ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳೇಶ್ವರರ ತೇರನ್ನೆಳೆದು ಧನ್ಯರಾದ ಭಕ್ತರು

Last Updated 11 ಫೆಬ್ರುವರಿ 2020, 14:47 IST
ಅಕ್ಷರ ಗಾತ್ರ

ಧಾರವಾಡ: ಭರತ ಹುಣ್ಣಿಮೆ ನಂತರ ನಡೆಯುವ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಗರಗ ಮಡಿವಾಳೇಶ್ವರರ ರಥೋಥ್ಸವವು ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ತಾಲ್ಲೂಕಿನ ಅತಿ ದೊಡ್ಡ ರಥೋತ್ಸವ ಎಂದೇ ಕರೆಯಲಾಗುವ ಗರಗ ಜಾತ್ರೆಗೆತಾಲ್ಲೂಕಿನ ಕೋಟೂರು, ತಡಕೋಡ, ಹಂಗರಕಿ, ಮರೇವಾಡ, ಪುಡಕಲಕಟ್ಟಿ, ಯಾದವಾಡ, ಉಪ್ಪಿನ ಬೆಟಗೇರಿ, ಹೆಬ್ಬಳ್ಳಿ, ಅಮ್ಮಿನಬಾವಿ ಸೇರಿದಂತೆ ಜಿಲ್ಲೆಯ ಅನೇಕ ಭಾಗಗಳಿಂದ ಭಕ್ತರು ಮಡಿವಾಳೇಶ್ವರರ ರಥವನ್ನು ಎಳೆದು ಧನ್ಯರಾದರು.

ಗರಗ ಕಲ್ಮಠದ ಚನ್ನಬಸವ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶಾಸಕ ಅಮೃತ ದೇಸಾಯಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀಮಠದ ಆವರಣದಿಂದ ಹೊರಟ ರಥ ಬಸವಣ್ಣನ ದೇವಸ್ಥಾನದವರೆಗೆ ಸಾಗಿ ನಂತರ ಮಠಕ್ಕೆ ತಲುಪಿತು.ಹರಹರ ಮಹಾದೇವ, ಜೈ ಮಡಿವಾಳೇಶ, ಜೈ ಚೆನ್ನಬಸವ ಎಂಬ ಭಕ್ತ ಸಮೂಹದ ಜಯಘೋಷಣೆ ಎಲ್ಲೆಡೆ ಮೊಳಗಿತು.

ರಥೋತ್ಸವಕ್ಕೆ ಕಳೆಗಟ್ಟಿದ ವೀರಗಾಸೆ, ನಂದಿಕೋಲು ಕುಣಿತ, ವಾದ್ಯಮೇಳ, ಹೆಜ್ಜೆಮೇಳ, ಜಗ್ಗಲಿಗೆ ಮೇಳ ಪ್ರದರ್ಶನ ಭಕ್ತರ ಸಡಗರವನ್ನು ಮತ್ತಷ್ಟು ಹೆಚ್ಚಿಸುವ ಜತೆಗೆ ಜಾನಪದ ಸಾಂಸ್ಕೃತಿಕ ಪರಂಪರೆಗೆ ಕನ್ನಡಿ ಹಿಡಿಯಿತು.ರಥ ಸಾಗುತ್ತಿದ್ದಂತೆಯೇ ಲಿಂಬೆಹಣ್ಣು, ಬಾಳೆಹಣ್ಣು, ಉತ್ತತ್ತಿಯನ್ನು ರಥಕ್ಕೆ ತೂರಿದ ಭಕ್ತರು ತಮ್ಮ ಮನೋಭಿಲಾಷೆಯನ್ನು ಈಡೇರಿಸುವಂತೆ ಪ್ರಾರ್ಥಿಸಿಕೊಂಡರು.ಯಾವುದೇ ಅವಘಡಗಳು ಸಂಭವಿಸದಂತೆ ಗರಗ ಠಾಣೆ ಪೊಲೀಸರು ಬಿಗಿಬಂದೋಬಸ್ತ್‌ ಕಲ್ಪಿಸಿದ್ದರು

ಜಾತ್ರಾ ಮಹೋತ್ಸವದ ಮುನ್ನಾ ದಿನವಾದ ಸೋಮವಾರವೇ ಅನೇಕ ಊರುಗಳಿಂದ ರೈತರು ಚಕ್ಕಡಿ, ಟ್ರಾಕ್ಟರ್‌ಗಳಲ್ಲಿ ಬಂದು ಜಾತ್ರೆಯಲ್ಲಿ ಪಾಲ್ಗೊಂಡರು. ದೇವಸ್ಥಾನದ ಮುಂಭಾಗದಲ್ಲಿನ ಹೊಲ, ಗದ್ದೆಗಳನ್ನು ಜಾತ್ರೆ ಅಂಗವಾಗಿ ಹಸನು ಮಾಡಲಾಗಿತ್ತು. ಹೊಲದ ಖಾಲಿ ಜಾಗದಲ್ಲಿ ಸಾವಿರಾರು ಭಕ್ತರು ಟೆಂಟ್‌ಗಳನ್ನು ಹಾಕಿಕೊಂಡು ರಥೋತ್ಸವ ಸಮಯದವರೆಗೂ ಅಲ್ಲೇ ವಾಸವಿದ್ದು, ರಥೋತ್ಸವದಲ್ಲಿ ಪಾಲ್ಗೊಂಡರು. ವಿಶೇಷ ತಿನಿಸುಗಳನ್ನು ದೇವರಿಗೆ ಅರ್ಪಿಸಿ ನಂತರ ತಾವು ಹಾಕಿದ್ದ ಟೆಂಟ್‌ಗಳಲ್ಲಿಯೇ ವಿಶೇಷ ಭೋಜನ ಸವಿದರು.

ಮಡಿವಾಳೇಶ್ವರರ ಕರ್ತೃ ಗದ್ದುಗೆ ಆವರಣದಲ್ಲಿ ಮನರಂಜನಾ ಕ್ರೀಡೆ, ನಾಟಕ ಕಂಪನಿಗಳು, ತಿಂಡಿ ತಿನಿಸುಗಳ ಮಳಿಗೆಗಳು, ಪೂಜಾ ಸಾಮಗ್ರಿಗಳು ಇತ್ಯಾದಿಗಳ ಮಳಿಗೆಗಳು ಇದ್ದವು. ವಿವಿಧ ಊರುಗಳಿಂದ ಬಂದಿದ್ದ ಜನರು ರಥೋತ್ಸವದಲ್ಲಿ ಪಾಲ್ಗೊಂಡು, ನಂತರ ಜಾತ್ರೆಯ ಸವಿಯನ್ನು ಉಂಡರು.ನೆರೆದ ಭಕ್ತ ಸಮೂಹಕ್ಕೆ ಮಠದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಜಾತ್ರೆ ನಿಮಿತ್ತ ಬುಧವಾರ ಹಾಲು ಕರೆಯುವ ಸ್ಪರ್ಧೆಯು ಮಠದ ಆವರಣದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಪಂಚಾಯ್ತಿ, ಪಶುಸಂಗೋಪನಾ ಇಲಾಖೆ ಹಾಗೂ ಎಪಿಎಂಸಿ ಸಹಯೋಗದಲ್ಲಿ ಬೆಳಿಗ್ಗೆ 7ಕ್ಕೆ ಸ್ಪರ್ಧೆ ಜರುಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT