳಿಗೆ ಕಾಂಪೌಂಡ್ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಇತ್ಯಾದಿ ಯೋಜನೆಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಹೊಸ ತಾಲ್ಲೂಕುಗಳಿಂದ ಆಯ್ಕೆ ಇಲ್ಲ
ಜಿಲ್ಲೆಯಲ್ಲಿ ಹುಬ್ಬಳ್ಳಿ ಗ್ರಾಮೀಣ, ಅಳ್ನಾವರ ಮತ್ತು ಅಣ್ಣಿಗೇರಿ ಎಂಬ ಮೂರು ಹೊಸ ತಾಲ್ಲೂಕುಗಳು ರಚನೆಯಾದವು. ಆದರೆ ಈ ತಾಲ್ಲೂಕುಗಳಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಯಾವುದೇ ಗ್ರಾಮ ಪಂಚಾಯ್ತಿ ಆಯ್ಕೆಯಾಗಿಲ್ಲ. 

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ. ಸತೀಶ, ‘ಹುಬ್ಬಳ್ಳಿ ಗ್ರಾಮೀಣದ ಬಹುತೇಕ ಗ್ರಾಮಗಳು ಪಾಲಿಕೆ ವ್ಯಾಪ್ತಿಗೆ ಒಳಪಡುತ್ತವೆ. ಕಾರ್ಪೊರೇಟರ್‌ಗಳು ಈ ಪ್ರದೇಶವನ್ನು ಪ್ರತಿನಿಧಿಸುತ್ತಾರೆ. ಅದರಂತೆಯೇ ಅಳ್ನಾವರ ಮತ್ತು ಅಣ್ಣಿಗೇರಿ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳನ್ನು ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆಗೆ ಮರು ಪರಿಶೀಲಿಸಲು ಕೋರಲಾಗಿದೆ. ಸರ್ಕಾರದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ’ ಎಂದರು.

Post Comments (+)