ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಖಲೆ’ಯಲ್ಲಿ ಉದ್ಯಾನ, ಅಭಿವೃದ್ಧಿಗಿಲ್ಲ ಅನುದಾನ

ನಿರ್ವಹಣೆ ಕೊರತೆಯಿಂದ ಸೊರಗಿದ ತಾಣಗಳು, ಜನರ ಬೇಜವಾಬ್ದಾರಿಯೂ ಕಾರಣ
Last Updated 29 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅರೆ ಮಲೆನಾಡು ಧಾರವಾಡ ಜಿಲ್ಲೆ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಇಲ್ಲಿಯ ಪ್ರತಿ ತಾಲ್ಲೂಕುಗಳು ಒಂದೊಂದು ರೀತಿಯ ವಿಭಿನ್ನ ವಾತಾವರಣ ಹೊಂದಿವೆ. ಊರಿನ ಸೌಂದರ್ಯ ಹೆಚ್ಚಿಸಲು, ಜನರ ವಿಶ್ರಾಂತಿಗೆ ನೆರವಾಗಲು ಮತ್ತು ಮಕ್ಕಳಿಗೆ ಆಟವಾಡಲು ಸಾಕಷ್ಟು ಉದ್ಯಾನಗಳು ಜಿಲ್ಲೆಯಲ್ಲಿವೆ ಎನ್ನುವುದು ‘ದಾಖಲೆ’ಗಳಿಗೆ ಮಾತ್ರ ಸೀಮಿತವಾಗಿದೆ.

ಕೆಲವೆಡೆ ’ಇದು ಉದ್ಯಾನದ ಜಾಗ’ ಎನ್ನುವ ನಾಮಫಲಕಗಳು ಗಿಡಗಂಟೆಗಳ ಹಿಂದೆ ಅವಿತುಕೊಂಡಿವೆ. ಹೀಗಾಗಿ ‘ನಿವೃತ್ತರ ಸ್ವರ್ಗ’ ಎನ್ನುವ ಖ್ಯಾತಿ ಹೊಂದಿರುವ ಧಾರವಾಡ ನಗರದಲ್ಲಿ ಉದ್ಯಾನಗಳು ಇದ್ದೂ ಇಲ್ಲದಂತಾಗಿವೆ.

ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 460ಕ್ಕೂ ಹೆಚ್ಚು ಉದ್ಯಾನಗಳಿದ್ದು, ಅಭಿವೃದ್ಧಿ ಹೊಂದಿರುವುದು 100 ಮಾತ್ರ! ಕಾಂಪೌಂಡ್‌ ನಿರ್ಮಾಣವಾಗಿರುವ 174ಕ್ಕೂ ಹೆಚ್ಚು ಉದ್ಯಾನಗಳು ಇವೆ. ಪಾಲಿಕೆ ಉದ್ಯಾನಗಳ ಅಭಿವೃದ್ಧಿಯನ್ನು ಬೇರೆ, ಬೇರೆಯಾಗಿ ವಿಂಗಡಿಸಿದೆ. ಉಳಿದ ಉದ್ಯಾನಗಳ ಜಾಗದಲ್ಲಿ ನಾಮಫಲಕ ಹೊರತುಪಡಿಸಿ ಬೇರೆ ಏನೂ ಇಲ್ಲ. ಕೆಲವೆಡೆ ಉದ್ಯಾನಕ್ಕೆ ಬಿಟ್ಟಿರುವ ಜಾಗ, ರಾಶಿಗಟ್ಟಲೆ ಬಿದ್ದಿರುವ ಕಸ, ಮದ್ಯ ಸೇವಿಸಿ ಬೀಸಾಡಿರುವ ಬಾಟಲಿಗಳು, ಗಾಜಿನ ಚೂರುಗಳು, ಪ್ಲಾಸ್ಟಿಕ್‌ ತ್ಯಾಜ್ಯ, ಬೀದಿ ನಾಯಿಗಳ ಹಾವಳಿ ಮಾತ್ರ ಕಾಣುತ್ತದೆ. ಹುಬ್ಬಳ್ಳಿಯ ತೋಳನಕೆರೆ ಹೋಗುವ ದಾರಿಯ ಉದ್ಯಾನ, ಕಾಳಿದಾಸ ನಗರ, ಹಳೇ ಹುಬ್ಬಳ್ಳಿ ಹೀಗೆ ಕೆಲ ಉದ್ಯಾನಗಳು ಸಂಜೆಯಾಗುತ್ತಿದ್ದಂತೆ ‘ಬಯಲು ಬಾರ್‌’ಗಳಾಗಿ ಬದಲಾಗುತ್ತಿವೆ. ಉದ್ಯಾನಗಳಿಗೆ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಪುಡಾರಿಗಳು ಮಾಡಿದ್ದೇ ಆಟ ಎನ್ನುವಂತಾಗಿದೆ.

ದಿನದಿಂದ ದಿನಕ್ಕೆ ಅವಳಿ ನಗರದ ಜನಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಹೊಸ ಬಡಾವಣೆಗಳಾದಾಗ ಉದ್ಯಾನಕ್ಕೆಂದು ಒಂದಷ್ಟು ಜಾಗವನ್ನು ಬಿಟ್ಟಿರುತ್ತಾರೆ. ಬಡಾವಣೆ ಬೆಳೆದರೂ ಉದ್ಯಾನದ ಜಾಗ ಮಾತ್ರ ಹೊಸ ಮನೆಗಳ ನಡುವೆ ಹಳೇ ಜಾಗವಾಗಿ ಉಳಿದುಕೊಂಡು ಬಿಡುತ್ತಿದೆ.

ಹಸಿರ ಚಾದರ ಹೊದ್ದ ಸುಂದರ ನಗರ, ‌ಏಳು ಬೆಟ್ಟ, ಏಳು ಕರೆ ಊರು, ಶಿಕ್ಷಣ ಕಾಶಿ ಹೀಗೆ ಹಲವಾರು ವಿಶೇಷಣಗಳಿಂದ ಬಣ್ಣಿಸುವ ಧಾರವಾಡದಲ್ಲಿಯೂ ‘ದಾಖಲೆ’ಯಲ್ಲಿ ಮಾತ್ರ ಉದ್ಯಾನಗಳಿವೆ. ನಗರವೊಂದರಲ್ಲೇ 100ಕ್ಕೂ ಹೆಚ್ಚು ಉದ್ಯಾನಗಳಿದ್ದು, ಜನರಿಗೆ ಗೊತ್ತಿರುವುದು ಸುಸಜ್ಜಿತ ನಿರ್ವಹಣೆ ಮಾಡಿರುವುದು ಬೆರಳೆಣಿಕೆಯಷ್ಟು ಮಾತ್ರ. ಉಳಿದವುಗಳಿಗೆ ನಿರ್ವಹಣೆ ಭಾಗ್ಯವಿಲ್ಲ. ಇನ್ನೂ ಕೆಲವಷ್ಟು ಉದ್ಯಾನಗಳು ಎಲ್ಲಿವೆ ಎನ್ನುವುದು ಜನರಿಗೆ ಗೊತ್ತೇ ಇಲ್ಲ.

ಧಾರವಾಡದ ಜನರಿಗೆ ಆಜಾದ್‌ ಪಾರ್ಕ್‌, ಕೆ.ಸಿ. ಪಾರ್ಕ್‌, ಸಾಧನಕೇರಿ ಉದ್ಯಾನ ಹೊರತುಪಡಿಸಿದರೆ ಬಹಳಷ್ಟು ಉದ್ಯಾನಗಳ ಬಗ್ಗೆ ಮಾಹಿತಿಯಿಲ್ಲ. ಪರಿಸರ ಭವನ, ನಾರಾಯಣಪುರ, ರಜತಗಿರಿ, ಎಂ.ಆರ್. ನಗರ ಹೀಗೆ ಹಲವು ಉದ್ಯಾನಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

ಅಣ್ಣಿಗೇರಿಯಲ್ಲಿ ಒಟ್ಟು 25 ಉದ್ಯಾನಗಳಿದ್ದು ಒಂದು ಮಾತ್ರ ನಿರ್ವಹಣೆ ಮಾಡಲಾಗುತ್ತಿದೆ. ಮಕ್ಕಳ ಸಂಭ್ರಮಕ್ಕೆ, ಜನರ ನೆಮ್ಮದಿಗೆ ತಾಣವಾಗಬೇಕಿದ್ದ ಉಳಿದ ಉದ್ಯಾನಗಳಲ್ಲಿ ಮುಳ್ಳು ಕಂಟೆಗಳು ತುಂಬಿಕೊಂಡಿವೆ. ಉದ್ಯಾನಕ್ಕೆ ನಿರ್ಮಿಸಿದ್ದ ಕಾಂಪೌಂಡ್‌, ಗೇಟ್‌ ಮತ್ತು ವಿದ್ಯುತ್‌ ದೀಪಗಳನ್ನು ಪುಡಾರಿಗಳು ಹಾಳುಗೆಡವಿದ್ದಾರೆ.

‘ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಂದು ಸಲ ಸುಂದರ ಉದ್ಯಾನ ನಿರ್ಮಿಸಿಕೊಡಬಹುದು. ಅದನ್ನು ಜನರೇ ಹಾಳು ಮಾಡಿದರೆ ಹೇಗೆ; ಉದ್ಯಾನಗಳ ನಿರ್ವಹಣೆಯಲ್ಲಿ ಜನರ ಜವಾಬ್ದಾರಿಯೂ ಮುಖ್ಯವಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಎಫ್‌.ಕಟಗಿ ಅಳಲು ತೋಡಿಕೊಂಡರು. ಪುರಸಭೆ ಆಡಳಿತಾಧಿಕಾರಿ ಜೊತೆ ಚರ್ಚಿಸಿ ಉದ್ಯಾನಗಳ ಅಭಿವೃದ್ಧಿ ಮಾಡಲಾಗುವುದು ಎಂದೂ ಭರವಸೆ ನೀಡಿದರು.

ಜಿಲ್ಲೆಯ ಹೊಸ ತಾಲ್ಲೂಕು ಮಲೆನಾಡ ಸೆರಗಿನ ಸುಂದರ ತಾಣ ಅಳ್ನಾವರದಲ್ಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡು ಹಾಗೂ ಅರಣ್ಯ ಇಲಾಖೆಯ ಒಂದು ಉದ್ಯಾನಗಳಿವೆ. ಹಳೆ ಊರು, ನೆಹರೂ ನಗರ ಹಾಗೂ ಇಂದಿರ ನಗರದಲ್ಲಿ ಉದ್ಯಾನ ನಿರ್ಮಾಣಕ್ಕೆ ಜಾಗವೇ ಇಲ್ಲ. ಹೊರ ವಲಯದ ಎಂ.ಸಿ. ಪ್ಲಾಟ್ ಬಡಾವಣೆಯಲ್ಲಿ ಸುಂದರ ಉದ್ಯಾನವಿದ್ದು, ಮಕ್ಕಳಿಗಾಗಿ ಆಟಿಕೆ ಸಾಮಗ್ರಿಗಳು ಕೂಡ ಇವೆ. ಉದ್ಯಾನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ವೇದಿಕೆ ನಿರ್ಮಿಸಲಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲಾಗುವುದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ಹೇಳುತ್ತಾರೆ.

ಕಲಘಟಗಿ ಪಟ್ಟಣದಲ್ಲಿ ಎಂಟು ಬಂಡಿ ಪ್ಲಾಟ್, ಅಣವೇಕರ ಪ್ಲಾಟ್ ಮತ್ತು ಚಿಂತಾಮಣಿ ಪ್ಲಾಟ್‌ನಲ್ಲಿ ಉದ್ಯಾನಗಳಿದ್ದು, ಮುಳ್ಳು ಕಂಟಿ, ಅಸ್ವಚ್ಛತೆ, ಪಾಳು ಬಿದ್ದ ಸ್ಥಿತಿ ನಿಮ್ಮನ್ನು ಸ್ವಾಗತಿಸುತ್ತದೆ. ಉದ್ಯಾನದಲ್ಲಿರುವ ಜೋಕಾಲಿ, ವಿದ್ಯುತ್ ಕಂಬಗಳು, ಕುಳಿತುಕೊಳ್ಳುವ ಆಸನಗಳು ನಿರ್ವಹಣೆಯನ್ನು ಎದುರು ನೋಡುತ್ತಿವೆ.

ಕುಂದಗೋಳದಲ್ಲಿ ಐದು ಉದ್ಯಾನಗಳಿದ್ದು ರೇವಣಸಿದ್ದೇಶ್ವರ ಹಾಗೂ ಗುಮ್ಮಗೋಳ ಪ್ಲಾಟ್‌ನ ಉದ್ಯಾನಗಳು ಸುಂದರವಾಗಿವೆ. ಉಳಿದವುಗಳಲ್ಲಿ ತ್ಯಾಜ್ಯವಿದ್ದರೆ, ಅತಿಕ್ರಮಣದ ಆರೋಪವೂ ಕೇಳಿ ಬಂದಿದೆ. ಉಳಿದ ಈ ಮೂರು ಉದ್ಯಾನಗಳ ಅಭಿವೃದ್ಧಿಗೆ ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ ಗೋಂದಕರ ತಿಳಿಸಿದರು.

ನವಲಗುಂದದಲ್ಲಿ 20 ಲೇಔಟ್‌ಗಳಲ್ಲಿ ಉದ್ಯಾನಗಳ ನಿರ್ಮಾಣಕ್ಕೆ ಮಂಜೂರಾತಿ ಲಭಿಸಿದ್ದು, ಚನ್ನಮ್ಮನ ಜಲಾಶಯದ ಮುಂದೆ ನಿರ್ಮಿಸಿರುವ ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ನೀಲಮ್ಮನ ಕೆರೆಯ ಮೇಲೆ ಉದ್ಯಾನ ನಿರ್ಮಿಸಿದ್ದರೂ, ನಿರ್ವಹಣೆ ಕೊರತೆ ಕಾಡುತ್ತಿದೆ. ಜೋಶಿ, ಮುದಿಗೌಡರ ಪ್ಲಾಟ್‌ಗಳಲ್ಲಿ ಮತ್ತು ನಂದಿ ಲೇ ಔಟ್‌ನಲ್ಲಿ ಉದ್ಯಾನ ನಿರ್ಮಾಣಕ್ಕೆ 2019–20ನೇ ಸಾಲಿನ ಅನುದಾನ ಮೀಸಲಿಡಲಾಗಿದ್ದು, ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎನ್ನುವುದು ಪುರಸಭೆ ಮುಖ್ಯಾಧಿಕಾರಿ ನಬೀಸಾಬ ಖುದಾನವರ ಹೇಳಿಕೆ.

ಸುಂದರ ಉದ್ಯಾನಗಳೂ ಇವೆ

ಉದ್ಯಾನಗಳ ಅಭಿವೃದ್ಧಿಯೇ ಇಲ್ಲ ಎನ್ನುವ ಬೇಸರದ ನಡುವೆಯೂ ಜಿಲ್ಲೆಯಲ್ಲಿ ಒಂದಷ್ಟು ಒಳ್ಳೆಯ ಉದ್ಯಾನಗಳು ಪ್ರವಾಸಿ ತಾಣಗಳಂತಿವೆ. ಹುಬ್ಬಳ್ಳಿಯ ಕುಂಬಕೋಣಂ ಪ್ಲಾಂಟ್‌, ನೃಪತುಂಗ ಬೆಟ್ಟದ ಉದ್ಯಾನ, ಉಣಕಲ್ ಕೆರೆ ಪಾರ್ಕ್‌, ಲಿಂಗರಾಜ ನಗರ, ಇಂದಿರಾ ಗ್ಲಾಸ್‌ ಹೌಸ್‌, ಅರ್ಜುನ ವಿಹಾರ ಹೀಗೆ ಅನೇಕ ಸುಂದರ ತಾಣಗಳು ಜನರನ್ನು ಕೈ ಬೀಸಿ ಕರೆಯುತ್ತವೆ. ವಾಣಿಜ್ಯ ನಗರಿಯ ಜನರಿಗೆ ಇವು ಅಚ್ಚುಮೆಚ್ಚು ಕೂಡ ಆಗಿವೆ.

ಕುಂಭಕೋಣ ಪ್ಲಾಂಟ್‌ನ ಉದ್ಯಾನ ಸದಾ ಹಸಿರಿನಿಂದ ಕಂಗೊಳಿಸುತ್ತದೆ. ಓಪನ್‌ ಜಿಮ್‌ ಇದೆ. ಜಿಮ್ ನಿರ್ವಹಣೆಗಾಗಿ ಉದ್ಯಾನ ನಿರ್ವಹಣೆ ಮಾಡುವವರೇ ತಿಂಗಳಿಗೆ ಒಂದಷ್ಟು ಶುಲ್ಕ ಸಂಗ್ರಹಿಸುತ್ತಾರೆ. ಹೈ ಮಾಸ್ಟ್, ಸೌರಶಕ್ತಿ ದೀಪಗಳು ಮತ್ತು ಕಾಂಪೌಂಡ್ ಇರುವುದರಿಂದ ಪುಂಡರ ಹಾವಳಿಗೆ ಅವಕಾಶವಿಲ್ಲ. ಕಾಯಂ ಆಗಿ ಭದ್ರತಾ ಸಿಬ್ಬಂದಿ ಇರುವುದು ಉದ್ಯಾನದ ಅಂದ ಹೆಚ್ಚಲು ಕಾರಣವಾಗಿದೆ.

ಧಾರವಾಡದ ರಜತಗಿರಿ, ನಾರಾಯಣಪುರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಸುಂದರ ಉದ್ಯಾನಗಳಿವೆ. ಸ್ಥಳೀಯ ನಿವಾಸಿಗಳು ಸೇರಿ ಮಾಡಿಕೊಂಡ ಸಂಘದಿಂದ ಉದ್ಯಾನಗಳಲ್ಲಿ ಹಸಿರು ನಳನಳಿಸುತ್ತಿದೆ.

ಅನುದಾನ ಕೊರತೆಯಿಂದ ಸಮಸ್ಯೆ: ಇಟ್ನಾಳ

ಅವಳಿ ನಗರಗಳಲ್ಲಿರುವ ಉದ್ಯಾನಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಸಾಕಷ್ಟು ಹಣಬೇಕಾಗುತ್ತದೆ. ಹಣಕಾಸು ಯೋಜನೆಯಲ್ಲಿ ಪ್ರತಿವರ್ಷ ಸಿಗುವ ಸುಮಾರು ₹5 ಕೋಟಿ ಸಾಕಾಗುವುದಿಲ್ಲ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದರು.

’ಅರಣ್ಯ ಇಲಾಖೆ ಅನುದಾನದಲ್ಲಿ ಧಾರವಾಡದಲ್ಲಿ ಎರಡು ಟ್ರಿ ಪಾರ್ಕ್‌ ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಹುಬ್ಬಳ್ಳಿಯ ತೋಳನಕೆರೆ ಸಮೀಪ ಉದ್ಯಾನ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಅನುದಾನ ಪಡೆದು 100 ಉದ್ಯಾನಗಳನ್ನು ಅಭಿವೃದ್ಧಿ ಮಾಡಲು ಕೋವಿಡ್‌ ಪೂರ್ವದಲ್ಲಿ ಡಿಪಿಆರ್‌ ಸಿದ್ಧಪಡಿಸಲಾಗಿತ್ತು. ಕೋವಿಡ್‌ ಬಂದ ಕಾರಣ ಇದು ಸಾಧ್ಯವಾಗಲಿಲ್ಲ. ಇದನ್ನು ಈಗ ಕಾರ್ಯರೂಪಕ್ಕೆ ತರುತ್ತೇವೆ‘ ಎಂದರು.

* ಹೆಸರಿಗೆ ಮಾತ್ರ ಆಕಾಶ ಪಾರ್ಕ್‌. ಒಳಗೆ ನೋಡಿದರೆ ಮುಳ್ಳು ಕಂಟೆ, ಕಸದ ರಾಶಿ ಕಾಣುತ್ತದೆ. ತುಂಬಿ ಹರಿಯುವ ಒಳಚರಂಡಿ ಟ್ಯಾಂಕ್‌ನ ದರ್ಶನವಾಗುತ್ತದೆ.
- ಸುರೇಶ ಬಾರಕೇರ, ಅಣ್ಣಿಗೇರಿ ನಿವಾಸಿ

* ಕಲಘಟಗಿ ಎಂಟು ಬಂಡಿ ಪ್ಲಾಟ್‌ನಲ್ಲಿರುವ ಉದ್ಯಾನ 7 ವರ್ಷಗಳಿಂದ ಅಭಿವೃದ್ಧಿ ಹಾಗೂ ನಿರ್ವಹಣೆ ಇಲ್ಲದೆ ಸೊರಗಿದೆ. ಇನ್ನು ಮುಂದಾದರೂ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
-ಸುನೀಲ ಕಮ್ಮಾರ, ಸ್ಥಳೀಯ ನಿವಾಸಿ

* ಹುಬ್ಬಳ್ಳಿಯ ತೋಳನಕೆರೆ, ಎಂ.ಜಿ. ಪಾರ್ಕ್‌ ಮತ್ತು ಉಣಕಲ್ ಕೆರೆಯ ಉದ್ಯಾನಗಳನ್ನು ಸ್ಮಾರ್ಟ್‌ಸಿಟಿಯಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ. ಉಳಿದವುಗಳನ್ನು ಮಹಾನಗರ ಪಾಲಿಕೆ ನೋಡಿಕೊಳ್ಳುತ್ತದೆ.
-ಎಚ್‌.ಎಸ್‌. ನರೇಗಲ್‌, ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ವಿಶೇಷಾಧಿಕಾರಿ

ಪ್ರಜಾವಾಣಿ ತಂಡ: ಪ್ರಮೋದ, ಶಿವಕುಮಾರ ಹಳ್ಯಾಳ, ಅಶೋಕ ಘೋರ್ಪಡೆ, ಚರಂತಯ್ಯ ಹಿರೇಮಠ, ರಾಜಶೇಖರ ಸುಣಗಾರ, ಕಲ್ಲಪ್ಪ ಮಿರ್ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT